ನಾನೂ ಸಿಎಂ ರೇಸ್‌ನಲ್ಲಿದ್ದೇನೆ: ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ
ದಾವಣಗೆರೆ, ಸೆಪ್ಟೆಂಬರ್, 11: ರಾಜ್ಯದಲ್ಲಿ ಇದೀಗ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಕೆಲವರು ನಾನೇ ಮುಂದಿನ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ ಇದೀಗ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿ ಆಶ್ಚರ್ಯ ಮೂಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಸಿಎಂ ಬದಲಾವಣೆ ಚರ್ಚೆ ಬಗ್ಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ತಾನೂ ಕೂಡ ಸಿಎಂ ರೇಸ್‌ನಲ್ಲಿದ್ದೀನಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಸಿಎಂ ಬದಲಾವಣೆ ಪ್ರಸಂಗ ಬಂದರೆ ನಾನು ಕೂಡ ಸ್ಪರ್ಧೆ ಮಾಡಲು ತಯಾರುದ್ದೇನೆ. ಇದರಲ್ಲಿ, ಜೂನಿಯರ್, ಸೀನಿಯರ್ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಅಂತಹ ಪರಿಸ್ಥಿತಿ ಬಂದರೆ, ಮುಖ್ಯಮಂತ್ರಿ ಗದ್ದುಗೆಗೆ ಸ್ಪರ್ಧೆ ಮಾಡದೆ ಬಿಡುವುದಿಲ್ಲ ಎಂದು ಸ್ಫೋಟಕ ಹೇಳಿ ನೀಡಿದ್ದಾರೆ.
ಅಲ್ಲದೆ, ಹೈಕಮಾಂಡ್ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರಲಿ. ಬಹುಮತ ಇರುವವರಿಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಒಂದು ವೇಳೆ ಸಿಎಂ ಬದಲಾವಣೆ ಆದರೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಎಂಬಿ ಪಾಟೀಲ್ ಹೇಳಿದ್ದೇನು?: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯಂತೂ ಇಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಅವರೇ ಮುಂದುವರೆಯುತ್ತಾರೆ. ಇನ್ನು ಸಿಎಂ ಆಗುವುದಕ್ಕೆ ಸೀನಿಯಾರಿಟಿ ಬೇಕಿಲ್ಲ. ಆದರೂ ಒಂದು ಮಾತು ಹೇಳುತ್ತೇನೆ. ಕಾಂಗ್ರೆಸ್‌ನಲ್ಲಿ ನಾನು ಕೂಡ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಶಿವಾನಂದ ಪಾಟೀಲ್ ಅಂತೂ ಸಿಎಂ ಆಗುವುದಿಲ್ಲ. ಇನ್ನು ಅವರು ಇದೀಗ ಜನತಾ ದಳದಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಸಿಎಂ ಬದಲಾವಣೆಯಂತಹ ಸನ್ನಿವೇಶ ಸದ್ಯ ಇದೀಗ ಬಂದಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ, ಮುಂದೆಯೂ ಇರುತ್ತಾರೆ. ಮತ್ತೊಂದೆಡೆ ನಾನು ಕೂಡ ಹಿರಿಯ ಸದಸ್ಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂಂದು ಹೇಳಿದ್ದಾರೆ.
ಇನ್ನು ಮುಡಾ ಪ್ರಕರಣವನ್ನು ಬೇರೆ ಕಡೆ ತಿರುಗಿಸಲು ನಟ ದರ್ಶನ್ ಫೋಟೋ ಲೀಕ್ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಹ್ಲಾದ್ ಜೋಶಿ ತಿಳಿದವರಾಗಿದ್ದಾರೆ. ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣ ಹಾಗೂ ಆರೋಪವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಆದ್ದರಿಂದ ದರ್ಶನ್ & ಗ್ಯಾಂಗ್ ಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಿದರು.
ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಇದರಲ್ಲಿ ಸಿದ್ದರಾಮಯ್ಯನವರ ಪಾಲು ಏನಿದೆ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸ್ಸು ಬೇಡ , ರಾಜ್ಯಪಾಲರ ನಡವಳಿಕೆ ಮಾತ್ರ ಕಾನೂನು ಬಾಹಿರವಾಗಿದೆ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications