Lok Sabha Election 2024: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿಲ್ಲ ಯಾಕೆ?-ಮಾಹಿತಿ, ವಿವರ
ದಾವಣಗೆರೆ, ಮಾರ್ಚ್, 10: ನವದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಸಿ.ವೇಣುಗೋಪಾಲ್ ಅವರು ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆದರೆ ಮೊದಲ ಪಟ್ಟಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಘೋಷಣೆ ಮಾಡಿಲ್ಲ. ಹಾಗಾದರೆ ಯಾರನ್ನು ಘೋಷಣೆ ಮಾಡರುವ ನಿರೀಕ್ಷೆಯಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ಯುವ ಕಾಂಗ್ರೆಸ್ ನಾಯಕ ಜಿ.ಬಿ.ವಿನಯ್ ಕುಮಾರ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

ಸಿಂಗಲ್ ಹೆಸರಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ, ದಾವಣಗೆರೆ ಹೆಸರು ಇಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ಈ ಬಾರಿ ಎಐಸಿಸಿ ತಂತ್ರಗಾರಿಕೆ ರೂಪಿಸಿದೆ. ಪ್ರತಿಷ್ಠೆಯಾಗಿ ಸ್ವೀಕರಿಸುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಅಳೆದು ತೂಗಿ ಟಿಕೆಟ್ ನೀಡಲು ನಿರ್ಧರಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ನಡುವೆ ಟಿಕೆಟ್ ಪಡೆಯಲು ನೇರ ಹಣಾಹಣಿ ಏರ್ಪಟ್ಟಿದೆ.
ದಾವಣಗೆರೆ ಜಿಲ್ಲೆಯಾದಾಗಿನಿಂದಲೂ ಇದುವರೆಗೆ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ದಕ್ಕಿಲ್ಲ. ಈ ಬಾರಿ ಡಾ.ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ವಿನಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಚಿತ ಎಂದು ದೆಹಲಿಯ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೆ, ವಿನಯ್ ಕುಮಾರ್ ಅವರೂ ಸಹ ಟಿಕೆಟ್ ಗಿಟ್ಟಿಸಲು ಭಾರೀ ಪ್ರಯತ್ನ ಮುಂದುವರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಪರ ಒಲವು ಇದೆ. ಸಿದ್ದರಾಮಯ್ಯ ಅವರು ಕೊಪ್ಪಳ, ಮೈಸೂರು ಹಾಗೂ ದಾವಣಗೆರೆಯಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ಮನವಿಯನ್ನು ಹೈಕಮಾಂಡ್‌ಗೆ ಮಾಡಿದ್ದಾರೆ. ಇನ್ನು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಸಮಾಜ ಸೇವೆ, ಆರೋಗ್ಯ ಶಿಬಿರ, ಉಚಿತ ತಪಾಸಣಾ ಶಿಬಿರ, ಕ್ಯಾನ್ಸರ್ ಬಗ್ಗೆ ಜಾಗೃತಿ, ಬಡವರಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದಿರುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಅದೇ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕೆಲಸ ಮಾಡಿರುವ ಹಾಗೂ ಪಾದಯಾತ್ರೆ ಮೂಲಕ ಜಿಲ್ಲೆಯ ಜನರ ಮನೆಮಾತಾಗಿರುವ ವಿನಯ್ ಕುಮಾರ್ ಅವರ ಹೆಸರು ಸಹ ಅಷ್ಟೇ ಪ್ರಬಲವಾಗಿ ಕೇಳಿ ಬರತೊಡಗಿದೆ.
ಚನ್ನಯ್ಯ ಒಡೆಯರ್ ಅವರು ಮೂರು ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು ಬಿಟ್ಟರೆ, ಉಳಿದಂತೆ ಸಾದು ಲಿಂಗಾಯತ ಸಮಾಜದವರೇ ಸಂಸದರಾಗಿರುವುದು ವಿಶೇಷ. ಚಿತ್ರದುರ್ಗ-ದಾವಣಗೆರೆ ಲೋಕಸಭಾ ಕ್ಷೇತ್ರ ಇದ್ದಾಗಲೂ ಕಾಂಗ್ರೆಸ್‌ನಿಂದ ಲಿಂಗಾಯತ ಸಮುದಾಯದವರನ್ನು ಹೊರತುಪಡಿಸಿದಂತೆ ಚನ್ನಯ್ಯ ಒಡೆಯರ್ ಮಾತ್ರ ಎಂಪಿ ಆಗಿದ್ದರು. ಒಟ್ಟಾರೆ ಲೋಕಸಭಾ ಕ್ಷೇತ್ರದ ಇತಿಹಾಸ ಗಮನಿಸಿದರೆ ಆರು ಬಾರಿ ಕಾಂಗ್ರೆಸ್ ಹಾಗೂ ಆರು ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಗೆಲ್ಲುತ್ತಾರೆ ಎಂಬುದೇ ಕದನ ಕುತೂಹಲ.
ಪಾದಯಾತ್ರೆ ಯಶಸ್ಸು: ವಿನಯ್ ಕುಮಾರ್ ಅವರ ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಚನ್ನಗಿರಿ, ಜಗಳೂರು, ಹರಪನಹಳ್ಳಿ, ದಾವಣಗೆರೆ, ಹೊನ್ನಾಳಿ, ಹರಿಹರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ವಿನಯ್ ಕುಮಾರ್ ಅವರ ಪರ ಒಲವು ಇದೆ. ಯಾಕೆಂದರೆ ವಿನಯ್ ಕುಮಾರ್ ಇನ್ನೂ ಯುವಕರು. ಶಿಕ್ಷಣ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ ಜನರ ಮಾತಾಗಿದ್ದಾರೆ ಎಂಬ ಚರ್ಚೆ ಆಗುತ್ತಿದೆ.
ಇನ್ನು ಅವರು ಎಲ್ಲಾ ಸಮುದಾಯದವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದ್ದಾರೆ. ಹಾಗಾಗಿ, ಯುವಕರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟವಾಗದು. ಎಸ್.ಎಸ್.ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದ ಸಿಕ್ಕರೆ, ಅಹಿಂದ ಮತ ಕಾಂಗ್ರೆಸ್‌ಗೆಗೆ ಬಿದ್ದರೆ ವಿನಯ್ ಕುಮಾರ್ ಗೆಲುವು ಕಷ್ಟವಾಗದು ಎಂಬ ವಿಶ್ಲೇಷಣೆಗೂ ನಡೆಯುತ್ತಿವೆ. ಹಾಗಾಗಿ, ವಿನಯ್ ಕುಮಾರ್ ಹೆಸರು ಹೈಕಮಾಂಡ್ ಮಟ್ಟದಲ್ಲಿ ತುಂಬಾನೇ ಚರ್ಚೆಯಾಗುತ್ತಿದೆ.
ಸಮಾಜ ಸೇವೆ: ವಿನಯ್ ಕುಮಾರ್ ಪಾದಯಾತ್ರೆ, ಕಾರ್ಯಕ್ರಮಗಳು, ಅಂಗವಿಕಲರು, ಆಟೋ ಚಾಲಕರು, ಆಟೋ ಚಾಲಕರ ಮಕ್ಕಳಿಗೆ ಸಹಾಯ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪೀಠೋಪಕರಣ, ಶೂ, ಸಹಾಯ ಹಸ್ತ, ಸಂಘ ಸಂಸ್ಥೆಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಮಾಜ ಸೇವೆಯಲ್ಲಿಯೂ ಮುಂದಿದ್ದಾರೆ. ರಾಜಕೀಯದಲ್ಲಿ ಚತುರತೆಯ ಮಾತು ಆಡುತ್ತಾರೆ. ಅಲ್ಲದೆ, ತಂತ್ರಗಾರಿಕೆ ರೂಪಿಸುವುದರಲ್ಲಿ ನಿಪುಣರು. ಸಂಘಟನೆಯ ಶಕ್ತಿ ಇರುವ ಕಾರಣಕ್ಕೆ ಬಿಜೆಪಿ ಮಣಿಸಲು ಕಾಂಗ್ರೆಸ್ ಹೈಕಮಾಂಡ್ ನಲ್ಲಿಯೂ ಈ ಬಗ್ಗೆ ದೀರ್ಘ ಹೊತ್ತು ಚರ್ಚೆಯಾಗಿದೆ.
ಪ್ರಭಾ ಮಲ್ಲಿಕಾರ್ಜುನ್ ಮೇಲೆ ಒತ್ತಡ: ಇನ್ನು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಮಾಜ ಸೇವೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಜನರೊಟ್ಟಿಗೆ ಬೆರೆಯುವ ರೀತಿ, ಬಡವರಿಗೆ ಸಹಾಯ, ಎಸ್.ಎಸ್.ಕೇರ್ ಟ್ರಸ್ಟ್‌ನಡಿ ಸಾವಿರಾರು ಜನರಿಗೆ ಆರೋಗ್ಯ ದಾಸೋಹ ಸೇರಿದಂತೆ ಎಲ್ಲರನ್ನೂ ಗಮನ ಸೆಳೆಯುತ್ತಿರುವ ನಾಯಕಿ.
ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲೆಡೆ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಇದೆ. ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಮಾವ, ಪತಿ ಗೆಲ್ಲಿಸಿದ್ದ ಪ್ರಭಾ ಮೇಡಂ: ವಿಧಾನಸಭೆ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ ಸೂಜಿಗಲ್ಲಿನಂತೆ ಸೆಳೆದಿತ್ತು. ಎಷ್ಟರ ಮಟ್ಟಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡುತ್ತಾರೆ ಎಂದೆಲ್ಲಾ ಕಾರ್ಯಕರ್ತರು ಮಾತನಾಡಲಾರಂಭಿಸಿದ್ದರು. ಅಷ್ಟು ಜನಪ್ರಿಯತೆ ಗಳಿಸಿದ್ದರು.
ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದರೆ ಸಾದು ಲಿಂಗಾಯತ ಸಮುದಾಯದ ಮತಗಳು, ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಫಲ, ಅಲ್ಪಸಂಖ್ಯಾತರ ಮತಗಳು ಬಂದರೆ ಗೆಲುವು ಕಷ್ಟವಾಗದು. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪನವರು ಬಿರುಸಿನ ಪ್ರಚಾರ ನಡೆಸಿದರೆ ಈ ಬಾರಿ ಬಿಜೆಪಿ ಮಣ್ಣು ಮುಕ್ಕಿಸಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ.
ಒಟ್ಟಿನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ವಿನಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದ್ದು, ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಇನ್ನೆರಡು ಇಲ್ಲವೇ ಇನ್ನೊಂದು ವಾರದಲ್ಲಿ ಟಿಕೆಟ್ ಘೋಷಿಸಲಾಗುತ್ತದೆ ಎಂದು ನವದೆಹಲಿಯ ಎಐಸಿಸಿ ಮಟ್ಟದಲ್ಲಿ ಸಂಪರ್ಕದಲ್ಲಿರುವ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
-
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications