ಮಳೆ, ಬಿಸಿಲಿನಲ್ಲೂ ಬಿರುಸಿನ ಮತದಾನ: ಗೆಲುವಿನ ಬಗ್ಗೆ ದಾವಣಗೆರೆ ಅಭ್ಯರ್ಥಿಗಳು ಹೇಳಿದ್ದೇನು?

ದಾವಣಗೆರೆ, ಮೇ 10: ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಉತ್ತಮ ಮತದಾನ ಆಗಿದೆ. ಆದರೆ ಸಂಜೆ ವೇಳೆಗೆ ಸುರಿ ಮಳೆಯಿಂದ ಮತದಾನಕ್ಕೆ ತೊಂದರೆ ಉಂಟಾಯಿತು. ಬೆಳಿಗ್ಗೆ ಏಳು ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ತಂಪನೆಯ ವಾತಾವರಣ ಇದ್ದ ಕಾರಣ ಜನರು ಬೇಗ ಬೇಗನೇ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಬೆಳಿಗ್ಗೆ 11 ಗಂಟೆಯಾಗುವಷ್ಟರಲ್ಲಿ ಶೇಕಡಾ20.78ರಷ್ಟು ಮತದಾನ ಆಗಿತ್ತು. ಆಮೇಲೆ ಬಿಸಿಲು ಏರುತ್ತಿದ್ದಂತೆ ಮತದಾನದ ಬಿರುಸು ಕಡಿಮೆಯಾಯಿತು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೇಕಡಾ 55.80 ಹಕ್ಕು ಚಲಾವಣೆಯಾಗಿತ್ತು. ಸಂಜೆ 4. 10 ರ ಸುಮಾರಿಗೆ ಮಳೆ ಸುರಿಯಲು ಆರಂಭವಾಯ್ತು. ಗುಡುಗು ಸಿಡಿಲು ಸಹಿತ ಮಳೆ ಬಂತು. ಇದರಿಂದಾಗಿ ಮತಗಟ್ಟೆಗಳತ್ತ ಜನರು ಬರುವುದು ಕಡಿಮೆಯಾಯ್ತು.

Davanagere All Party Candidates Opinion About Polling

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿನ ಮತಗಟ್ಟೆಯಲ್ಲಿದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು ಮತ ಚಲಾಯಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲಾ ಕಡೆ ಕಾಂಗ್ರೆಸ್ ಪಕ್ಷದತ್ತ ಮತದಾರರ ಒಲವಿದೆ. ಎಲ್ಲಿಯೂ ಟಫ್ ಫೈಟ್ ನಮಗಿಲ್ಲ. ನಮ್ಮ ಕ್ಷೇತ್ರದ ಮತಗಟ್ಟೆಗಳಲ್ಲಿ ಯಾವಾಗಲೂ ಕಡಿಮೆ ಮತದಾನ ನಡೆಯುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.40ರಷ್ಟು ಮತದಾನವಾಗಿದೆ. ಮತದಾನ ಒಂದು ಶಕ್ತಿ ಇದ್ದಂತೆ. ಯಾವಾಗ ಬೇಕೋ ಅವಾಗ ಮತದಾನ ಮಾಡಲು ಆಗದು. ಆದ್ದರಿಂದ ಮತದಾನ ನಮ್ಮ ಅಸ್ತ್ರ. ಅದನ್ನು ಉಪಯೋಗಿಸಿ ಮತದಾನ ಮಾಡಬೇಕು. ಪ್ರಸ್ತುತ ವಾತಾವರಣ ನೋಡಿದರೆ ಕಾಂಗ್ರೆಸ್ ಏಳೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಒಂದು ಮತದ ಅಂತರದಿಂದ ಗೆದ್ದರೂ ಅದು ನಮ್ಮ ಗೆಲುವು. ಐವತ್ತು ಸಾವಿರ ಅಂತರದಿಂದ ಗೆದ್ದರೂ ಗೆಲುವೇ ಎಂದರು.

ಈ ವೇಳೆ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್, ಸೊಸೆ ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಕ್ಕಳಾದ ಸಮರ್ಥ್, ಶ್ರೇಷ್ಠ ಹಾಗೂ ಕಾರ್ಯಕರ್ತರು ಇದ್ದರು.

ಗೆಲುವು ನಮ್ಮದೇ: ಮಲ್ಲಿಕಾರ್ಜುನ್ ವಿಶ್ವಾಸ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಕಾರ್ಯಕರ್ತರು ಬಹಳಷ್ಟು ಶ್ರಮ ವಹಿಸಿ ದುಡಿದಿದ್ದಾರೆ. ಹಾಗಾಗಿ, ನೂರಕ್ಕೆ ನೂರರಷ್ಟು ಗೆಲುವು ಖಚಿತ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಐಎಂಎ ಹಾಲ್ ನಲ್ಲಿರುವ ಮತಗಟ್ಟೆಯಲ್ಲಿ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತಿರುವ ಜನರು‌ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ರಾಜ್ಯದಲ್ಲಿ 140 ರಿಂದ 150 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.

Davanagere All Party Candidates Opinion About Polling

ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಪತಿ ಎಸ್.ಎಸ್ ಮಲ್ಲಿಕಾರ್ಜುನ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯ ಮುಂದುವರೆಯಬೇಕು. ಹಾಗಾಗಿ, ಕಾಂಗ್ರೆಸ್‌ಗೆ ಜನ ಬೆಂಬಲ ನೀಡಲಿದ್ದಾರೆಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಗೆಲುವು ಖಚಿತ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯಕುಮಾರ್ ತಿಳಿಸಿದರು.

ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹಕ್ಕು ನಾನು ಚಲಾಯಿಸಿದ್ದೇನೆ. ನನ್ನನ್ನು ಅತಿ ಹೆಚ್ಚು ಮತಗಳಿಂದ ಜನರು ಆರಿಸಿ ಕಳುಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹೊಸಬರೇ ಕಣಕ್ಕಿಳಿದಿದ್ದೇವೆ. ಕ್ಷೇತ್ರಗಳ ಜನರು ಹೊಸಮುಖಗಳಿಗೆ ಆದ್ಯತೆ ನೀಡಲಿದ್ದಾರೆ. ಸುಮಾರು ಒಂದು ವರ್ಷದ ಹಿಂದೆಯೇ ಪಕ್ಷದ ಹೈಕಮಾಂಡ್ ಯುವ ಮುಖಂಡರಿಗೆ ಟಿಕೆಟ್ ನೀಡುವುದಾಗಿ ಹೇಳಿತ್ತು. ಅದರಂತೆ ರಾಜ್ಯದಲ್ಲಿ 70ಕ್ಕೂ ಹೆಚ್ಚು ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಸಾಮಾನ್ಯರಿಗೆ ಟಿಕೆಟ್ ಕೊಟ್ಟಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಹಿರಿಯ ಶಾಸಕರು ಹಾಗೂ ಸಾಮಾನ್ಯ ಕಾರ್ಯಕರ್ತನ ನಡುವಿನ ಸೆಣಸಾಟದ ಚುನಾವಣೆ ಇದು. ಜನರು ಬದಲಾವಣೆ ಬಯಸಿದ್ದು, ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಯಭೇರಿ ನಿಶ್ಚಿತ: ಲೋಕಿಕೆರೆ ನಾಗರಾಜ್

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜನತೆ ಕಮಲ ಅರಳಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಿನಾಯಕ ಬಡಾವಣೆಯಲ್ಲಿನ ರಿಕ್ರಿಯೇಷನ್ ಕ್ಲಬ್ ನ ಮತಗಟ್ಟೆಯಲ್ಲಿ ಮತ ಹಾಕಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಜನರ ನಡುವೆ ಇರುವವನು. ನನ್ನ ಬಗ್ಗೆ ಮತದಾರರಲ್ಲಿ ಉತ್ತಮ ಅಭಿಪ್ರಾಯವಿದೆ. ಪ್ರಚಾರದ ವೇಳೆ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಹೇಳಿದರು.

ಮಾಜಿ ಸಚಿವರ ವಿರುದ್ದ ನನ್ನಂತಹ ಸಾಮಾನ್ಯ ಅಭ್ಯರ್ಥಿಗೆ ಸ್ಪರ್ಧಿಸಲು ಬಿಜೆಪಿ ಪಕ್ಷ ಅವಕಾಶ ನೀಡಿದೆ. ನಮ್ಮಲ್ಲಿ ಕುಟುಂಬ ರಾಜಕಾರಣ‌ ಇಲ್ಲ. ಕಳೆದ ಐದು ವರ್ಷದಿಂದ ಜನರಿಂದ ದೂರ ಇರುವ ಅಭ್ಯರ್ಥಿಗಿಂತ ಜನರ ನಡುವೆ ಇರುವ, ಸದಾ ಅವರ ಕೈಗೆ ಸಿಗುವ ಅಭ್ಯರ್ಥಿಯನ್ನು ಜನರು ಗೆಲ್ಲಿಸಲಿದ್ದಾರೆಂಬ ಭರವಸೆ ನನಗಿದೆ. ಉತ್ತರ ಕ್ಷೇತ್ರದ ಜನರು ಪ್ರಬುದ್ದ ಮತದಾರರು. ಉತ್ತಮರನ್ನೇ ಆಯ್ಕೆ ಮಾಡಲಿದ್ದಾರೆ.ನನ್ನ ಕುಟುಂಬದೊಂದಿಗೆ ನಾನು ಮತದಾನ ಮಾಡಿದ್ದೇನೆ. ಅದರಲ್ಲೂ ವಿಶೇಷವೆಂದರೆ ನನ್ನ ಪುತ್ರನದು ಮೊದಲ ಮತದಾನ ಎಂದು ತಿಳಿಸಿದರು.

ಮತ್ತೆ ಬಿಜೆಪಿ ಅಧಿಕಾರಕ್ಕೆ: ರವೀಂದ್ರನಾಥ್ ವಿಶ್ವಾಸ

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಸ್. ಎ. ರವೀಂದ್ರನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಶಿರಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 175 ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಮತ್ತು ರಾಜ್ಯದಲ್ಲಿ ನರೇಂದ್ರ ಮೋದಿಯವರ ಪ್ರಭಾವ ಜಾಸ್ತಿ ಇದೆ. ಈ ಬಾರಿ ಕರ್ನಾಟಕದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬಹುಮತ ಸರ್ಕಾರ ಬರುತ್ತದೆ. ಸ್ಪಷ್ಟ ಹಾಗೂ ನಿಚ್ಚಳವಾಗಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ: ಸಿದ್ದೇಶ್ವರ

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರ್ಯಗಳು ಜನರಿಗೆ ಇಷ್ಟವಾಗಿವೆ. ಹಾಗಾಗಿ, ಬಿಜೆಪಿಯತ್ತ ಜನರ ಒಲವು ಇದೆ. ಹಾಗಾಗಿ, ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.

ದಾವಣಗೆರೆಯ ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೋದಿ ಅವರ ಕಾರ್ಯವೈಖರಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಾವಣಗೆರೆ ಉತ್ತರ ಹಾಗೂ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ದಾವಣಗೆರೆ ಉತ್ತರದಲ್ಲಿ ಲೋಕಿಕೆರೆ ನಾಗರಾಜ್ ಹತ್ತು ಸಾವಿರ ಅಂತದಿಂದ ಗೆಲುವು ಪಡೆಯಲಿದ್ದಾರೆ. ದಕ್ಷಿಣದಲ್ಲಿ ಫೈಟ್ ಇದೆ, ಆದರೂ ಗೆಲುವು ಸಾಧ್ಯ. ರಾಜ್ಯದಲ್ಲಿ ಬಿಜೆಪಿ 125 ಸ್ಥಾನ‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+