ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಚಿಂದೋಡಿ ಲೀಲಾ ಹೆಸರಿಡಿ, ಉಗ್ರ ಹೋರಾಟದ ಎಚ್ಚರಿಕೆ
ದಾವಣಗೆರೆ, ಡಿಸೆಂಬರ್, 07: ದಾವಣಗೆರೆಯಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಖ್ಯಾತ ನಟಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಚಿಂದೋಡಿ ಲೀಲಾರ ಹೆಸರು ಇಡಬೇಕು ಎಂದು ಸಮಗ್ರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅವಿನಾಶ್ ಬಿ.ಅಭಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಗೆ ಮನೆಯಿಂದ ಹಣ ತಂದಿಲ್ಲ. ಜನರ ತೆರಿಗೆ ಹಣದಿಂದ ಅಭಿವೃದ್ಧಿ ಮಾಡಿದ್ದಾರೆ. ಹಾಗಿದ್ದರೂ ಅವರವರ ಮನೆಯವರ, ತಂದೆ, ತಾಯಿ ಹೆಸರು ಇಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ನಗರಾಭಿವೃದ್ಧಿ ಸಚಿವರು ಸೇರಿದಂತೆ ಇತರೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸ್ಪಂದನೆ ಸಿಗದಿದ್ದರೆ ಬಸ್ ನಿಲ್ದಾಣ ಉದ್ಘಾಟನೆ ವೇಳೆ ಉಗ್ರ ಹೋರಾಟ ನಡೆಸಲಾಗುವುದು. ಉದ್ಘಾಟನೆ ವೇಳೆ ಚಿಂದೋಡಿಲೀಲಾ ಹೆಸರು ಹೊರತುಪಡಿಸಿ ಬೇರೆ ಯಾವುದೇ ಹೆಸರು ಇಟ್ಟರೆ ನಾಮಫಲಕಕ್ಕೆ ಮಸಿ ಬಳಿಯಲಾಗುವುದು. ಅಲ್ಲದೇ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಈ ವೇಳೆ ಅಹಿತಕರ ಘಟನೆ ನಡೆದರೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚಿಂದೋಡಿ ಲೀಲಾ ಹೆಸರಿಡದಿದ್ರೆ ಹೋರಾಟ
ದಾವಣಗೆರೆಯಲ್ಲಿ 1937ರಲ್ಲಿ ಜನಿಸಿ 1949ರಲ್ಲಿ ರಂಗಭೂಮಿ ಕಲಾವಿದೆಯಾಗಿ ಜನ ಮನ ಗೆದ್ದ, ಸಾವಿರಾರು ನಾಟಕಗಳ ಮೂಲಕ ಕರ್ನಾಟಕಕ್ಕೆ ಪ್ರಖ್ಯಾತಿಯಾಗಿ ಚಿರಪರಿತರಾಗಿರುವ ಲೀಲಾ ಅವರು ಸುಮಾರು 17 ಕನ್ನಡ ಚಲನಚಿತ್ರಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಆ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 1989ರಲ್ಲಿ ಕರ್ನಾಟಕ ಸರ್ಕಾರ ನೀಡುವ "ರಾಜ್ಯೋತ್ಸವ ಪ್ರಶಸ್ತಿ"ಗೆ ಆಯ್ಕೆಯಾಗಿದ್ದರು. 1988ರಲ್ಲಿ ಕೇಂದ್ರ ಸರ್ಕಾರದಿಂದ "ಪದ್ಮಶ್ರೀ ಪ್ರಶಸ್ತಿ" ಪುರಸ್ಕಾರ ನೀಡಿ ಗೌರವಿಸಿದೆ ಎಂದು ತಿಳಿಸಿದರು.

1991ರಲ್ಲಿ ಮರಾಠಿಗರ ಪುಂಡಾಟಿಕೆ
ಇನ್ನು 1991ರಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟಿಕೆನ್ನು ಬಗ್ಗು ಬಡಿಯುವ ಮೂಲಕ ಬೆಳಗಾವಿಯ ಕಾಸಬ್ಲಾಗ್ ವಾರ್ಡ್‌ನ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಮರಾಠಿಗರ ವಿರುದ್ಧ ಕನ್ನಡಿಗರ ಕಂಪನ್ನು ಸಾರಿ, ಕನ್ನಡಗರಿ ಹೆಮ್ಮೆಯನ್ನು ತಂದುಕೊಟ್ಟಿದ್ದರು. ಆ ಚುನಾವಣೆಯಲ್ಲಿ ಜಯಶೀಲರಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. ನಂತರ ಅವರು ಕೆಬಿಆರ್ ಡ್ರಾಮಾ ನಾಟಕ ಕಂಪನಿಯನ್ನು ಕಟ್ಟಿ ಕನ್ನಡದ ನಾಟಕಗಳನ್ನು ನಡೆಸಲು ಮೀಸಲಾಗಿಟ್ಟಿದ್ದರು.

ಸಮಗ್ರ ರಕ್ಷಣಾ ವೇದಿಕೆ ಇಟ್ಟ ಬೇಡಿಕೆ ಏನು?
ಇಷ್ಟೆಲ್ಲಾ ಸಾಧನೆ ಮಾಡಿರುವ ಚಿಂದೋಡಿ ಲೀಲಾ ಅವರ ಹೆಸರು ಯಾವುದೇ ಮುಖ್ಯ ರಸ್ತೆಗೆ ಹಾಗೂ ವೃತ್ತಕ್ಕೆ ನಾಮಕರಣ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ನೂತನವಾಗಿ ಪುನರ್ ನಿರ್ಮಾಣ ಆಗುತ್ತಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಚಿಂದೋಡಿ ಲೀಲಾ ಅವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಯಾರೆಲ್ಲ ಭಾಗಿ?
ಸುದ್ದಿಗೋಷ್ಠಿಯಲ್ಲಿ ಮಾಲಾ ನಾಗರಾಜ್, ಶಾಂತಮ್ಮ, ಎಸ್.ಗಣೇಶ್, ಬಿ.ಹೆಚ್.ಮಂಜುನಾಥ್, ಆನಂದ ಇಟ್ಟಿಗುಡಿ, ಅಕ್ಬರ್ ಭಾಷಾ, ಎನ್.ಎಸ್. ಈರಣ್ಣ, ರಾಜು ಅನೆಕೊಂಡ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications