ಹರಿಹರ: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ
ದಾವಣಗೆರೆ, ಜನವರಿ, 29: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪರ ಆರೋಗ್ಯದಲ್ಲಿ ಏರುಪೇರಾದ ಘಟನೆ ಹರಿಹರ ಪಟ್ಟಣದಲ್ಲಿ ನಡೆದಿದೆ. ಕೂಡಲೇ ಅವರನ್ನು ಹರಿಹರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸದ್ಯಕ್ಕೆ ಚೇತರಿಸಿಕೊಂಡಿರುವ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಹರಿಹರದ ಗುರುಭವನದಲ್ಲಿ ಭಾನುವಾರ ಆಧುನಿಕ ಕನ್ನಡ ಸಾಹಿತ್ಯ ಸಂವೇದನೆಯ ಬಹುರೂಪಗಳು ಎಂಬ ವಿಷಯ ಕುರಿತಾದ ಒಂದು ದಿನದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಬರಗೂರು ರಾಮಚಂದ್ರಪ್ಪರ ಅವರು ವೇದಿಕೆಯಲ್ಲಿ ಭಾಷಣ ಮಾಡಿದ ಬಳಿಕ ಹೊರಡಲು ಅಣಿಯಾಗಿದ್ದರು. ಆಗ ಕಾರಿನತ್ತ ಬಂದೊಡನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಅಲ್ಲಿಯೇ ಸ್ಥಳದಲ್ಲಿ ಇದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
ಹಿರಿಯ ಸಾಹಿತಿ ನೀಡಿದ ಸ್ಪಷ್ಟನೆ ಏನು?
ಇದಕ್ಕೂ ಮುನ್ನ ಹಿರಿಯ ಸಾಹಿತಿ ಡಾ. ಎಂ. ಜಿ ಈಶ್ವರಪ್ಪ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಎಚ್.ಎ. ಭಿಕ್ಷಾವರ್ತಿಮಠ, ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿ.ವಿ. ಪಾಟೀಲ್, ಎ. ಬಿ. ರಾಮಚಂದ್ರ ಅವರೊಂದಿಗೆ ಚರ್ಚೆ ನಡೆಸಿದ್ದರು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಎಲ್ಲಾ ಗಣ್ಯರು ಮಾತನಾಡುವಾಗ ವೇದಿಕೆಯಲ್ಲಿ ಕುಳಿತಿದ್ದ ಬರಗೂರು ರಾಮಚಂದ್ರಪ್ಪರು ಲವಲವಿಕೆಯಿಂದ ಇದ್ದರು.

ವೇದಿಕೆಯಲ್ಲಿ ಕುಸಿದುಬಿದ್ದ ಹಿರಿಯ ಸಾಹಿತಿ
ಗುರುಭವನದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಪ್ರವಾಸಿ ಮಂದಿರಕ್ಕೆ ತೆರಳುವ ವೇಳೆಯಲ್ಲಿ ತಲೆ ಸುಸ್ತು ಬಂದು ಬಿದ್ದರು. ಕೂಡಲೇ ಅವರನ್ನು ಹರಿಹರ ಪಟ್ಟಣದ ಅಕ್ಷಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸುಧಾರಿಸಿಕೊಂಡ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅತಿಯಾದ ಪ್ರಯಾಣದ ಪ್ರಯಾಸದಿಂದ ಆಯಾಸವಾಗಿದೆ. ಇಸಿಜಿ, ಬಿ.ಪಿ., ಶುಗರ್ ಪರೀಕ್ಷೆ ನಡೆಸಲಾಯಿತು. ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ನನಗೇನೂ ಆಗಿಲ್ಲ. ನನ್ನ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ತಲೆ ಸುಸ್ತು ಬಂತು ಅಷ್ಟೇ. ಸ್ವಲ್ಪ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಯಾವುದೇ ತೊಂದರೆ ಇಲ್ಲ ಆರಾಮಾಗಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬೆಂಗಳೂರಿಗೆ ಹೋಗುತ್ತೇನೆ. ನಿಮಗೆಲ್ಲರಿಗೂ ಮತ್ತೊಮ್ಮೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಇನ್ನು ಬರಗೂರು ರಾಮಚಂದ್ರಪ್ಪ ಜೊತೆಗಿದ್ದ ಎ. ಬಿ. ರಾಮಚಂದ್ರಪ್ಪ ಅವರು ಮಾತನಾಡಿ, ಈಗ ಅವರು ಆರಾಮಾಗಿದ್ದಾರೆ. ನಾವೆಲ್ಲರೂ ಅವರ ಜೊತೆ ಮಾತನಾಡಿದ್ದೆೇವೆ. ಊಟ ಮಾಡಿ ಬೆಂಗಳೂರಿಗೆ ತೆರಳುತ್ತಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications