ದಾವಣಗೆರೆ: ದುರ್ಗಾಂಬಿಕಾ ಜಾತ್ರೆ ಮುಗೀತು, ತ್ಯಾಜ್ಯದ್ದೇ ಕಾರುಬಾರು; ಪಾಲಿಕೆ ನಿರ್ಲಕ್ಷ್ಯಕ್ಕೆ ಹಿಡಿಶಾಪ
ದಾವಣಗೆರೆ, ಮಾರ್ಚ್ 18: ದಾವಣಗೆರೆ ನಗರದ ಪ್ರಸಿದ್ಧ ದೇವತೆ ದುರ್ಗಾಂಬಿಕಾ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಆದರೆ ಹಬ್ಬದ ವೇಳೆ ಎಲ್ಲೆಂದರಲ್ಲಿ ಕಸ ಬಿಸಾಡಲಾಗಿದ್ದು, ಇದನ್ನು ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿರುವ ದಾವಣಗೆರೆ ಮಹಾನಗರ ಪಾಲಿಕೆ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಮಾರ್ಚ್ 13ರಿಂದ 17ರವರೆಗೆ ವೈಭವೋಪೇತವಾಗಿ ಜಾತ್ರಾ ಮಹೋತ್ಸವ ನೆರವೇರಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಂಡು ದುರ್ಗಮ್ಮನಿಗೆ ಉಘೇ ಉಘೇ ಎನ್ನುತ್ತಾ ಭಕ್ತಿ ಸಮರ್ಪಿಸಿದ್ದಾರೆ. ಸದ್ಯ ಹಳೆ ದಾವಣಗೆರೆಯಲ್ಲಂತೂ ತ್ಯಾಜ್ಯದ್ದೇ ಕಾರುಬಾರು ಆಗಿದೆ. ಹಬ್ಬ ಆಚರಿಸಿದ ಜನರು ಮನೆಯಲ್ಲಿನ ಕಸವನ್ನು ಎಲ್ಲೆಂದರಲ್ಲಿ ಹಾಕಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಸಹ ಹೆಚ್ಚಾಗಿ ಕರ್ತವ್ಯಕ್ಕೆ ಬಂದಿಲ್ಲ. ಇದರಿಂದಾಗಿ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಜಾತ್ರೆಯ ವೇಳೆ ಅಂಗಡಿಗಳನ್ನು ಹಾಕಲಾಗಿತ್ತು. ಅವರೂ ಸಹ ತ್ಯಾಜ್ಯ ಎಲ್ಲೆಂದರಲ್ಲಿ ಹಾಕಿದ್ದಾರೆ. ಜೊತೆಗೆ ಇದ್ದ ಜಾಗವನ್ನು ಸ್ವಚ್ಛ ಮಾಡಿಲ್ಲ. ಬಾಡೂಟ ಮಾಡಿದವರು ಸಹ ಬೇಕಾಬಿಟ್ಟಿಯಾಗಿ ಮಾಂಸ, ಊಟದ ಮಾಡಿದ ತಟ್ಟೆಗಳು, ಕೊಳೆತ ತರಕಾರಿ ಸೇರಿದಂತೆ ಬೇರೆ ಬೇರೆ ರೀತಿಯ ಕಸವನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ.

ದುರ್ಗಾಂಬಿಕೆ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ನಡದಿರುವುದರಿಂದ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹವಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಾಗಲೀ, ಮೇಯರ್ ಆಗಲೀ ಈ ಬಗ್ಗೆ ಗಮನ ಹರಿಸದಿರುವುಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೇ ದಾವಣಗೆರೆ ಭಾಗದ ಬಹುತೇಕ ಬಡಾವಣೆಗಳಲ್ಲಿ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಬ್ಬಕ್ಕೂ ಮುನ್ನವೇ ಪಾಲಿಕೆಗೆ ಇಷ್ಟೊಂದು ಭಕ್ತರು ಬರುವ ಬಗ್ಗೆ ಗೊತ್ತಿದ್ದರೂ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.












Click it and Unblock the Notifications