ದಾವಣಗೆರೆಯಲ್ಲಿ ತಡರಾತ್ರಿವರೆಗೂ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತ
ದಾವಣಗೆರೆ, ಜನವರಿ 9: ದಾವಣಗೆರೆ ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ದಾವಣಗೆರೆ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯಾರ್ಥಿ ಭವನ ಸರ್ಕಲ್ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ದಾಟಿಕೊಂಡು ಬಸ್ ಏರಲು ಮಹಿಳೆ ಪ್ರಯಾಸಪಟ್ಟಳು. ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣ ಕೆರೆಯಂತಾಗಿದ್ದು, ಪ್ರಯಾಣಿಕರು ಪರಸ್ಪರ ಕೈಹಿಡಿದು ಸಾಗಿದರು. ಚಾಮರಾಜಪೇಟೆಯ ಮಳಿಗೆಗಳಿಗೆ ನೀರು ನುಗ್ಗಿದ್ದು, ಮಾಲೀಕರು ಹೊರಹಾಕುತ್ತಿರುವುದು ದೃಶ್ಯ ಕಂಡುಬಂತು. ಅಕಾಲಿಕ ಮಳೆಯಿಂದಾಗಿ ರಾಜಕಾಲುವೆ ಉಕ್ಕಿ ಹರಿದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದೆ
ಸಿಡಿಲು ಬಡಿದು ಶಾಮನೂರಿನ ಅಂಜಪ್ಪ ಅವರ ಮನೆಗೆ ಹಾನಿಯಾಗಿದೆ. ಚಾಮರಾಜಪೇಟೆಯ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ನಗರದ ಬನಶಂಕರಿ ಬಡಾವಣೆಯ ಕೆಳಸೇತುವೆ ಬಳಿ ಸ್ಕಾರ್ಪಿಯೋ ವಾಹನ ನೀರಿನಲ್ಲಿ ಸಿಲುಕಿಕೊಂಡಿತ್ತು. ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದ್ದು, ಕೆರೆಯಂತಾಗಿತ್ತು. ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಮೊಳಕಾಲು ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಶುಕ್ರವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ, ರಾತ್ರಿ 7ರವರೆಗೂ ಬಿರುಸಾಗಿ ಸುರಿಯಿತು. ಬಳಿಕ ಕೆಲ ಕಾಲ ತುಂತುರು ಮಳೆಯಾಗುತ್ತಿತ್ತು. ರಾತ್ರಿ 9ರಿಂದ ಮತ್ತೆ ಬಿರುಸುಗೊಂಡು 12ರ ನಂತರವೂ ಸುರಿಯುತ್ತಲೇ ಇತ್ತು.

ಬೇಸಿಗೆ ಬೆಳೆಗೆ ಸಹಕಾರಿ
ಜಿಲ್ಲೆಯಲ್ಲಿ ಸುರಿದ ಮಳೆ ಬೇಸಿಗೆ ಭತ್ತಕ್ಕೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು. ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, ಮಳೆ ಬಿದ್ದಿರುವುದರಿಂದ ಭತ್ತದ ಗದ್ದೆಗಳಲ್ಲಿ ಸಸಿಮಡಿ ಮಾಡಿಕೊಳ್ಳಲು ಅನುಕೂಲವಾಗಿದೆ. ಹಿಂಗಾರು ಬೆಳೆ ಕಡಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಬೆಳೆ ಕೊಳೆಯುವುದರಿಂದ ನೀರನ್ನು ಹೊರಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರದ ಪ್ರಕಾರ ಚನ್ನಗಿರಿ ತಾಲ್ಲೂಕಿನಲ್ಲಿ 21.8 ಮಿ.ಮೀ, ದಾವಣಗೆರೆಯಲ್ಲಿ 22.6 ಮಿ.ಮೀ, ಹರಿಹರದಲ್ಲಿ 24.6 ಮಿ.ಮೀ ಹಾಗೂ ಜಗಳೂರು ತಾಲ್ಲೂಕಿನಲ್ಲಿ 3.6 ಮಿ.ಮೀ ಮಳೆಯಾಗಬಹುದು ಎಂದು ಅಂದಾಜಿಸಿತ್ತು. ದಾವಣಗೆರೆ ನಗರದಲ್ಲಿ ಹೆಚ್ಚಿನ ಮಳೆಯಾಗಿದೆ.

25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ
ಸಮೀಪದ ಕೊಕ್ಕನೂರು, ಗೋವಿನಹಾಳು, ಹಿಂಡಸಗಟ್ಟೆ, ಬೂದಿಹಾಳ್, ಹರಳಹಳ್ಳಿ, ಮಲ್ಲನಾಯಕನಹಳ್ಳಿ ಭಾಗದಲ್ಲಿ ಜಡಿಮಳೆ ಬಂದಿದೆ.
ಪಟ್ಟಣದಲ್ಲಿ ಗುಡುಗು ಸಿಡಿಲಿನ ಆರ್ಭಟ ಇತ್ತು. ತುಂತುರು ಮಳೆ ಬಂದಿದೆ. ರಾಮನಕಟ್ಟೆ ಹೊರವಲಯದ ಕೊಪ್ಪ, ಹೊನ್ನಾಳಿ ತಾಲ್ಲೂಕಿನ ಕುಂದೂರು ತಿಮ್ಲಾಪುರ ರಸ್ತೆಯಲ್ಲಿ ಶುಕ್ರವಾರ ರಭಸವಾಗಿ ಬಿರು ಮಳೆ ಬಂದ ಕಾರಣ ರಸ್ತೆಯ ಮೇಲೆ ಮಳೆ ನೀರು ನಿಂತು, ಹೊಲ ತೋಟಗಳಿಗೆ ಹರಿಯಿತು. ಅಕಾಲಿಕ ಮಳೆ ತೋಟದ ಬೆಳೆಗೆ ಅನುಕೂಲವಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ದಾವಣಗೆರೆಯ ಚಾಮರಾಜಪೇಟೆ ಮುಖ್ಯ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ಸಮರ್ಪಕವಾಗಿ ಇಲ್ಲದೇ ಇರುವುದರಿಂದ 25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.

ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ
ಅಂಗಡಿಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ವ್ಯಾಪಾರಿಗಳು ಹರಸಾಹಸ ಪಡಬೇಕಾಯಿತು. ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಮಳೆ ನೀರು ಅಂಗಡಿಯಳಗೆ ನುಗ್ಗಿದೆ. 2 ಲಕ್ಷ ರೂ. ಮೌಲ್ಯದ ಸರಕುಗಳು ನಷ್ಟವಾಗಿವೆ. ಈ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ ಎಂದು ವರ್ತಕ ಅಮರೇಶ್ ಅಸಮಾಧಾನ ಹೊರಹಾಕಿದರು. ಇನ್ನು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ 3,608 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲೇ 2,200 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಅಕಾಲಿಕ ಮಳೆಯಿಂದ ಮಾವಿನ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟಿದ್ದಾರೆ.

ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ
ಜನವರಿ ಮೊದಲ ವಾರ ಜಿಲ್ಲೆಯಾದ್ಯಂತ ಶೇ.70ರಷ್ಟು ಮಾವಿನ ತೋಪುಗಳಲ್ಲಿ ಹೂವು ಬಿಟ್ಟಿದೆ. ಕಳೆದ ವಾರ ಇಬ್ಬನಿ ಹೆಚ್ಚಾಗಿದ್ದರಿಂದ ಬೂದಿ ರೋಗದ ಹಾವಳಿ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಈಗ ಮಳೆ ಬಂದಿರುವುದರಿಂದ ಇಬ್ಬನಿಯು ತೊಳೆದು ಹೋಗಿ ಬೂದಿ ರೋಗ ಹತೋಟಿಗೆ ಬರುತ್ತದೆ. ಆದರೆ, ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಹೂವು ಉದುರುವುದನ್ನು ನಿಯಂತ್ರಿಸಲು ರೈತರು ಮಾವು ಸ್ಪೆಷಲ್ ಲಘು ಪೋಷಕಾಂಶವನ್ನು 5 ಗ್ರಾಂ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರಸ ಹೀರುವ ಕೀಟಬಾಧೆ ಹೆಚ್ಚಾಗಿದ್ದರೆ, ಪಿಪ್ರೋನಲ್ ಶೇ.5 SC ಕೀಟನಾಶಕವನ್ನು 1.5 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರ ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications