ದಾವಣಗೆರೆ; ಮಾರ್ಚ್ 13ರಿಂದ ಶ್ರೀ ದುರ್ಗಾಂಬಿಕ ಜಾತ್ರೆ
ದಾವಣಗೆರೆ, ಮಾರ್ಚ್ 06: ದಾವಣಗೆರೆ ನಗರದ ಪ್ರಸಿದ್ಧ ಶ್ರೀ ದುರ್ಗಾಂಬಿಕ ಜಾತ್ರೆ ಮಾರ್ಚ್ 13 ರಿಂದ 16 ರವರಗೆ ನಡೆಯಲಿದೆ. ದೇವರ ಕೃಪೆಗೆ ಪಾತ್ರರಾಗಲು ಪ್ರಾಣಿ ಹಿಂಸೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ಶ್ರೀ ದುರ್ಗಾಂಬಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ದೇವಾಲಯದ ಧರ್ಮದರ್ಶಿಗಳು, ಟ್ರಸ್ಟ್ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಜಾತ್ರೆಯಲ್ಲಿ ಯಾವುದೇ ಪ್ರಾಣಿ ಬಲಿ ಆಗಬಾರದು. ಪ್ರಾಣಿ ಹಿಂಸೆ ಮಹಾಪಾಪ ಎಂದು ನಂಬಿಕೊಂಡು ಬಂದಿರುವವರು ನಾವು. ದೇವರು ಭಕ್ತಿಯನ್ನು ಬಯಸುತ್ತಾನೆಯೇ ಹೊರತು ಹಿಂಸೆಯನ್ನಲ್ಲ" ಎಂದರು.

"ನಮ್ಮ ಕಾನೂನು ಕೂಡ ಅದನ್ನೇ ಹೇಳುತ್ತದೆ. ಹಾಗಾಗಿ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಯಾವುದೇ ರೀತಿಯ ಪ್ರಾಣಿಹಿಂಸೆ ಮಾಡದೆ ಕೇವಲ ಸಿರೆಂಜ್ ಮೂಲಕ ಕೋಣದ ರಕ್ತವನ್ನು ತೆಗೆದು ತಾಯಿಗೆ ಅರ್ಪಿಸಿ ಜಾತ್ರೆ ಆಚರಿಸೋಣ" ಎಂದು ಕರೆ ನೀಡಿದರು.
"ಬೆತ್ತಲೆ ದೇಹದ ಮೇಲಿನ ಬೇವಿನುಡಿಗೆ, ಮುತ್ತು ಕಟ್ಟುವುದು ಮುಂತಾದ ಕಾನೂನು ಪ್ರಕಾರ ನಿಷೇಧಕ್ಕೊಳಗಾಗಿರುವ ಆಚರಣೆಗಳನ್ನು ಮಾಡದೆ ಕೈಯಲ್ಲಿ ಬೇವಿನ ಎಸಳನ್ನು ಹಿಡಿದು ಹರಕೆ ತೀರಿಸೋಣ. ಒಂದು ವೇಳೆ ದೂರುಗಳು ಬಂದರೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಹಾಗೂ ದೇವಾಲಯದ ಕಮಿಟಿಯವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.
"ಜಾತ್ರೆಯ ಆಚರಣೆ ವೇಳೆ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾತ್ರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಇಲಾಖೆಗಳು ಈ ಹಿಂದಿನ ವರ್ಷಗಳಲ್ಲಿ ನಿರ್ವಹಿಸಿರುವಂತೆ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು. ದೇವಸ್ಥಾನದ ಆವರಣದಲ್ಲಿ ನಡೆಯುವ ಉರುಳು ಸೇವೆ, ಧೀಡ್ ನಮಸ್ಕಾರಗಳಿಗೆ ಅನುವಾಗುವಂತೆ ಪಾಲಿಕೆ ವತಿಯಿಂದ ಮರಳಿನ ವ್ಯವಸ್ಥೆ ಮಾಡಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
"ಒಂದು ವಾರ ಪೂರ್ತಿ ಸರಾಗ ನೀರು ಸರಬರಾಜು ಆಗಬೇಕು, ನಗರದ 45 ವಾರ್ಡ್‍ಗಳಲ್ಲಿಯೂ ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು, ಜಾತ್ರೆಯನ್ನು ಒಂದು ರೀತಿ ದಾವಣಗೆರೆ ಹಬ್ಬ ಎಂಬಂತೆ ಆಚರಿಸಲು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕೆಂದರು. ಪ್ಲಾಸ್ಟಿಕ್ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಅಳವಡಿಸುವುದನ್ನು ನಿಷೇಧ ಮಾಡಲಾಗಿದ್ದು, ಪ್ಲಾಸ್ಟಿಕ್ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾತನಾಡಿ, "ಜಾತ್ರೆಯು ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಹಾಗಾಗಿ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಅಲ್ಲಲ್ಲಿ ಕಸದ ಬುಟ್ಟಿಗಳು ಇಟ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭಕ್ತಾದಿಗಳಿಗೆ ಮಾಹಿತಿ ಒದಗಿಸಲು ನಾಮಫಲಕಗಳನ್ನು ಅಳವಡಿಸಬೇಕು. ಕಾನೂನಿನಲ್ಲಿ ಪ್ರಾಣಿಬಲಿಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಆಚರಣೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.
"ಎಲ್ಲಾದರೂ ಪ್ರಾಣಿ ಬಲಿ ನೀಡುವ ವರದಿಗಳು ಬಂದಲ್ಲಿ ಸಾಕ್ಷಿಗಳು ದೊರೆತರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ನಗರದಾದ್ಯಂತ ಸಿಸಿಟಿವಿ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ದಟ್ಟಣೆ ನಿಯಂತ್ರಣ ಕುರಿತು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಆಚರಣೆ ಮಾಡಬೇಕು. ದೇವದಾಸಿ ಪದ್ಧತಿ, ಬೇವಿನ ಉಡುಗೆಯಂತಹ ಮೂಢನಂಬಿಕೆಗಳನ್ನು ಆಚರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದರು.
ದೇವಾಲಯದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, "ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹಾಗೂ ವಿವಿಧ ಇಲಾಖೆಗಳು ಎಲ್ಲ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ" ಮನವಿ ಮಾಡಿದರು.
ಜಾತ್ರೆಯ ಅಂಗವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರದ ಕೋವಿಡ್ ಮಾರ್ಗಸೂಚಿಯ ಅನ್ವು ಸರಳವಾಗಿ ಕುಸ್ತಿ ಪಂದ್ಯಾವಳಿ ಹಾಗೂ ಕುರಿ ಕಾಳಗಗಳನ್ನು ಆಯೋಜನೆ ಮಾಡಲಾಗಿದೆ.












Click it and Unblock the Notifications