Lokayukta Raid: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಚನ್ನಗಿರಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ತೀವ್ರ ಶೋಧ

ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮಾಡಾಳ್ ಬೆಂಗಳೂರಿನಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಚನ್ನಗಿರಿಯ ಚನ್ನೇಶಪುರದ ಮಾಡಾಳ್ ವಿರೂಪಾಕ್ಷಪ್ಪರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ದಾವಣಗೆರೆ, ಮಾರ್ಚ್ 3: ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮಾಡಾಳ್ ಬೆಂಗಳೂರಿನಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯಿನಿಕ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಚನ್ನೇಶಪುರದ ಮಾಡಾಳ್ ವಿರೂಪಾಕ್ಷಪ್ಪರ ಮನೆಯ ಮೇಲೆ ದಾಳಿ ನಡೆಸಿದ್ದು ಶೋಧ ಮುಂದುವರಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರು, ಸ್ಥಳೀಯ ಪೊಲೀಸರಿಗೂ ಮೊದಲು ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.

Lokayukta Raid On Madal Virupakshappa House at Channagiri

ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮಾಡಾಳ್‌ಗೆ ಸಂಬಂಧಿಸಿದಂತೆ ಆಸ್ತಿ ಪತ್ರಗಳ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೋಟಿಗಟ್ಟಲೇ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ನಿವಾಸದಲ್ಲಿ ಕೂಡ ತೀವ್ರ ಶೋಧ ಮುಂದುವರಿಸಲಾಗಿದೆ.

ಚನ್ನಗಿರಿ, ದಾವಣಗೆರೆ ಸುತ್ತಮುತ್ತ ಸೇರಿದಂತೆ ಹಲವೆಡೆ ಆಸ್ತಿ ಖರೀದಿ ಮಾಡಲಾಗಿದ್ದು, ಈ ಕುರಿತಾಗಿಯೂ ದಾಖಲಾತಿ ಸಿಗಬಹುದು, ಮನೆಯಲ್ಲಿ ಹಣ ಇರುವ ಶಂಕೆ ಇರುವ ಕಾರಣಕ್ಕೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದ್ದಾರೆ. ಸುಮಾರು ಐದಾರು ಗಂಟೆಗಳ ಕಾಲ ತೀವ್ರ ಪರಿಶೀಲನೆ ನಡೆಸಲಾಗಿದ್ದು, ಮನೆಯಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದೆ. ಆದರೆ ಈ ವೇಳೆ ಏನೆಲ್ಲಾ ಮಾಹಿತಿ ಸಿಕ್ಕಿದೆ ಎನ್ನುವುದರ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿಲ್ಲ.

ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಈ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆ. ಮಾತ್ರವಲ್ಲ, ಮನೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಹಿರಿಯ ಪುತ್ರ ಮಲ್ಲಿಕಾರ್ಜುನ್ ಸಹ ಇರಲಿಲ್ಲ. ರಾತ್ರಿಯೇ ಲೋಕಾಯುಕ್ತ ಪೊಲೀಸರು

ದಾಳಿ ಮಾಡಿದ್ದರೆ ಮತ್ತಷ್ಟು ವಿಚಾರ ಬಯಲಿಗೆ ಬರುವ ಸಾಧ್ಯತೆ ಇತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿ ತಲಾಶ್ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಚನ್ನಗಿರಿಯ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳ ಜೊತೆಗೆ ದಾಳಿ ನಡೆಸಿದ್ದು, ದಾಖಲೆಗಳ ಬಗ್ಗೆ ರಾಜ್ಯ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಆ ಬಳಿಕವೇ ಸ್ಪಷ್ಟತೆ ಹೊರಗೆ ಬರಲಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು, ಬೆಂಗಳೂರಿನಲ್ಲಿ ದಾಳಿ ನಡೆದ ಸ್ವಲ್ಪ ಸಮಯದವರೆಗೆ ಮೊಬೈಲ್ ಆನ್ ಮಾಡಿಕೊಂಡಿದ್ದರು. ಲೋಕಾಯುಕ್ತರಿಗೆ ಕೋಟಿಗಟ್ಟಲೆ ಹಣ ಪತ್ತೆಯಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Lokayukta Raid On Madal Virupakshappa House at Channagiri

ಮಾಡಾಳ್ ವಿರೂಪಾಕ್ಷಪ್ಪ ತನ್ನ ಹಿರಿಯ ಪುತ್ರ ಮಲ್ಲಿಕಾರ್ಜುನ್ ಜೊತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪರ ಹೆಸರು ಸೇರಿಸಿರುವ ಕಾರಣದಿಂದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಚನ್ನಗಿರಿ, ದಾವಣಗೆರೆಯಲ್ಲಿ ಪ್ರಶಾಂತ್ ಮಾಡಾಳ್ ವಿವರ

ಪ್ರಶಾಂತ್ ಮಾಡಾಳ್ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಚನ್ನಗಿರಿ, ದಾವಣಗೆರೆ ಸುತ್ತಮುತ್ತ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿರುವ ಕುರಿತಂತೆ ಲೋಕಾಯುಕ್ತ ಪೊಲೀಸರಿಗೆ ಅನುಮಾನ ಬಂದಿದ್ದು, ಈ ಕುರಿತಾಗಿಯೂ ತನಿಖೆ ಮುಂದುವರಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 2013ರಲ್ಲಿ ಅಕ್ರಮವಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಪುತ್ರ ಮಲ್ಲಿಕಾರ್ಜುನ್, ಸೊಸೆ ಸುಧಾರಾಣಿ ಹಾಗೂ ಪ್ರವೀಣ್ ಕುಮಾರ್ ಅವರ ಹೆಸರಿನಲ್ಲಿ ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದಿದ್ದರು ಎನ್ನುವ ಆರೋಪವಿದ್ದು, ಈ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಾಡಾಳ್ ವಿರೂಪಾಕ್ಷಪ್ಪರ ನಿವಾಸದಲ್ಲಿ ನೀರವ ಮೌನ

ಯಾವಾಗಲೂ ರಾಜಕೀಯ ಚಟುವಟಿಕೆಗಳಿಂದ ಸದಾ ಗಿಜಿಗುಡುತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮಾಡಾಳ್ ಮಲ್ಲಿಕಾರ್ಜುನ್ ಮುಂದಿನ ವಿಧಾನಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಬೆಳವಣಿಗೆಯಿಂದ ಅವರು ಸಹ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದ್ದು, ತಂದೆ ಜೊತೆ ಬೆಂಗಳೂರಿಗೆ ತೆರಳಿದ್ದು, ಫೋನ್‌ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಆಪ್ತರು ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ ಅವರ ಕುಟುಂಬದ ಮೇಲೆ ಬಹುದೊಡ್ಡ ಆರೋಪ ಬಂದಿದ್ದು, ತನಿಖೆಯಿಂದ ಸಂಪೂರ್ಣ ಮಾಹಿತಿ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+