IPS Transfer; ದಾವಣಗೆರೆಯ ಎಸ್‌ಪಿ ವರ್ಗಾವಣೆ
ದಾವಣಗೆರೆ, ಆಗಸ್ಟ್ 08; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಗೃಹ ಇಲಾಖೆಯ ವರ್ಗಾವಣೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.
ಮಂಗಳವಾರ ಕರ್ನಾಟಕ ಸರ್ಕಾರ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಕೆ. ಅರುಣ್ ಅವರನ್ನು ವರ್ಗಾವಣೆಗೊಳಿಸಿದೆ. ಆದರೆ ದಾವಣಗೆರೆಗೆ ಹೊಸ ಎಸ್‌ಪಿ ಯಾರು? ಎಂಬುದು ಇನ್ನು ಪ್ರಶ್ನೆಯಾಗಿ ಉಳಿದಿದೆ.

ಡಾ. ಕೆ. ಅರುಣ್ ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ನೇಮಕ ಮಾಡಿದೆ. ಆದರೆ ಡಾ. ಕೆ. ಅರುಣ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಯಾರನ್ನೂ ಸಹ ಸರ್ಕಾರ ಇನ್ನೂ ನೇಮಕ ಮಾಡಿಲ್ಲ.
2023ರ ಏಪ್ರಿಲ್ 24ರಂದು ಡಾ. ಕೆ. ಅರುಣ್ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಸಿ. ಬಿ. ರಿಷ್ಯಂತ್ ಎಸ್‌ಪಿಯಾಗಿದ್ದರು. ಆದರೆ ಚುನಾವಣೆ ಸಮಯದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಡಾ. ಕೆ. ಅರುಣ್ ದಾವಣಗೆರೆಗೆ ಬರುವ ಮೊದಲು ವಿಜಯನಗರ ಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದರು. ಈಗ ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ನೇಮಕ ಮಾಡಲಾಗಿದೆ.
5 ತಿಂಗಳಿನಲ್ಲಿಯೇ ವರ್ಗಾವಣೆ; ಡಾ. ಕೆ. ಅರುಣ್ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ 5 ತಿಂಗಳಿಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಎಸ್‌ಪಿ ಬದಲಾವಣೆಗಾಗಿ ಪಟ್ಟು ಹಿಡಿದಿದ್ದರು ಎಂಬ ಸುದ್ದಿ ಇದೆ.
ಐಎಎಸ್, ಐಪಿಎಸ್ ಅಧಿಕಾರಿಗಳು ಕನಿಷ್ಠ 2 ವರ್ಷ ಒಂದು ಕಡೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಆದರೆ ಕೆಲವು ಸಂದರ್ಭದಲ್ಲಿ ಸರ್ಕಾರವೇ ಈ ನಿಯಮವನ್ನು ಮೀರಿ ಒತ್ತಾಯಕ್ಕೆ ಮಣಿದು ವರ್ಗಾವಣೆ ಮಾಡುತ್ತದೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಎಸ್‌ಪಿ ವರ್ಗಾವಣೆ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಹೇಳಿದ ಒಂದೇ ದಿನದಲ್ಲಿ ಸರ್ಕಾರ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ವರ್ಗಾವಣೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಡಾ. ಕೆ. ಅರುಣ್ ಈ ಹಿಂದೆ ಕಲಬುರಗಿಯಲ್ಲಿ ಕೆಲಸ ಮಾಡಿದ್ದರು. ಖಡಕ್ ಅಧಿಕಾರಿ ಎಂದು ಸಹ ಹೆಸರು ಪಡೆದಿದ್ದರು. ಈಗ ಅವರನ್ನು ಮತ್ತೆ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ.
ದಾವಣಗೆರೆಗೆ ಸಿ. ಬಿ. ರಿಷ್ಯಂತ್ ಬಳಿಕ ಆಗಮಿಸಿದ್ದ ಡಾ. ಕೆ. ಅರುಣ್ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದರು. ಆದರೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ.
ಕರ್ನಾಟಕದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಆರೋಪ ಮಾಡುತ್ತಿವೆ. ಅದರಲ್ಲೂ ಗೃಹ ಇಲಾಖೆ ವರ್ಗಾವಣೆ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಸರ್ಕಾರ ವರ್ಗಾವಣೆಯನ್ನು ಮುಂದುವರೆಸಿದೆ.
ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ 'ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ Cash & Carry. ಅಧಿಕಾರಿಗಳಿಗೆ ಹಣಕ್ಕಾಗಿ ಎಷ್ಟು ಕಾಡಿರಬೇಕು ಇವರು?' ಎಂದು ಸರ್ಕಾರಿ ಅಧಿಕಾರಿಗಳ ವರ್ಗಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸಿದ್ದರು.
ಡಾ. ಕೆ. ಅರುಣ್ ಕಾರ್ಯ ನಿರ್ವಹಣೆ ಮಾಡುತ್ತಿದ್ದ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹುದ್ದೆಗೆ ಸರ್ಕಾರ ಯಾರನ್ನು ನೇಮಕ ಮಾಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications