Karnataka Budget 2023: ಜುಲೈ 3ರಿಂದ ಅಧಿವೇಶನ, 7ಕ್ಕೆ ಬಜೆಟ್ ಮಂಡನೆ: ಸಿದ್ದರಾಮಯ್ಯ
ದಾವಣಗೆರೆ, ಜೂನ್, 05: ಜುಲೈ 3ರಿಂದ ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ಮತ್ತು ಜುಲೈ 7ರಂದು ರಾಜ್ಯದ ಬಜೆಟ್ ಮಂಡನೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಹೇಳಿದ್ದಾರೆ.
ನೂತನ ಸರ್ಕಾರದ ಮೊದಲ ರಾಜ್ಯ ಬಜೆಟ್ ಅಧಿವೇಶನವನ್ನು ಜುಲೈ 7ಕ್ಕೆ ಕರೆಯುತ್ತೇನೆ. ಆಯವ್ಯಯದ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಸಚಿವ ಸಂಪುಟ ಸಭೆಯಲ್ಲಿ ಇನ್ನು ಬಜೆಟ್ ಗಾತ್ರದ ನಿರ್ಧಾರ ಆಗಿಲ್ಲ. ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಎಂಬಿಎ ಗ್ರೌಂಡ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜುಲೈ 3 ರಂದು ರಾಜ್ಯಪಾಲರ ಭಾಷಣ ನಡೆಯುತ್ತದೆ. ಆಮೇಲೆ ಒಂದು ವಾರಗಳ ಕಾಲ ಬಜೆಟ್ ಅಧಿವೇಶನ ನಡೆಸುವ ಕುರಿತಂತೆ ಚಿಂತನೆ ನಡೆಸುತ್ತಿದ್ದೇವೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆ ಈಡೇರಿಸಬೇಕಿದೆ ಎಂದರು
ಹೀಗಾಗಿ, ಬಜೆಟ್ ಮಂಡನೆಗೆ ಸಿದ್ಧತೆ ನಡೆಸಬೇಕು. ಚುನಾವಣಾ ಸಮಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು 3 ಲಕ್ಷದ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಗಾತ್ರದ ಆಯವ್ಯಯ ಮಂಡಿಸಿತ್ತು. ಆದರೆ ನಾವು ಬಜೆಟ್ ಗಾತ್ರದ ಬಗ್ಗೆ ನಿರ್ಧರಿಸಿಲ್ಲ ಎಂದರು.
ಇನ್ನು ಗೋಹತ್ಯೆ ನಿಷೇಧ ಕುರಿತಂತೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. 1964ರ ಆ್ಯಕ್ಟ್‌ನಲ್ಲಿ 12 ವರ್ಷ ತುಂಬಿರುವ ರಾಸುಗಳು, ವಯಸ್ಸಾಗಿರುವ ಜಾನುವಾರುಗಳು, ಬರಡು ರಾಸುಗಳು, ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳು ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಪಶುಸಂಗೋಪನಾ ಸಚಿವರು ಹೇಳುವಾಗ ಸರಿಯಾಗಿ ಮಾಹಿತಿ ನೀಡಿಲ್ಲ. ಕೆಲ ತಿದ್ದುಪಡಿಗಳನ್ನು ಬಿಜೆಪಿ ಸರ್ಕಾರ ಮಾಡಿತ್ತು. ಮತ್ತೆ ಏನಾಗಿದೆ ಎಂಬ ಕುರಿತಂತೆ ಸಮಗ್ರ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಸೇರಿದಂತೆ ರೈತರಿಗೆ ಅಗತ್ಯವಿರುವ ವಸ್ತುಗಳಿಗೆ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮಳೆಗಾಲ ಪ್ರಾರಂಭವಾಗುತ್ತಿದೆ. ಪ್ರವಾಹ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಒಂದು ವೇಳೆ ಪ್ರವಾಹ ಬಂದರೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದೇನೆ. ಯಾವುದೇ ತೊಂದರೆ ಆಗಬಾರದು. ಆದ್ದರಿಂದ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಹಾಗೆಯೆ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ನಾವು ತೀರ್ಮಾನ ಮಾಡಿದ್ದಲ್ಲ ಎಂದ ಅವರು, ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ನೀಡದಿದ್ದರೆ ಕೊಡಿಸೋಣ ಎಂದರು.
ದಾವಣಗೆರೆಯಲ್ಲಿ ನಡೆದದ್ದು ಸಿದ್ದರಾಮೋತ್ಸವ ಅಲ್ಲ, ನನ್ನ ಹುಟ್ಟುಹಬ್ಬ ಆಚರಣೆ. 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ನಡೆಸಲಾಗಿತ್ತು. ಕರ್ನಾಟಕದ ಮಧ್ಯಭಾಗ ದಾವಣಗೆರೆಯಲ್ಲಿ ಜನುಮದಿನದ ಆಚರಣೆ ನಡೆದಿತ್ತು. ಕಾಕತಾಳೀಯ ಎಂಬಂತೆ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದಾವಣಗೆರೆಗೆ ಬಂದಿದ್ದೇನೆ. ಬೇರೆ ಜಿಲ್ಲೆಗಳಿಗೆ ಹೋಗಿಲ್ಲ. ದಾವಣಗೆರೆಗೆ ವಿಶೇಷ ಕೊಡುಗೆ ನೀಡುವ ಕುರಿತಂತೆ ಆಮೇಲೆ ಮಾತನಾಡುತ್ತೇನೆ ಎಂದರು.
ಇದೇ ವೇಳೆ ಕೆಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಬಸವಂತಪ್ಪ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications