ದಾವಣಗೆರೆಯಲ್ಲಿ ಮುಂದುವರಿದ ವರುಣನ ಅಟ್ಟಹಾಸ; ಮೂರು ಕೋಟಿಗೂ ಅಧಿಕ ನಷ್ಟ
ದಾವಣಗೆರೆ, ಸೆಪ್ಟೆಂಬರ್, 01: ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಅದರಲ್ಲಿಯೂ ಚನ್ನಗಿರಿ, ಹೊನ್ನಾಳಿಯಲ್ಲಿ ಅಡಿಕೆ ತೋಟಗಳು ಜಲಾವೃತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಇದರಿಂದಾಗಿ ಕೈಗೆ ಬಂದ ಫಸಲು ಬಾಯಿಗೆ ಬರುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡಲಾರಂಭಿಸಿದೆ. ತೋಟಗಳಲ್ಲಿ ಕೆರೆಯಂತೆ ನೀರು ನಿಂತ ಕಾರಣ ರೈತರು ದಿಕ್ಕು ತೋಚದಂತೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.
ಚನ್ನಗಿರಿ ತಾಲೂಕಿನಲ್ಲಿ ಸುಮಾರು 120ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದ್ದರೆ, 250ಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಬೆಳೆಗಳು ಜಲಾವೃತವಾಗಿವೆ. ಭಾರಿ ಮಳೆ ಸುರಿದ ಕಾರಣದಿಂದಾಗಿ ಹಳ್ಳ, ಕೊಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕೆಲವೆಡೆ ಕೋಡಿಗಳು ಬಿದ್ದಿದ್ದು, ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ವಾಹನಗಳ ಓಡಾಟ, ಪಾದಾಚಾರಿಗಳ ಸಂಚಾರ ಸ್ಥಗಿತಗೊಂಡಿದೆ. ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 48 ಮನೆಗಳು ಕುಸಿದಿದ್ದರೆ, 60 ಮನೆಗಳಿಗೆ ಸ್ವಲ್ಪ ಮಟ್ಟಿಗೆ ಹಾನಿ ಉಂಟಾಗಿದೆ. 178 ಹೆಕ್ಟೇರ್ ಮೆಕ್ಕೆಜೋಳ, 35 ಹೆಕ್ಟೇರ್ ಭತ್ತ, 20 ಹೆಕ್ಟೇರ್ ರಾಗಿ ಬೆಳೆಗಳು ಮಳೆರಾಯ ಒಡಲಲ್ಲಿ ನುಂಗಿ ಬಿಟ್ಟಿದ್ದಾನೆ. ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. ಸಂತೇಬೆನ್ನೂರು ಒಂದರಲ್ಲೇ 29 ಮನೆಗಳು ಹಾನಿಗೀಡಾಗಿವೆ.

ಮಳೆರಾಯನ ಆರ್ಭಟಕ್ಕೆ ದೇವನಗರಿ ತತ್ತರ
ನಲ್ಲೂರು, ಕಗತೂರು, ಸೋಮ ಶೆಟ್ಟಿಹಳ್ಳಿ, ದೇವರ ಹಳ್ಳಿ, ದೊಡ್ಡೇರಿ ಕಟ್ಟೆ, ಕಾಕನೂರು, ಬೆಳ್ಳಿಗನೂಡು, ಮಾಡಾಳ್ ಗ್ರಾಮದಲ್ಲಿ ಅಪಾರ ಹಾನಿ ಸಂಭವಿಸಿದ್ದು, 1.40 ಕೋಟಿ ರೂಪಾಯಿಗೂ ಹೆಚ್ಚು ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಮಳೆಯಿಂದ ಹಾನಿಗೀಡಾದ ಗ್ರಾಮಗಳಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಸ್ಥಳಕ್ಕೆ ಬಂದ ಶಾಸಕರು, ಕೂಡಲೇ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಮನೆಗಳಿಗೆ ನೀರು ನುಗ್ಗಿದ್ದು, ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.

ಶೀಘ್ರದಲ್ಲಿಯೇ ಕಾಮಗಾರಿ ಶುರು
ಬಸವಾಪಟ್ಟಣ ಹೋಬಳಿಯ ಕೆಂಗಾಪುರ, ಕಬ್ಬಳ, ಚಿರಡೋಣಿ, ದೊಡ್ಡಘಟ್ಟ, ಬೆಳಲಗೆರೆ, ತ್ಯಾವಣಗಿ ಗ್ರಾಮದ ಬಳಿಯ ಹಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ದೇವರಹಳ್ಳಿ ಕೆರೆ ಹಾಗೂ ಹೊಂಡ ತುಂಬಿದ ಹರಿದ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಲೇ ಇದೆ. ಕೆರೆ ಏರಿ ವಿಸ್ತರಣೆಗೆ ಆರು ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಶುರು ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಹಾನಿಗೀದಾಡ ಪ್ರದೇಶಗಳು
ಮಾಯಕೊಂಡದಲ್ಲಿಯೂ ಮಳೆ ಆರ್ಭಟ ಜೋರಾಗಿದ್ದು, ಆನಗೋಡು, ಬಾಡಾ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕೊಡಗನೂರು, ರಾಂಪುರ, ನರಗನಹಳ್ಳಿ ಸೇರಿದಂತೆ ಹಲವೆಡೆ ಕೆರೆಗಳ ಕೋಡಿ ಬಿದ್ದಿದ್ದು, ಅಲ್ಲಿನ ಅಕ್ಕಪಕ್ಕದಲ್ಲಿರುವ ಬೆಳೆಗಳು ಕೊಚ್ಚಿ ಹೋಗಿವೆ. ಉಪ್ಪಾರ ನಾಗರಾಜ್, ಕೃಷ್ಣಪ್ಪ, ಮಂಜುನಾಥ್ ಹಾಗೂ ಹನುಮಂತಪ್ಪ ಎಂಬುವವರಿಗೆ ಸೇರಿದ ನರ್ಸರಿಗೆ ನೀರು ನುಗ್ಗಿದೆ. ಮತ್ತೊಂದೆಡೆ ಸಮೀಪದ ಹಿಂಡಸಕಟ್ಟೆ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.

ಮಾಯಕೊಂಡದ ರಸ್ತೆಗಳು ಜಲಾವೃತ
ಮಾಯಕೊಂಡದಿಂದ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಶರಂತಿ ಹಳ್ಳ ರಸ್ತೆ, ಇಟ್ಟಿಗೆ ಹಳ್ಳ ರಸ್ತೆ, ಕರಲಹಳ್ಳಿ, ಉಪ್ಪಾರ ಬೀದಿಯ ರೈಲ್ವೇ ಅಂಡರ್ ಪಾಸ್‌ನ ಮುಖ್ಯ ರಸ್ತೆಗಳು ಜಲಾವೃತ ಆಗಿವೆ. ಇನ್ನು ಮಾಯಕೊಂಡ, ಹೆದ್ನೆ, ರಾಂಪುರ, ಬುಳ್ಳಾಪುರ ಗ್ರಾಮಗಳು ದ್ವೀಪದಂತಾಗಿವೆ. ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ಭತ್ತದ ಪೈರು ನೀರು ಪಾಲಾಗಿದೆ. ಹುಣಸಘಟ್ಟ, ಕ್ಯಾಸಿನಕೆರೆ, ಕುಳಗಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಭಕ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ಬಗ್ಗೆ ಪ್ರಿತಿಕ್ರಿಯಿಸಿದ ಕುಳಗಟ್ಟೆಯ ರೈತ ಹಾಲೇಶಪ್ಪ, ಗದ್ದೆಯನ್ನು ಗುತ್ತಿಗೆ ಪಡೆದು ನಾಟಿ ಮಾಡಿದ್ದೆ. ಈಗ ಸಂಪೂರ್ಣ ಜಲಾವೃತ ಆಗಿದೆ. ಮುಂದೇನು ಮಾಡಬೇಕು ಎಂದು ತೋಚಿಸುತ್ತಿಲ್ಲ. ವರುಣನ ಅವಕೃಪೆಯಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.












Click it and Unblock the Notifications