ಎಸ್ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆ ಶ್ರೀಗಳ ಪಾದಯಾತ್ರೆ
ದಾವಣಗೆರೆ, ಅಕ್ಟೋಬರ್ 24: ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ. 7.5 ಮೀಸಲಾತಿ ಹೆಚ್ಚಿಸುವಂತೆ ವಾಲ್ಮೀಕಿ ಶ್ರೀಗಳು ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇದೀಗ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಕಾಗಿನೆಲೆ ಶ್ರೀಗಳು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರು ಅರಮನೆ ಮೈದಾನದಲ್ಲಿ ಜನಪ್ರತಿನಿಧಿ ಸಭೆ ನಡೆಸಲಾಗಿದ್ದು, ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಕನಕ ಮಠದಲ್ಲಿ ಮಹಿಳಾ ಘಟಕದ ಸಭೆ ನಡೆಸಿದರು. ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಈಶ್ವರಾನಂದಪುರಿ ಸ್ವಾಮೀಜಿ ಅವರ ಜೊತೆ ಚರ್ಚಿಸಿ, ಕರ್ನಾಟಕದ ನಾಲ್ಕೂ ದಿಕ್ಕುಗಳಲ್ಲಿ ಸಮಾವೇಶ ನಡೆಸಿ ಪಾದಯಾತ್ರೆ ಮೂಲಕ ಬೆಂಗಳೂರಿನಲ್ಲಿ ರಣಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ದಾರೆ.
ಕ್ಷೌರಿಕರನ್ನು ಎಸ್ಟಿಗೆ ಸೇರಿಸುವ ಹೋರಾಟಕ್ಕೆ ಈಶ್ವರಪ್ಪ ಬೆಂಬಲ
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಜನವರಿ 15ರಿಂದ ಹಾವೇರಿಯ ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿವರೆಗೆ ಕಾಗಿನಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ ನಡೆಸಲಿದ್ದು, ಮೊದಲ ಹಂತವಾಗಿ ನವೆಂಬರ್ 8 ರಂದು ಮಹಿಳಾ ಸಮಾವೇಶ ನಡೆಯಲಿದೆ. ಅದಾದ ಬಳಿಕ ದಾವಣಗೆರೆ, ಕಲಬುರಗಿ, ಮೈಸೂರು, ಬಾಗಲಕೋಟೆ ನಾಲ್ಕು ಕಡೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಫೆಬ್ರುವರಿ 7ರಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಕಾಗಿನೆಲೆ ಶ್ರೀಗಳು, "ಮಕರ ಸಂಕ್ರಾಂತಿ ಬಳಿಕ ಕುರುಬರ ದಿಕ್ಕು ಬದಲಾಗಲಿದೆ. ಈ ಹಿನ್ನೆಲೆಯಲ್ಲೇ ಜನವರಿ 15ರಂದು ಕಾಗಿನೆಲೆಯಿಂದ ಪಾದಯಾತ್ರೆ ನಡೆಸಲಾಗುವುದು. ಇದೇ ತಿಂಗಳು 11ರಂದು ಅರಮನೆ ಮೈದಾನದಲ್ಲಿ ಜನಪ್ರತಿನಿಧಿಗಳ ಚಿಂತನಾ ಸಭೆ ಮಾಡಲಾಗಿತ್ತು. ಮುಂದಿನ ತಿಂಗಳು 8ರಂದು ಕಾಗಿನಲೆ ಪೀಠದಲ್ಲಿ ಎಸ್ ಟಿ ಸೇರ್ಪಡೆಯ ಕುರಿತು ಮಹಿಳಾ ಸಮವೇಶ ನಡೆಸಲಾಗುವುದು ಎಂದರು.
ಸಚಿವ ಈಶ್ವರಪ್ಪ ಮಾತನಾಡಿ, ಕುರುಬರಿಗೆ ಎಸ್ಟಿ ಮೀಸಲಾತಿ ಅವಶ್ಯಕವಾಗಿದೆ. ಜೊತೆಗೆ ಹಲವು ಸಮಾಜಗಳು ಎಸ್ಟಿ ಸೇರ್ಪಡೆಗೆ ಅವಶ್ಯ ಇದೆ. ಈಗ ಕುರುಬ ಸಮಾಜಕ್ಕೆ ಎಸ್ಟಿ ನೀಡಬೇಕು, ಈ ಬಗ್ಗೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯಲಿದೆ" ಎಂದರು.
ಒಟ್ಟಾರೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬೇಡಿಕೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಕಾಗಿನೆಲೆ ಶ್ರೀಗಳು, ಈಶ್ವರಪ್ಪ ನೇತೃತ್ವದಲ್ಲಿ ಭಾರೀ ಹೋರಾಟಕ್ಕೆ ಸಿದ್ಧತೆಗಳು ನಡೆದಿವೆ. ಇನ್ನೊಂದೆಡೆ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಾಯಕ ಸಮಾಜ ಪ್ರತಿಭಟನೆ, ಪಂಚಮಸಾಲಿ ಸಮಾಜಕ್ಕೆ 2 ಎಗೆ ಸೇರ್ಪಡೆಗೆ ಹೋರಾಟಗಳು ಜೋರಾಗುತ್ತಿದ್ದು ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.