ಉಕ್ಕಿಹರಿಯುತ್ತಿರುವ ತುಂಗಾಭದ್ರಾ: ಹೊನ್ನಾಳಿ, ಹರಿಹರದಲ್ಲಿ ನೂರಾರು ಮಂದಿ ಸ್ಥಳಾಂತರ
ದಾವಣಗೆರೆ,ಜುಲೈ 16: ಮಲೆನಾಡಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ಅಪಾಯದ ಮಟ್ಟ ತಲುಪಿದ್ದು, ಜನರ ಆತಂಕ ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತಿದೆ. ಈಗಾಗಲೇ ಹೊನ್ನಾಳಿ ಹಾಗೂ ಹರಿಹರ ಪಟ್ಟಣದಲ್ಲಿ ನೂರಾರು ಕುಟುಂಬಗಳ ಜನರನ್ನು ಸ್ಥಳಾಂತರ ಮಾಡಿದ್ದು, ಕಾಳಜಿ ಕೇಂದ್ರದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ಮಲೆನಾಡು ಭಾಗದಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೇ ವರುಣ ಸುರಿದಿದ್ದಾನೆ. ಇದರಿಂದಾಗಿ ಹರಿಹರದ ತುಂಗಭದ್ರಾ ನೀರಿನ ಮಟ್ಟ ಹೊತ್ತು ಕಳೆದಂತೆ ಏರುತ್ತಲೇ ಇದೆ. ಹರಿಹರದ ಗಂಗಾ ನಗರದ ಮನೆಗಳು ಜಲಾವೃತವಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮನೆಯಲ್ಲೇ ವಸ್ತುಗಳನ್ನು ಬಿಟ್ಟು ಜನರು ಹೊರ ಬಂದಿದ್ದಾರೆ.
ಪ್ರತಿ ಭಾರಿ ಮಳೆ ಬಂದು ತುಂಗಭದ್ರಾ ನೀರು ಹೆಚ್ಚಾದಾಗಲೆಲ್ಲಾ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗಂಗಾ ನಗರದಲ್ಲಿ ಕಳೆದ 20 ವರ್ಷಗಳಿಂದ ವಾಸವಿರುವ ಜನರ ಗೋಳು ಮುಂದುವರಿದಿದೆ. ಸರಕಾರ ಮನೆ ಕಟ್ಟಿ ಕೊಡುವುದು ಬೇಡ, ಜಾಗನಾದ್ರೂ ಕೊಟ್ರೆ ನಾವೇ ಮನೆ ಕಟ್ಟಿಕೊಳ್ಳುತ್ತೆವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಈಗಾಗಲೇ ತಾಲ್ಲೂಕು ಆಡಳಿತದಿಂದ ಮನೆ ಮುಳುಗಡೆಯಾದ ಕುಟುಂಬಗಳ ಸ್ಥಳಾಂತರ ಕಾರ್ಯ ನಡೆದಿದೆ. ಹರಿಹರ ಪಟ್ಟಣದ ಎಪಿಎಂಸಿಯ ಗೋದಾಮಿಗೆ ಸ್ಥಳಾಂತರಿಸಿ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗಿದೆ. ಸ್ಥಳದಲ್ಲೇ ನಗರಸಭೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಮನೆಗಳು ಮುಳುಗಡೆ, ಜನರು ಸ್ಥಳಾಂತರ
ಈಗಾಗಲೇ ಮನೆ ಮುಳುಗಡೆಯಾದವರನ್ನು ಸ್ಥಳಾಂತರ ಮಾಡಿದ್ದೇವೆ. ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇನ್ನೂ ಕೆಲ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರನ್ನೂ ಸ್ಥಳಾಂತರ ಮಾಡುತ್ತೇವೆ. ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಶೀಘ್ರದಲ್ಲೇ ಮನೆ ನೀಡುವ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಹರಿಹರ ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಸುಮಾರು 40 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಹಲಸಬಾಳು ಗ್ರಾಮದ ಕೆಲವು ಮನೆಗಳಿಗೆ ನದಿ ನೀರು ನುಗ್ಗುವ ಅಪಾಯ ಇದೆ. ಮುಂಜಾಗ್ರತಾ ಕ್ರಮವಾಗಿ ಅಲ್ಲಿಯ ಶಾಲೆಯ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ಹೊನ್ನಾಳಿ ಹಾಗೂ ನ್ಯಾಮತಿಯಲ್ಲಿ 102 ಮಂದಿ ಸ್ಥಳಾಂತರ
ಇನ್ನು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಪರಿಸ್ಥಿತಿ ಇದಕ್ಕಿಂತ ಗಂಭೀರವಾಗಿದೆ. ಹೊನ್ನಾಳಿಯಲ್ಲಿ ಹರಿಯುವ ತುಂಗಾಭದ್ರಾ ನದಿಯ ನೀರಿನ ಮಟ್ಟ 12 ಮೀಟರ್ ಗಿಂತ ಹೆಚ್ಚಾಗಿದೆ. ಇದರಿಂದಾಗಿ ಬಾಲರಾಜ್ ಘಾಟ್ ನ 18 ಕುಟುಂಬಗಳ 102 ಮಂದಿಯನ್ನು ಸಮೀಪದ ಅಂಬೇಡ್ಕರ್ ಭವನದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಜಂಬೂ ಬಜಾರ್ ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿಲ್ಲವಾದರೂ ನದಿ ನೀರು ಯಾವ ಕ್ಷಣದಲ್ಲಾದರೂ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿನ ನಿವಾಸಿಗಳನ್ನು ಗುರುಭವನಕ್ಕೆ ಸ್ಥಳಾಂತರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಸಾಸ್ವೆಹಳ್ಳಿ ಬಾಬಗದ ಸಂತ್ರಸ್ತರನ್ನು ಅಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಗಾಗಲೇ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಮಲ್ಲದೇವರಶೆಟ್ಟಿ ಹಳ್ಳಿಯಲ್ಲಿ ನಿವೇಶನ
ಬಾಲರಾಜ್ ಘಾಟ್ ನ ಸುಮಾರು 23 ಕುಟುಂಬಗಳನ್ನು ಗುರುತಿಸಲಾಗಿದೆ. ಅವರಿಗೆ ಮಲ್ಲದೇವರಶೆಟ್ಟಿ ಹಳ್ಳಿಯಲ್ಲಿ ಸೈಟ್ ಹಂಚಿಕೆ ಮಾಡಲಾಗುವುದು. ಬಳಿಕ ಘಾಟ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗುವುದು. ಈ ಸಂಬಂಧ 400 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಡಿಪಿಆರ್ ಕೂಡ ಈಗಾಗಲೇ ಆಗಿದೆ. ಮಲ್ಲದೇವರಕಟ್ಟೆಯಲ್ಲಿ 1600 ನಿವೇಶನಗಳನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ 2 ಸಾವಿರಕ್ಕಿಂತ ಅಧಿಕ ಅರ್ಜಿಗಳು ಬಂದಿವೆ ಎಂದು ಹೇಳಿದರು. ಬಾಲರಾಜ್ ಘಾಟ್ ನ ಸಂತ್ರಸ್ತರು ನಿವೇಶನ ನೀಡುವಂತೆ ಎಂ. ಪಿ. ರೇಣುಕಾಚಾರ್ಯ ಅವರನ್ನು ಒತ್ತಾಯಿಸಿದರು.

ರಸ್ತೆ ಸಂಪರ್ಕ ಕಡಿತ
ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹರಿಹರ ತಾಲೂಕಿನ ಚಿಮ್ಮನಕಟ್ಟಿ-ಉಕ್ಕಡಗತ್ರಿ ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದ್ದು, ಸೇತುವೆಯ ಮೇಲೆ ಹರಿಯುವ ನೀರಿನಲ್ಲೇ ಪ್ರಾಣ ಒತ್ತೆಯಿಟ್ಟು ಜನರು ಓಡಾಡುತ್ತಿದ್ದಾರೆ. ಸುಮಾರು 50ಕ್ಕೂ ಅಧಿಕ ವರ್ಷಗಳಿಂದ ನದಿ ನೀರು ಉಕ್ಕಿ ಹರಿಯುವುದರಿಂದ ಹಾಗಾಗ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇತ್ತ ಮತ್ತೊಂದು ರಸ್ತೆ ಉಕ್ಕಡಗತ್ರಿ ಫತೇಪುರ- ನಂದಿಗಾವಿ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಬಂದ್ ಆಗಿದೆ. ಅತಿಯಾಗಿ ಮಳೆಯಾದಾಗ ನಡುಗಡ್ಡೆಯಾಗೋ ಉಕ್ಕಡಗಾತ್ರಿ ಗ್ರಾಮದ ನೀರಿನಲ್ಲಿ ಮುಳುಗಡೆಯಾಗೋ ರಸ್ತೆಗೆ ಸೇತುವೆ ಮಾಡೊಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ
ಪ್ರತಿ ಬಾರಿ ಅಧಿಕಾರಿಗಳು ಭೇಟಿ ನೀಡಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆಯೇ ಹೊರೆತು ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications