ಹರಪನಹಳ್ಳಿಯ ತಾಲೂಕು, ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಳ್ಳಾರಿಗೆ
ದಾವಣಗೆರೆ, ಜನವರಿ 07 : ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸ್ಥಾನವನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ವಿ.ವೆಂಕಟೇಶ್ ಅವರ ಆದೇಶದ ಬಳಿಕ ತಾಲೂಕು ಪಂಚಾಯಿತಿಯ 23 ಸದಸ್ಯ ಸ್ಥಾನ ಮತ್ತು ಜಿಲ್ಲಾ ಪಂಚಾಯಿತಿಯ 7 ಸದಸ್ಯ ಸ್ಥಾನ ದಾವಣಗೆರೆಯ ನಂಟು ಕಳೆದುಕೊಂಡು ಬಳ್ಳಾರಿಗೆ ಸೇರಿದೆ.
ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಲು ಕರ್ನಾಟಕ ಸರ್ಕಾರ ಡಿಸೆಂಬರ್ 24, 2018ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಬಳಿಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ.

ಹರಪನಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಪಂಚಾಯಿತಿ ಪ್ರತಿನಿಧಿಸುವ ತೆಲಿಗಿ, ಉಚ್ಚಂಗಿದುರ್ಗ, ಅರಸೀಕೆರೆ, ಚಿಟಗೇರಿ, ಕಂಚೀಕೆರೆ, ಹಲುವಾಗಲು, ನೀಲಗುಂದ ಸದಸ್ಯರ ಸ್ಥಾನವು ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶ ಸ್ಪಷ್ಟಪಡಿಸಿದೆ.
ರಾಜೀನಾಮೆ : ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹರಪನಹಳ್ಳಿ ತಾಲೂಕಿಗೆ ನೀಡಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತೆಲಿಗೆ ಕ್ಷೇತ್ರದ ಕೆ.ಆರ್.ಜಯಶೀಲಾ, ಉಪಾಧ್ಯಕ್ಷರಾಗಿದ್ದ ಉಚ್ಚಂಗಿದುರ್ಗ ಕ್ಷೇತ್ರದ ರಶ್ಮಿ ರಾಜಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ರಚನೆಯಾದಾಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರಿಸಲಾಗಿತ್ತು. ಆದರೆ, ತಾಲೂಕಿನ ಜನರು ಪುನಃ ಜಿಲ್ಲೆಯನ್ನು ಬಳ್ಳಾರಿಗೆ ಸೇರಿಸಲು ಹೋರಾಟ ಮಾಡಿದ್ದರಿಂದ, ಕರ್ನಾಟಕ ಸರ್ಕಾರ ತಾಲೂಕನ್ನು ಬಳ್ಳಾರಿಗೆ ವಾಪಸ್ ಸೇರಿಸಿದೆ.












Click it and Unblock the Notifications