ದಾವಣಗೆರೆ; ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ, ಅಕ್ಟೋಬರ್ 16: ಪತ್ನಿ ಶೀಲ ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷದ 5,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಕೆಟಿಜೆ ನಗರ ವಾಸಿ ಶಂಕರ ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2016ರ ನವೆಂಬರ್ 5ರಂದು ಈತ ಪತ್ನಿ ವೀಣಾಳೊಂದಿಗೆ ಜಗಳ ಮಾಡಿ, ಆಕೆಯ ಶೀಲ ಶಂಕಿಸಿ ಈಳಿಗೆ ಮಣೆ, ಬಿದುರಿನ ಕೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಜಗಳ ಬಿಡಿಸಲು ಬಂದ ಮಕ್ಕಳಿಗೂ ಪ್ರಾಣ ಬೆದರಿಕೆ ಹಾಕಿದ್ದ. ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಸಿಪಿಐ ಜಿ. ಸಂಗನಾಥ ಪ್ರಕರಣದ ತನಿಖೆ ನಡೆಸಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಇಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಮೃತಳ ಮಕ್ಕಳಿಗೆ ಪರಿಹಾರವಾಗಿ ತಲಾ 20 ಸಾವಿರ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಸ್.ವಿ. ಪಾಟೀಲ್, ಕೆ.ನಾಗರಾಜ ಆಚಾರ್ ವಾದ ಮಂಡಿಸಿದ್ದರು.












Click it and Unblock the Notifications