ಇಂದಿನಿಂದ ಶಕ್ತಿ ದೇವತೆ ದುರ್ಗಾಂಬಿಕಾ ಜಾತ್ರೆ: ಇಲ್ಲಿನ ವಿಶೇಷ ಆಚರಣೆ ಏನು ಗೊತ್ತಾ?
ದಾವಣಗೆರೆಯ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾದೇವಿ ಹಾಗೂ ವಿನೋಬನಗರದ ಚೌಡೇಶ್ವರಿ ಜಾತ್ರೆಯು ಮಾರ್ಚ್ 19ರಿಂದ ಆರಂಭವಾಗಲಿದ್ದು ಇಡೀ ಊರಿಗೆ ಊರು ಜಾತ್ರೆಗೆ ಸಜ್ಜಾಗಿದೆ.
ದುಗ್ಗಮ್ಮನ ಜಾತ್ರೆಗೆ ಮನೆ ಮನೆಗಳು, ಕೇರಿಗಳು, ದೇವಸ್ಥಾನಗಳು ಬಣ್ಣಬಣ್ಣಗಳ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಕುಡಿಯುವ ನೀರು, ಸ್ವಚ್ಚತೆ, ವಾಹನ ನಿಲುಗಡೆ, ಬಂದೋಬಸ್ತ್ ಸೇರಿ ಸಂಬಂಧಿಸಿದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು ಜಾತ್ರೆಗೆ ಇಂದು ಸಜ್ಜಾಗಿವೆ.

ಜಾತ್ರೆ ಪ್ರಯುಕ್ತ ಮಾರ್ಚ್ ಭಾನುವಾರದಿಂದಲೇ ಅನೇಕ ಪೂಜಾ ಕಾರ್ಯಗಳು ಆರಂಭವಾಗಿವೆ. ದುರ್ಗಾಂಬಿಕಾದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ, ರಾತ್ರಿ ಭಕ್ತರ ಸಮ್ಮುಖದಲ್ಲಿ ಸಾರು ಹಾಕುವ ಕಾರ್ಯ ನೆರವೇರಿತು. ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬಂದು ಅಮ್ಮನವರ ದರ್ಶನ ಪಡೆದರು.
ತಿಂಗಳ ಹಿಂದೆಯೇ ಜಾತ್ರೆ ಹಂದರಗಂಬ ಪೂಜೆ ನರೆವೇರಿದ್ದು ಪ್ರತಿವರ್ಷ ವಿಭಿನ್ನ ರೀತಿ ಮಂಟಪ ನಿರ್ಮಿಸಲಾಗಿದೆ. ಮನೆಗಳು, ಅಂಗಡಿಗಳ ಮುಂದೆ ದೇವಿಯ ಹರಕೆಗಾಗಿ ತಂದ ಕುರಿಗಳು ಕಂಡು ಬರುತ್ತಿವೆ. ಹಬ್ಬದ ಕುರಿಯ ಆರೈಕೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ತೊಡಗಿದ್ದಾರೆ. ನಿತ್ಯವೂ ಕುರಿಗೆ ಹಸಿ ಹುಲ್ಲು, ಕುರಿ ಮಾರಾಟ ಜೋರಾಗಿದೆ. ಇಲ್ಲಿ ಕನಿಷ್ಠ 18 ಸಾವಿರ ರೂಪಾಯಿಯಿಂದ ಲಕ್ಷಾಂತರ ರೂಪಾಯಿವರೆಗೆ ಕುರಿ ಖರೀದಿಸಿ, ತಂದು ಸಾಕುತ್ತಿರುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಹೀಗಾಗಿ ಜಾತ್ರೆಗೆ ಕುರಿಗಳ ಮಾರಾಟ ಜೋರಾಗಿದೆ.
22,23,24ಕ್ಕೆ ಬಯಲು ಕುಸ್ತಿ
ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ 22,23,24ರ ಮೂರು ದಿನ ಕಾಲ ಇಲ್ಲಿನ ಬೀರಲಿಂಗೇಶ್ವರ ಮೈದಾನದ ಕುಸ್ತಿ ಅಖಾಡದಲ್ಲಿ ಪ್ರಸಿದ್ಧ ಪೈಲ್ವಾನರುಗಳಿಂದ ಮಲ್ಲಯುದ್ಧ ಬಯಲು ಜಂಗಿ ಕುಸ್ತಿ ನಡೆಯಲಿದೆ.
ಜೊತೆಗೆ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ. ನೀರು ಮಜ್ಜಿಗೆ ಕೂಡ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಲೋಕಿಕೆರೆ, ಶಿರಮಗೊಂಡನಹಳ್ಳಿ ಶಾಮನೂರು, ನಾಗನೂರು, ಎಲೆಬೇತೂರು, ಅವರಗೆರೆ, ಮಾಗಾನಹಳ್ಳಿ, ಆವರಗೊಳ್ಳ ಸುತ್ತಲಿನ ಗ್ರಾಮಸ್ಥರು ತಂತಮ್ಮ ಊರುಗಳಿಂದ ಜಾತ್ರೆಗೆ ಆಗಮಿಸಲಿದ್ದಾರೆ. ಇನ್ನೂ ಜಾತ್ರೆ ಅಂದರೆ ಹೆಣ್ಣುಮಕ್ಕಳಿಗೆ, ಮಕ್ಕಳಿಗೆ ಹಬ್ಬವೋ ಹಬ್ಬ. ಹೊಸ ಬಟ್ಟೆ, ಆಟಿಕೆ, ಇನ್ನಿತರ ಸಾಮಾನುಗಳ ಖರೀದಿ ಭರಾಟೆ ಇಲ್ಲಿ ಜೋರಾಗಿರುತ್ತದೆ. ಇನ್ನೂ ಆಟ ಆಡಲು ಜೋಕಾಲಿ, ಬೋಟ್, ಮಕ್ಕಳ ರೈಲು ಎಲ್ಲವೂ ಇವೆ.
ಮಾರ್ಚ್ 19ರ ಮಂಗಳವಾರ ಬೆಳಿಗ್ಗೆ ಶೀದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ದಾಸೋಹದ ಮಹೋಪಕರಣ ಸಮಾರಂಭೋತ್ಸವ, ರಾತ್ರಿ ಅಮ್ಮನವರಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. 9 ಗಂಟೆಗೆ ಸಾಂಸ್ಕ್ರತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನ ಜೊತೆಗೆ ಬೆಳ್ಳಿಯ ರಥದಲ್ಲಿ ಅಮ್ಮನವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಮಾರ್ಚ್ 20ರ ಬುಧವಾರ ಪದ್ಧತಿ ಪ್ರಕಾರ ದುರ್ಗಾಂಬಿಕಾ ದೇವಿ ಮಹಾಪೂಜೆ ಹಾಗೂ ಬೆಳಿಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಲಿದೆ. ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಮಾರ್ಚ್ 22ರಿಂದ ಏಪ್ರಿಲ್ 8 ಗಂಟೆಯಿಂದ ನಾಡಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲಾಗಿದೆ.












Click it and Unblock the Notifications