ದಾವಣಗೆರೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು: ಸಿಕ್ಕ ಹಣ, ಒಡವೆ ಎಷ್ಟು ಗೊತ್ತಾ?
ದಾವಣಗೆರೆ, ಆಗಸ್ಟ್, 17: ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾಗೆಯೇ ದಾವಣಗೆರೆಯ ಜಿಲ್ಲೆಯ ಚನ್ನಗಿರಿಯ ಆರ್‌ಎಫ್‌ಒ ಸತೀಶ್ ನಿವಾಸ, ಬಿಬಿಎಂಪಿಯಲ್ಲಿ ಎಇಇ ಆಗಿ ಕೆಲಸ ನಿರ್ವಹಿಸುತ್ತಿರುವ ಹೆಚ್.ಭಾರತಿ ಅವರ ದಾವಣಗೆರೆಯ ಜಯನಗರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಇನ್ನು ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆ.ಮಹೇಶ್ ಹಾಗೂ ಹೆಚ್.ಭಾರತಿ ದಂಪತಿಗೆ ಸೇರಿದ ಮನೆಯಲ್ಲಿ ಒಂದು ಕೆ.ಜಿ.ಬಂಗಾರ, 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಭಾರತಿ ಅವರು ದಾವಣಗೆರೆಯಲ್ಲಿಯೂ ಆಸ್ತಿ ಮಾಡಿರುವ ಕುರಿತಂತೆ ಮಾಹಿತಿ ಇದ್ದು, ಈ ಕುರಿತಂತೆ ಕೆಲ ದಾಖಲಾತಿಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಈ ವಿಚಾರ ದೃಢಪಡಿಸಿಲ್ಲ.

ಬೆಳಗ್ಗೆ 6 ಗಂಟೆಗೆ ಎರಡು ತಂಡಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಭಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ದಾಳಿಗೊಳಗಾದ ಆರ್‌ಎಫ್‌ಒ ಸತೀಶ್ ಭದ್ರಾವತಿ ಅರಣ್ಯ ಇಲಾಖೆಯ ಚನ್ನಗಿರಿಯ ವಲಯ ಅರಣ್ಯಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 6 ವರ್ಷಗಳಿಂದಲೂ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಹೊಳಲ್ಕೆರೆಗೆ ವರ್ಗಾವಣೆಯಾಗಿದ್ದರು. ಇಂದು ಹೊಳಲ್ಕೆರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ನಗದು ಹಾಗೂ ಬಂಗಾರ, ಆಸ್ತಿಗೆ ಸಂಬಂಧಿತ ಪತ್ರಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಆಪ್ತ ವಲಯದಲ್ಲಿ ಆರ್‌ಎಫ್‌ಒ ಸತೀಶ್ ಗುರುತಿಸಿಕೊಂಡಿದ್ದರು. ಅಲ್ಲದೆ ಮಾಡಾಳ್ ವಿರೂಪಾಕ್ಷಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಗಿರಿಯಿಂದ ಸ್ಪರ್ಧೆ ಮಾಡಿರಲಿಲ್ಲ. ಬದಲಾಗಿ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಈ ಹಿನ್ನೆಲೆ ಹೊಳಲ್ಕೆರೆಗೆ ವರ್ಗಾವಣೆ ತೆಗೆದುಕೊಂಡು ಹೋಗುತ್ತಿದ್ದರೋ ಅಥವಾ ಇಲಾಖೆಯೇ ವರ್ಗಾವಣೆ ಮಾಡಿತ್ತೋ ಎಂಬುದು ಸ್ಪಷ್ಟವಾಗಿಲ್ಲ.
ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದೆ. ಚಿತ್ರದುರ್ಗ, ದಾವಣಗೆರೆ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಬೇಟೆಯಾಡಿದ್ದಾರೆ.
ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಕೆ.ಮಹೇಶ್ ಪತ್ನಿ ಬಿಬಿಎಂಪಿ ಎಇಇ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆಯ ಜಯನಗರದಲ್ಲಿರುವ ಮಹೇಶ್ ಅವರ ಮನೆ ಬಾಗಿಲನ್ನು ಬೆಳಗ್ಗೆಯೇ ತಟ್ಟಿದ್ದು, ಅಧಿಕಾರಿಗಳನ್ನು ನೋಡಿ ಮನೆಯಲ್ಲಿದ್ದವರು ಶಾಕ್ ಆಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ, ಬೆಂಗಳೂರಿನ ಬಿಬಿಎಂಪಿ ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್, ಡಿವೈಎಸ್‌ಪಿ ಮೃತ್ಯುಂಜಯ ನೇತೃತ್ವದಲ್ಲಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications