Madal Virupakshappa : ಮಾಡಾಳ್ ವಿರೂಪಾಕ್ಷಪ್ಪರನ್ನು ಇನ್ನೆರಡು ದಿನಗಳಲ್ಲಿ ಬಂಧಿಸಿ: ಕೆಆರ್‌ಎಸ್ ಪಕ್ಷ ಎಚ್ಚರಿಕೆ
ದಾವಣಗೆರೆ, ಮಾರ್ಚ್, 05: ಲೋಕಾಯುಕ್ತ ಬಲೆಗೆ ಬಿದ್ದ ಪ್ರಶಾಂತ್ ಮಾಡಾಳ್ ಪ್ರಕರಣದಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಇನ್ನೆರಡು ದಿನಗಳಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ದಾವಣಗೆರೆಯಲ್ಲಿ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷ ಬಿ. ಸೋಮಶೇಖರ್ ಅವರು, ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಮಗ ಪ್ರಶಾಂತ್ ಮಾಡಾಳ್ ಕೆ.ಎಸ್.ಡಿ.ಎಲ್.ನ ಟೆಂಡರ್ ನೀಡಲು ಕೋಟ್ಯಂತರ ರೂಪಾಯಿ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮಾಡಿ ಜನದ್ರೋಹಿ, ದೇಶದ್ರೋಹ ಕೆಲಸ ಮಾಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

1.20 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ
ಗುತ್ತಿಗೆದಾರರಿಂದ 1.20 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 81 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡು ಮೊದಲನೇ ಕಂತಾಗಿ 40 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಖಾಸಗಿ ಕಚೇರಿಯಲ್ಲಿ 2.2 ಕೋಟಿ ಹಣ ಪತ್ತೆಯಾಗಿದೆ. ಮತ್ತು ಮನೆಯಲ್ಲೂ ಶೋಧ ನಡೆಸಿದಾಗ ಅಲ್ಲಿಯೂ ಸಹ 4 ಕೋಟಿ 30 ಲಕ್ಷ ರೂಪಾಯಿ ಪತ್ತೆಯಾಗಿದೆ.
ಹಾಗೆಯೇ ಚಿನ್ನಾಭರಣವೂ ಕೂಡ ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿದ್ದು, ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಹಗರಣದಲ್ಲಿ ಮುಳುಗಿದೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಶೇಕಡಾ 40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪ ಮಾಡಿತ್ತು. ಈಗ ಶಾಸಕರ ಪುತ್ರನ ಬಳಿ ಕೋಟ್ಯಂತರ ಹಣ ಪತ್ತೆಯಾಗಿದ್ದು, ಬಿಜೆಪಿ ಹಗರಣದಲ್ಲಿ ಮುಳುಗಿದೆ ಎನ್ನುವುದು ಸಾಭೀತಾದಂತಾಗಿದೆ. ಆದರೆ ಇದೀಗ ಹಗರಣದ ಜನಸಂಕಲ್ಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೈತಿಕ ಹೊಣೆಹೊತ್ತು ಕೂಡಲೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜನಸಾಮಾನ್ಯರಿಗೆ ಒಂದು ಕಾನೂನು, ಶಾಸಕರಿಗೊಂದು ಕಾನೂನು ಆಗಿದೆ. ಇನ್ನೆರಡು ದಿನಗಳಲ್ಲಿ ಬಂಧಿಸಬೇಕು. ಹಾಗೆಯೇ ಈ ಪ್ರಕರಣವನ್ನು ಇ.ಡಿ.ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಮಲ್ಲಪ್ಪ, ವೀರಭದ್ರಪ್ಪ, ಕರಿಬಸಪ್ಪ, ಟಿ. ಅಜ್ಜೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications