ಮೀಸಲಾತಿ ಹೋರಾಟ ಮಾಡಿದವರು ಯಾರು ಎನ್ನುವುದು ದನ ಕಾಯುವ ವ್ಯಕ್ತಿಗೂ ಗೊತ್ತು: ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ, ಡಿಸೆಂಬರ್12: ಮೀಸಲಾತಿಗಾಗಿ ಯಾರು ಹೋರಾಟ ಮಾಡಿದರು ಎನ್ನುವುದು ಪಂಚಮಸಾಲಿ ಸಮಾಜದ ಕಟ್ಟಕಡೆಯ ದನ ಕಾಯುವ ವ್ಯಕ್ತಿಗೂ ಗೊತ್ತು. ಜನರು ಸುಳ್ಳು ಹೇಳಿದರೆ ತಿದ್ದಬಹುದು. ಸ್ವಾಮೀಜಿಗಳು ಸುಳ್ಳು ಹೇಳಬಾರದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪರೋಕ್ಷವಾಗಿ ಹರಿಹರ ಪಂಚಮಸಾಲಿ ಲಿಂಗಾಯತ
ಪೀಠಾಧಿಪತಿ ವಚನಾನಂದ ಶ್ರೀಗಳ ವಿರುದ್ಧ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಸತ್ಯವನ್ನೇ ಹೇಳಬೇಕು. ಕ್ರೆಡಿಟ್ ಯಾರಿಗಾದರೂ ಬರಲಿ, ಒಟ್ಟಾರೆ ಸಮಾಜಕ್ಕೆ 2ಎ ಮೀಸಲಾತಿ ದೊರಯಬೇಕು ಎಂದು ಹೇಳಿದರು.
ಹಣ್ಣು ಫಲಕ್ಕೆ ಬಂದು ಸಿಹಿ ಕೊಡುವ ವೇಳೆ ನಾನು ಬೆಳೆದಿದ್ದು ಎಂದರೆ ಜನರು ನಂಬಿ ಬಿಡುತ್ತಾರಾ..? ಹೋರಾಟ ಯಶಸ್ಸಿನೆಡೆಗೆ ಹೋಗುವಾಗ ರಾಜಕಾರಣಿಗಳು, ಧರ್ಮಗುರುಗಳು ವಿಷಯಾಂತರ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಿದರು.

ಪಂಚಮಸಾಲಿ ಹೋರಾಟ ಕೆಡಿಸಲು ಷಡ್ಯಂತ್ರ ರೂಪಿಸಿದರು
ಸಮಾಜಕ್ಕೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಸೇರಿದಂತೆ ಬೀದಿಗಿಳಿದು ಹಗಲು ರಾತ್ರಿ ಎನ್ನದೆ ಪ್ರತಿಭಟಿಸಿದ ಪರಿಣಾಮ ಸಮಾಜಕ್ಕೆ ಸಿಹಿ ಸುದ್ದಿ ಸಿಗುವ ಸಮಯ ಸನ್ನಿಹಿತವಾಗುತ್ತಿದೆ. ಹೋರಾಟ ಕೆಡಿಸಲು ಷಡ್ಯಂತ್ರ ರೂಪಿಸಿದರು. ಹತ್ತಿಕ್ಕುವ ಪ್ರಯತ್ನ ಮಾಡಿದರು. ಕೆಲವರ ಬಾಯಲ್ಲಿ ಹೋರಾಟ ಎಂಬ ಪದವೇ ಬರಲಿಲ್ಲ. ಕೊನೆಗೆ ಮೀಸಲಾತಿ ಬೇಕು ಎಂಬ ಮಾತು ಬಂತಲ್ಲಾ ಎನ್ನುವುದು ಸಮಾಧಾನ ಎಂದು ಜಯಮೃತ್ಯುಂಜಯ ಸ್ವಾಮೀಜಿ ವ್ಯಂಗ್ಯವಾಡಿದರು.

ಜನರಿಗೆ ಎಲ್ಲಾ ವಿಚಾರಗಳು ಗೊತ್ತು
ಬಾಹುಬಲಿ ಪಾರ್ಟ್ ಒಂದು ಹಾಗೂ ಪಾರ್ಟ್ 2 ಸಿನಿಮಾ ಎಲ್ಲರೂ ನೋಡಿದ್ದಾರೆ. ಯುದ್ಧ ಗೆಲ್ಲುವ ಸಮಯ ಬಂದಾಗ ಹಿಂದಿನಿಂದ ಬಂದು ಬೆನ್ನಿಗೆ ಚೂರಿ ಹಾಕಲಾಗುತ್ತದೆ. ಇದೇ ರೀತಿಯಲ್ಲಿ ನಮಗೂ ಮಾಡಲು ಯತ್ನಿಸಿದರು. ಆದರೆ, ಅದರಲ್ಲಿ ಸಫಲರಾಗುವುದಿಲ್ಲ. ಎರಡು ವರ್ಷ ಎರಡು ತಿಂಗಳ ಕಾಲ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಯಾರು ಏನೇ ಹೇಳಿದರೂ ಜನರಿಗೆ ಎಲ್ಲಾ ವಿಚಾರಗಳು ಗೊತ್ತು. ಯಾರು ಹೋರಾಟ ಮಾಡಿದರು..? ಜನರನ್ನು ಸಂಘಟಿಸಿದರು..? ಎಷ್ಟು ಕಷ್ಟಪಟ್ಟರು ಎನ್ನುವ ನಾವು ಹೇಳಬೇಕಾಗಿಲ್ಲ ಎಂದರು.

ಪಂಚಮಸಾಲಿ ಹೋರಾಟ ಮುಂದುವರಿಯುತ್ತದೆ
ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಗೆ ಹೋಗಿ ಮೀಸಲಾತಿ ಹೋರಾಟದ ಬಗ್ಗೆ ಕಿಚ್ಚು ಹೊತ್ತಿಸಲಾಯಿತು. ಕ್ರೆಡಿಟ್ ಯಾರಿಗೆ ಹೋದರೂ ನಮಗೆ ಬೇಸರವಿಲ್ಲ. ಸಮಾಜದ ಬೇಡಿಕೆ ಈಡೇರುವುದಷ್ಟೇ ಮುಖ್ಯ. 1 ಕೋಟಿ 39 ಲಕ್ಷ ಪಂಚಮಸಾಲಿ ಸಮಾಜದ ಜನರಿದ್ದಾರೆ. ಎಲ್ಲರೂ ಎಲ್ಲವನ್ನೂ ಬಲ್ಲರು. ಹಾಗಾಗಿ, ನಮ್ಮ ಮುಂದೆ ಇರುವುದು ಒಂದೇ. ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಕೊಡಿಸಬೇಕು ಎಂಬುದು. ಇದಕ್ಕಾಗಿ ಹೋರಾಟ ಮುಂದುವರಿಯುತ್ತದೆ. ಎಲ್ಲೋ ಕುಳಿತು ಬೇಡಿಕೆ ಈಡೇರುವ ಸಮಯದಲ್ಲಿ ಬಂದು ಓಡಾಡಿಬಿಟ್ಟರೆ ಸತ್ಯವನ್ನು ಮರೆಮಾಚಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಪಂಚಮಸಾಲಿ ಪಾದಯಾತ್ರೆ ಯಶಸ್ವಿ
ಸಮಾಜದ ಮುಖಂಡ ಹೆಚ್. ಎಸ್. ನಾಗರಾಜ್ ಅವರಿಗೆ ಪಾದಯಾತ್ರೆ, ಉಪವಾಸ ಸತ್ಯಾಗ್ರಹ, ಸಭೆ, ರ್ಯಾಲಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಆಹ್ವಾನಿಸಲಾಗಿದೆ. ಕಾರ್ಯದೊತ್ತಡದಿಂದ ಬಂದಿಲ್ಲ. ಕೆಲವೊಂದು ಭಿನ್ನಾಭಿಪ್ರಾಯದಿಂದ ಆಗಮಿಸಿಲ್ಲ. ಅವರನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಬೆಳಗಾವಿಯಲ್ಲಿ ನಡೆಯುವ ಕಾರ್ಯಕಾರಿಣಿಗೂ ನಾಗರಾಜ್ ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಸಮಾಜದ 2 ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ದಾವಣಗೆರೆಗೆ ಬಂದಾಗ ಸಮಾಜದ ಮುಖಂಡ ಹೆಚ್. ಎಸ್. ನಾಗರಾಜ್ ಅವರು ಕೂಡಲಸಂಗಮ ಮತ್ತು ಹರಿಹರ ಪಂಚಮಸಾಲಿ ಶ್ರೀಗಳನ್ನು ಒಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಪಾದಯಾತ್ರೆಯೂ ಯಶ ಕಂಡಿತ್ತು. ನಂತರ ವಚನಾನಂದ ಸ್ವಾಮೀಜಿ ಹಿಂದೆ ಸರಿದಿದ್ದರು ಎನ್ನಲಾಗಿದೆ.












Click it and Unblock the Notifications