2004ರಿಂದ ಇಲ್ಲಿಯವರೆಗೆ ಶಾಮನೂರು ಶಿವಶಂಕರಪ್ಪರ ಆಶೀರ್ವಾದದಿಂದಲೇ ಗೆದ್ದಿದ್ದೇನೆ: ಜಿ.ಎಂ.ಸಿದ್ದೇಶ್ವರ ಹೀಗೆ ಹೇಳಿದ್ದೇಕೆ?
ದಾವಣಗೆರೆ, ಜೂನ್, 17: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದರೆ ನಾನೇ ಸ್ಪರ್ಧೆ ಮಾಡುತ್ತೇನೆ. 2004ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಆಶೀರ್ವಾದದಿಂದಲೇ ಗೆದ್ದು ಬಂದಿರುವೆ. ಮುಂಬರುವ ಚುನಾವಣೆಗೆ ಹಣ ನೀಡಿದರೆ ಪಡೆಯುತ್ತೇನೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದರು. ಅಷ್ಟಕ್ಕೂ ಜಿ.ಎಂ.ಸಿದ್ದೇಶ್ವರ ಗೀಗೆ ಅಂದಿದ್ದೇಕೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಜಿಎಂಐಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸ್ಪರ್ಧೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಆದರೆ ನೀವೇ ಸ್ಪರ್ಧೆ ಮಾಡಬೇಕೆಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ಆದ್ದರಿಂದ ಒಂದು ವೇಳೆ ನನಗೆ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದರು.

ಶಾಮನೂರು ಶಿವಶಂಕರಪ್ಪರು ಹಿರಿಯರು. ಅವರು ನನ್ನ ಮಾವ. ಅವರು ಏನೇ ಹೇಳಿದರೂ ನನಗೆ ಆಶೀರ್ವಾದವಿದ್ದಂತೆ. ನನ್ನ ಸೋಲು ಕಾಣಬೇಕೆಂದು ಶಿವಶಂಕರಪ್ಪನವರು ಹೇಳಿದ್ದಾರೆ. ಹೀಗೆ ಹೇಳಿರುವುದೇ ನನಗೆ ಆಶೀರ್ವಾದ ಇದ್ದಂತೆ. ನಾಲ್ಕು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ನನಗೆ ಅವರೇ ಆಶೀರ್ವಾದ ಮಾಡಿದ್ದು, ಮುಂದೆಯೂ ಅವರ ಆಶೀರ್ವಾದ ನನ್ನ ಮೇಲಿರುತ್ತದೆ ಎಂದು ವ್ಯಂಗ್ಯವಾಡಿದರು.
ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನಲ್ಲಿ ಹಾಗೂ ರಾಜಕಾರಣದಲ್ಲಿ ತುಂಬಾ ಹಿರಿಯರು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. 2004ರಿಂದ ನಾವು ಸೋಲುವುದನ್ನು ನೋಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸೋಲುವುದನ್ನು ನೋಡುತ್ತಾರೆ ಎಂದು ಕುಹಕವಾಡಿದರು.
ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಲು ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡ್ ಕಾರಣ. ಜೊತೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ತಡವಾಯಿತು. ಬೇಗನೇ ಪ್ರಕಟಿಸಿದ್ದರೆ ನಾವು ಕೂಡ ಜಯಭೇರಿ ಬಾರಿಸುತ್ತಿದ್ದೆವು. ನಾವೆಲ್ಲಾ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಪ್ರಚಾರಕ್ಕೆ ಎಲ್ಲಾ ಕಡೆ ತೆರಳಿದ್ದೇನೆ. ಮೊದಲಿಗಿಂತ ಹೆಚ್ಚು ಈ ಬಾರಿ ಕೆಲಸ ಮಾಡಿದ್ದೆ. ಆದರೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರಿದ್ದಾರೆ. 2013ರಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಪಾಲಿಕೆ ಸದಸ್ಯರೂ ಇರಲಿಲ್ಲ. ಆಗಲೇ ನಾನು 2014ರ ಲೋಕಸಭಾ ಚುನಾವಣೆಯಲ್ಲಿ 13 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದೆೇನೆ ಎಂದರು.
ಇನ್ನು ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಗೆದ್ದು ಬಂದೆ ಎಂದು ಈಗಲೂ ಹೇಳುತ್ತಾರೆ. ನಮ್ಮ ತಂದೆಯವರಿದ್ದಾಗ ಯಾವ ಹವಾ ಇತ್ತು ಎಂದು ಶಾಮನೂರು ಶಿವಶಂಕರಪ್ಪ ಅವರನ್ನೇ ಕೇಳಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಯಾವ ಹವಾದಿಂದ ಗೆದ್ದಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದರು.
ಸೋಲು ಕಂಡಾಗ ಪ್ರತಿಯೊಬ್ಬರೂ ಕಲ್ಲು ಹೊಡೆಯುವುದು ಸಾಮಾನ್ಯ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಸಹಜ ಆಗಿರುತ್ತದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಜನತೆಗೆ ತುಂಬಾ ಹೊರೆಯಾಗುತ್ತಿದೆ. ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್‌ನವರು ಡಬಲ್ ಗೇಮ್ ಮಾಡುತ್ತಿದ್ದಾರೆ. 5 ಗ್ಯಾರಂಟಿಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದರು. ಹಾಗೆಯೇ ಯಡಿಯೂರಪ್ಪ ಅವರನ್ನು ಯಾರೂ ಸೈಟ್‌ಲೈನ್ ಮಾಡಿಲ್ಲ. ಅವರು ರಾಜ್ಯದಲ್ಲಿ ಮತ್ತೆ ಪ್ರಚಾರ ಆರಂಭಿಸಲಿದ್ದಾರೆ. ಅವರು ಹಿರಿಯರು, ಬಿಜೆಪಿಯಲ್ಲಿ ಅವರಿಗೆ ಗೌರವವಿದೆ ಎಂದರು.
ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಸಾಕಷ್ಟು ಕಳಪೆಯಾಗಿವೆ ಎಂಬ ದೂರು ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳಪೆ ಕಾಮಗಾರಿ ಆಗಿದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಶಾಸಕ ಬಿ.ಪಿ ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಯಶವಂತರಾವ್ ಜಾಧವ್, ಬಿ. ಎಸ್. ಜಗದೀಶ್, ಲೋಕಿಕೆರೆ ನಾಗರಾಜ್, ಬಿ.ಜೆ. ಅಜಯ್ ಕುಮಾರ್, ಶಿವರಾಜ್ ಪಾಟೀಲ್, ಮಾಜಿ ಶಾಸಕ ಪ್ರೊ.ಲಿಂಗಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications