ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಗೆ ಬುಧವಾರ ಸಿದ್ದರಾಮಯ್ಯ; ನಾನಾ ಲೆಕ್ಕಾಚಾರಗಳು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 28: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆಗೆ ಸೆಪ್ಟಂಬರ್ 29ರಂದು ಆಗಮಿಸುತ್ತಿದ್ದಾರೆ. ಈ ಭೇಟಿ ನಾನಾ ವಿಚಾರಗಳಿಂದ ಕುತೂಹಲ ಕೆರಳಿಸಿದೆ. ಹಲವಾರು ಲೆಕ್ಕಾಚಾರಗಳು ಶುರುವಾಗಿವೆ. ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಾರೆ.

ಸಿದ್ದರಾಮಯ್ಯ ಹೆಚ್. ಕಾಂತರಾಜು ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಸೇರಲಿದ್ದಾರೆ.

ಬೆಳಗ್ಗೆ 11. 30ಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.

 Former CM Siddaramaiah Davanagere Tour On September 29

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಸಿಎಂ ದಿವಂಗತ ಡಿ. ದೇವರಾಜ ಅರಸು ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆಯನ್ನು ಸಿದ್ದರಾಮಯ್ಯ ಮಾಡಲಿದ್ದಾರೆ. ಬಳಿಕ ಡಿಸಿ ಕಚೇರಿಯವರೆಗೆ ಪಾದಯಾತ್ರೆ ಇಲ್ಲವೇ, ಬೈಕ್ ನಲ್ಲಿ ತೆರಳಿ ಡಿಸಿ ಅವರಿಗೆ ಮನವಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಕುರುಬರ ಸಂಘದ ವತಿಯಿಂದ ಮಧ್ಯಾಹ್ನ 1.30ಕ್ಕೆ ನಗರದ ತ್ರಿಶೂಲ್ ಕಲಾ ಭವನದಲ್ಲಿ ಕುರುಬ ಸಮಾಜದ ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕುರುಬರ ಸಂಖ್ಯೆಯೂ ಹೆಚ್ಚಿದ್ದು, ಮತ್ತೆ ಸೆಳೆಯುವ ಪ್ರಯತ್ನವನ್ನು ಮಾಡಲಿದ್ದಾರೆ. ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುತ್ತಿದ್ದಾರೆ.

ದಾವಣಗೆರೆ ರಾಜಕಾರಣಿಗಳ ಪಾಲಿಗೆ ಅದೃಷ್ಟದ ತಾಣ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಹೊಸ ಪಕ್ಷ ಕಟ್ಟುವಾಗ ಮಾಜಿ ಸಿಎಂ ಎಸ್. ಬಂಗಾರಪ್ಪ ಇಲ್ಲೇ ದೊಡ್ಡ ಸಮಾವೇಶ ನಡೆಸಿ ಯಶಸ್ವಿಯಾಗಿದ್ದರು.

 Former CM Siddaramaiah Davanagere Tour On September 29

ಅದೇ ರೀತಿಯಲ್ಲಿ ಬಿಜೆಪಿಯು ಇಲ್ಲೇ ಬಿಜೆಪಿ ಕೋರ್ ಕಮಿಟಿ, ಕಾರ್ಯಕಾರಿಣಿ ಸಭೆ ನಡೆಸಿತ್ತು. ಬಿಜೆಪಿಯ ಅತ್ಯಂತ ಮಹತ್ವದ ಕಾರ್ಯಕಾರಿಣಿ ನಡೆಸಲು ಹಲವು ಕಾರಣಗಳಿದ್ದವು. ಅದೇ ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿಯ ಭೇಟಿ ಸಾಕಷ್ಟು ವಿಶೇಷತೆಗಳಿಗೂ ಕಾರಣವಾಗಿದೆ. ಇನ್ನು ಸಿದ್ದರಾಮಯ್ಯ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದರೂ ಇದು ಅಹಿಂದ ಅಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರೂ, ಇದರ ಹಿಂದಿನ ಕಾರ್ಯತಂತ್ರವೇನು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ನಗರದಾದ್ಯಂತ ಎಲ್ಲೆಂದರಲ್ಲಿ ಸಿದ್ದರಾಮಯ್ಯ ಸ್ವಾಗತಿಸುವ ಬ್ಯಾನರ್, ಕಟೌಟ್ ರಾರಾಜಿಸುತ್ತಿವೆ. ಚುನಾವಣೆಗೆ ಇನ್ನು ಸಾಕಷ್ಟು ಸಮಯ ಇದ್ದರೂ ಈಗಿನಿಂದಲೇ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಆರಂಭಿಸಿದರಾ? ಎಂಬ ಪ್ರಶ್ನೆಯೂ ಕಾಡಲಾರಂಭಿಸಿದೆ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಆಗಿರುವ ಕಾರಣ ಇಲ್ಲಿಂದಲೇ ಆರಂಭಿಸಿದರೆ ಯಶಸ್ಸು ಗಳಿಸಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದೆ ಅಡಗಿರಬಹುದು.

ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಶಾಮನೂರು ಶಿವಶಂಕರಪ್ಪ ಹಾಗೂ ಹರಿಹರದ ರಾಮಪ್ಪ ಕಾಂಗ್ರೆಸ್‌ನಿಂದ ಗೆದ್ದು ಬಂದವರು. ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿಯವರು ಗೆದ್ದಿದ್ದಾರೆ.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಶಾಸಕರು, ಜಿಲ್ಲೆಗೆ ಆಗಿರುವ ಅನ್ಯಾಯವನ್ನಿಟ್ಟುಕೊಂಡು ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಿದ್ದರಾಮಯ್ಯ ಕೆಲವು ಸಲಹೆಗಳನ್ನು ನೀಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ಇನ್ನು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ರೆಡಿ ಇದ್ದೇನೆ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪುಟಿದೇಳುವಂತೆ ಮಾಡಲು ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅದ್ಭುತ ಸಾಧನೆ ಮಾಡಲು ಏನೆಲ್ಲಾ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಬಿಜೆಪಿಯ ಕಾರ್ಯಕಾರಣಿ ಬಳಿಕ ಬೆಣ್ಣೆನಗರಿ ಮತ್ತೊಮ್ಮೆ ರಾಜಕೀಯ ನಾಯಕರ ಕಲರವಕ್ಕೆ ಸಾಕ್ಷಿಯಾಗುತ್ತಿದೆ. ಸಿದ್ದರಾಮಯ್ಯನವರ ಭೇಟಿಯು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿರುವುದು ನಿಜ.

English summary
Leader of opposition Siddaramaiah will visit Davanagere on September 29, 2021. He will participate in various functions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X