ದಾವಣಗೆರೆ ವಿವಿ ಹತ್ತನೇ ಘಟಿಕೋತ್ಸವ: ಐದು ಚಿನ್ನದ ಪದಕಕ್ಕೆ ಕೊರಳೊಡ್ಡಿದ ಕಾರ್ಮಿಕನ ಪುತ್ರಿ
ದಾವಣಗೆರೆ ವಿವಿ ಹತ್ತನೇ ಘಟಿಕೋತ್ಸವದಲ್ಲಿ ಕೂಲಿ ಕಾರ್ಮಿಕನ ಪುತ್ರಿ ಬಿ.ಹಾಲಮ್ಮ ಎಂಕಾಂ ವಿಭಾಗದಲ್ಲಿ ಐದು ಚಿನ್ನದ ಪದಕ ಪಡೆದಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಅರಸೀಕೆರೆಯ ತೌಡೂರು ಲಂಬಾಣಿ ತಾಂಡಾದ ದೀಪಾ ಮೂರು ಚಿನ್ನದ ಪದಕ ಪಡೆದಿದ್ದಾರೆ.
ದಾವಣಗೆರೆ, ಫೆಬ್ರವರಿ 28: ಹದಿನೈದು ವರ್ಷಗಳ ಹಿಂದೆ ತಾಯಿ ಕಳೆದುಕೊಂಡಾಕೆ. ಮನೆಯಲ್ಲಿ ಬಡತನ. ತಂದೆ ಬಲದಲ್ಲಿ ಅಜ್ಜಿಯ ನೆರಳಲ್ಲಿ ಆಡಿ ಬೆಳೆದು ಓದಿದ ಈಕೆ ಸದ್ಯ ಈಗ ದಾವಣಗೆರೆ ವಿಶ್ವವಿದ್ಯಾನಿಲಯದ ಚಿನ್ನದ ಹುಡುಗಿ. 5 ಬಂಗಾರದ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾಳೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸಮೀಪದ ಕೊಗಲೂರು ಗ್ರಾಮದ ವೆಂಕಟೇಶ್ವರ ಕ್ಯಾಂಪ್ ನ ಬಸವರಾಜಪ್ಪ ಹಾಗೂ ನೇತ್ರಾವತಿ ದಂಪತಿಯ ಪುತ್ರಿ ಬಿ. ಹಾಲಮ್ಮ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂಕಾಂನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು, ಈಕೆಯ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಲತಃ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿಯ ರಾಂಪುರ ಗ್ರಾಮದಲ್ಲಿ ವಾಸವಿದ್ದ ಬಸವರಾಜಪ್ಪ ತನ್ನ ಪತ್ನಿ ಕಳೆದುಕೊಂಡ ಬಳಿಕ ಪುತ್ರಿಯನ್ನು ಅಜ್ಜಿಯ ಮನೆಗೆ ಕಳುಹಿಸಿದರು. ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಚನ್ನಬಸಮ್ಮರು ಈಕೆ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ತನ್ನ ಜೀವನದ ಜೊತೆಗೆ ಮೊಮ್ಮಗಳ ಶಿಕ್ಚಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಹದಿನೈದು ವರ್ಷಗಳ ಹಿಂದೆ ತಾಯಿ ಕಳೆದುಕೊಂಡ ಹಾಲಮ್ಮಳಿಗೆ ಅಜ್ಜಿಯೇ ಎಲ್ಲವೂ ಆಗಿ ಸಲುಹಿದ್ದಾರೆ.
ಬಸವರಾಜಪ್ಪ ಕೂಲಿ ಕಾರ್ಮಿಕರು. ಕೆಲಸಕ್ಕೆ ಹೋಗಿಯೇ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಮಾತ್ರವಲ್ಲ, ಆದಾಯದ ಮೂಲವೂ ಇರಲಿಲ್ಲ. ತಾಯಿ ಕಳೆದುಕೊಂಡ ಪುತ್ರಿಯನ್ನು ಅಜ್ಜಿಯ ಮನೆಗೆ ಬಿಟ್ಟರು. ಅಜ್ಜಿಯ ಆರೈಕೆಯಲ್ಲಿ ಬೆಳೆದ ಹಾಲಮ್ಮ ಅವರ ನಿರೀಕ್ಷೆ ಹುಸಿಮಾಡದೇ ಅದ್ವಿತೀಯ ಸಾಧನೆ ಮಾಡಿ ಚಿನ್ನದ ಪದಕ ಪಡೆಯುವ ಮೂಲಕ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾದರು.

ಐದು ಪದಕ ನಿರೀಕ್ಷೆ ಇರಲಿಲ್ಲ
ತಮ್ಮ ಸಾಧನೆ ಬಗ್ಗೆ ಖುಷಿ ವ್ಯಕ್ತಪಿಡಿಸಿರುವ ಹಾಲಮ್ಮ, ನಾನು ಎರಡು ಪದಕ ಮಾತ್ರ ನಿರೀಕ್ಷೆ ಮಾಡಿದ್ದೆ. ಆದರೆ ಐದು ಚಿನ್ನದ ಪದಕ ಬಂದದ್ದು ಖುಷಿ ನೀಡಿದೆ. ಸದ್ಯಕ್ಕೆ ಬೇರೆ ಕಡೆ ಕೆಲಸ ಮಾಡುತ್ತಿದ್ದೇನೆ. ಪಿಹೆಚ್ ಡಿ ಮಾಡಿ ಒಳ್ಳೆಯ ಕೆಲಸ ಸಿಗಬೇಕು ಇಲ್ಲವೇ ಸರ್ಕಾರಿ ಕೆಲಸಕ್ಕೆ ಹೋಗಬೇಕೆಂಬ ಆಸೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ನನ್ನ ಸಾಧನೆಗೆ ನನ್ನ ಅಜ್ಜಿಯ ಸಹಕಾರ ಅಪಾರ. ಈ ಜನ್ಮದಲ್ಲಿ ನಾನು ಮರೆಯಲಾರೆ. ವಿದ್ಯಾರ್ಥಿನಿಯರಲ್ಲಿ ನನಗೆ ಹೆಚ್ವು ಪದಕ ಬಂದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಕಷ್ಟಪಟ್ಟು ಓದಿದ್ದಕ್ಕೆ ಫಲ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.
ಇನ್ನು ನನ್ನ ಸಹೋದರ ಇತ್ತೀಚೆಗಷ್ಟೇ ಬಿ. ಕಾಂ. ಮುಗಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆಯ ಸಹಕಾರವೂ ಇದೆ. ತಂದೆ ಹಾಗೂ ಅಜ್ಜಿ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಇದೆ. ನಾನು ಹಾಸ್ಟೆಲ್ ನಲ್ಲಿ ಓದಿದೆ. ಅಧ್ಯಾಪಕರು, ಸ್ನೇಹಿತರು ಉತ್ತಮ ಸಹಕಾರ ನೀಡಿದರು ಎಂದು ತಿಳಿಸಿದರು.
ಕಬ್ಬು ಕಡಿಯುವ ದಂಪತಿ ಪುತ್ರಿಗೆ 3 ಚಿನ್ನದ ಪದಕ
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆಯ ತೌಡೂರು ಲಂಬಾಣಿ ತಾಂಡಾದ ಲಕ್ಷ್ಮಣ್ ನಾಯ್ಕ್ ಹಾಗೂ ಯಮುನಾಬಾಯಿ ದಂಪತಿಯ ಪುತ್ರಿ ಎಲ್. ದೀಪಾ ಕಲಾ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ.
ಪೋಷಕರು ಕಬ್ಬು ಕಡಿಯುವ ಕೆಲಸ ಮಾಡಿದರೂ ಮಗಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ದೀಪಾ ಪೋಷಕರ ನಿರೀಕ್ಷೆ ಹುಸಿಗೊಳಿಸದೆ ಮೂರು ಪದಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಐಪಿಎಸ್‌ನಂಥ ದೊಡ್ಡ ಕನಸುಗಳಿಲ್ಲ. ಬಿ.ಎಡ್ ಮಾಡಿ ಸಣ್ಣದೊಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು. ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್ ಬರುತ್ತದೆ ಎಂದುಕೊಂಡಿದ್ದೆ, ಅದು ಈಗ ಸಾಧ್ಯವಾಗಿದೆ ಎಂದು ದೀಪಾ ಖುಷಿ ವ್ಯಕ್ತಪಡಿಸಿದರು.












Click it and Unblock the Notifications