ಲಸಿಕೆ ಪಡೆಯಲು ಬಂದವರನ್ನು ಕೈ ಮುಗಿದು ಸ್ವಾಗತಿಸಿದ ಡಿಸಿ!
ದಾವಣಗೆರೆ, ಏಪ್ರಿಲ್ 27; ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಜನರು ಲಸಿಕೆ ಪಡೆಯಲು ಉತ್ಸಾಹ ತೋರುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನವೂ ವೇಗವಾಗಿ ಸಾಗುತ್ತಿದೆ.
ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಳ್ಳಲು ಜನರ ದಂಡೇ ಹರಿದು ಬಂತು. ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಲಸಿಕೆಯನ್ನು ಪಡೆದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಲಸಿಕೆ ನೀಡಲು ಸಕಲ ವ್ಯವಸ್ಥೆ ಮಾಡಿಕೊಂಡು ನಿತ್ಯವೂ ಕನಿಷ್ಠ 600 ರಿಂದ ಗರಿಷ್ಠ 800 ಜನರಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ.

ಮೋತಿ ವೀರಪ್ಪ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಆರೋಗ್ಯಾಧಿಕಾರಿ ಡಾ. ನಾಗರಾಜ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಹಿರಿಯ ನಾಗರಿಕನ್ನು ಕೈ ಮುಗಿದು ಸ್ವಾಗತಿಸಿದರು.
ಬಳಿಕ, ಲಸಿಕೆ ಹಾಕುತ್ತಿರುವುದನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪರಿಶೀಲನೆ ನಡೆಸಿದರು. ಈ ವೇಳೆ ಲಸಿಕೆ ಹಾಕಿಸಿಕೊಂಡ ಹಾಗೂ ಹಾಕಿಸಿಕೊಳ್ಳಲು ಕಾದು ಕುಳಿತ್ತಿದ್ದ ಜನರನ್ನು ಕೈ ಮುಗಿದು ಪ್ರೀತಿಯಿಂದ ಮಾತನಾಡಿಸಿ ಮಾಹಿತಿ ಪಡೆದುಕೊಂಡರು.
ಈ ಹಿಂದೆ ಪ್ರಥಮ ಹಂತದಲ್ಲಿ ನಾವೇ ಸ್ವತಃ ಲಸಿಕೆ ಹಾಕಿಸಿಕೊಂಡು ಜನರಿಗೆ ಕೈ ಮುಗಿದು ಮನವಿ ಮಾಡಿದ್ದೆವು. ಆದರೆ, ಯಾರು ಮುಂದೆ ಬರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪಾಸಿಟಿವ್ ಕೇಸ್‌ಗಳು ಸಹ ಬಂದಿವೆ.
ಹೀಗಾಗಿ, ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ಧಾರೆ. ಇದು ನಮಗೂ ಸಾಕಷ್ಟು ಖುಷಿ ತಂದಿದ್ದು, ನಮಗೂ ಕೆಲಸ ಮಾಡಲು ಧೈರ್ಯ ಬರುತ್ತಿದೆ. ಹೀಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಕೊರೊನಾ ನಿಯಂತ್ರಣಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಹೆದರಬೇಡಿ. ನಿಮ್ಮ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾದರೂ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದರು.












Click it and Unblock the Notifications