ಭ್ರಷ್ಟಚಾರ ಪ್ರಕರಣದಲ್ಲಿ ಶಾಸಕರನ್ನು ಬಂಧಿಸದ ಸರ್ಕಾರಕ್ಕೆ ಪದ್ಮಭೂಷಣ ಪ್ರಶಸ್ತಿ ನೀಡಬೇಕು-ಅರವಿಂದ್ ಕೇಜ್ರಿವಾಲ್
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಶಾಸಕರೊಬ್ಬರ ಪುತ್ರನ ಬೆಂಗಳೂರು ಕಚೇರಿ ಹಾಗೂ ಮನೆಯಲ್ಲಿದ್ದ 8 ಕೋಟಿ ರೂಪಾಯಿ ಪತ್ತೆಯಾಗಿದೆ. ಶಾಸಕರ ಮಗನ ಬಳಿ ಇಷ್ಟೊಂದು ಹಣ ಹೇಗೆ ಬಂತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾ
ದಾವಣಗೆರೆ, ಮಾರ್ಚ್ 4: ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲಿಸಿ. ಡಬಲ್ ಎಂಜಿನ್ ಸರ್ಕಾರದಿಂದ ಆಗಿರುವುದು ಅಭಿವೃದ್ಧಿಯಲ್ಲ. ಕರ್ನಾಟಕದ ಲೂಟಿ. ನನ್ನ ಮಗ ಸೇರಿದಂತೆ ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸುವ ಪ್ರಶ್ನೆಯೇ ಇಲ್ಲ. ಜೈಲಿಗಟ್ಟುತ್ತೇವೆ. ಇದು ನಮ್ಮ ಬದ್ಧತೆ ಎಂದು ಆಪ್ ಮುಖಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಆಮ್ ಆದ್ಮಿ ಪಕ್ಷದ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇನ್ನು ಮೂರು ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ. ಪಾರದರ್ಶಕ ಆಡಳಿತ ಮತ್ತು ಪ್ರಾಮಾಣಿಕ ಸರ್ಕಾರ ಅಧಿಕಾರಕ್ಕೆ ಬರಬೇಕು. ಪಂಜಾಬ್‌ನಲ್ಲಿ ಲಂಚ ಪಡೆದ ಮಂತ್ರಿ ಹಾಗೂ ಶಾಸಕನನ್ನು ಜೈಲಿಗೆ ಕಳುಹಿಸಿದ್ದೇವೆ. ಅಪ್ರಾಮಾಣಿಕರ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಐದು ವರ್ಷಗಳಿಂದಲೂ ಭ್ರಷ್ಟಾಚಾರ ದೂರ ಮಾಡುತ್ತೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಎಎಪಿ ನೇತೃತ್ವದ ಸರ್ಕಾರ ಪ್ರಾಮಾಣಿಕ, ಶೂನ್ಯ ಕಮಿಷನ್ ಸರ್ಕಾರ. ಬಿಜೆಪಿ ಪಕ್ಷದ್ದು ಕಮಿಷನ್ ಸರ್ಕಾರ ಎಂದು ಆರೋಪಿಸಿದರು.
ಶೇಕಡಾ 40ರಷ್ಟು ಕಮೀಷನ್ ಕರ್ನಾಟಕದಲ್ಲಿ ಮಂತ್ರಿಗಳು ಕೇಳುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಲಂಚ ಕೇಳಿದ ಸಚಿವರನ್ನು ಬಂಧಿಸಲಿಲ್ಲ. 82 ವರ್ಷದ ಕೆಂಪಣ್ಣರನ್ನು ಬಂಧಿಸಲಾಯಿತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಅವರಿಗೆ ಸಿಕ್ಕ ಪ್ರತಿಫಲ ಅದು. ಮೋದಿ ಅವರು ಈ ಬಗ್ಗೆ ಮಾತನಾಡಲೇ ಇಲ್ಲ. ಪೊಲೀಸ್ ಇನ್ಸ್‌ಪೆಕ್ಟರ್, ಉಪನ್ಯಾಸಕರು, ಅಧ್ಯಾಪಕರು, ಶಿಕ್ಷಕರು ಸೇರಿದಂತೆ ಹಲವಾರು ನೇಮಕಾತಿಗಳಲ್ಲಿ 25 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದಿರುವುದು ಜಗಜ್ಜಾಹೀರಾಗಿದೆ. ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಶಾಸಕರೊಬ್ಬರ ಪುತ್ರ ಬೆಂಗಳೂರು ಕಚೇರಿ ಹಾಗೂ ಮನೆಯಲ್ಲಿದ್ದ 8 ಕೋಟಿ ರೂಪಾಯಿ ಪತ್ತೆಯಾಗಿದೆ. ಅಮಿತ್ ಶಾ ಅವರ ಪಕ್ಷದ ಶಾಸಕರ ಮಗನ ಬಳಿ ಇಷ್ಟೊಂದು ಹಣ ಹೇಗೆ ಬಂತು. ಇದುವರೆಗೆ ಶಾಸಕರನ್ನು ಬಂಧಿಸಿಲ್ಲ. ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇದುವರೆಗೆ ಬಂಧಿಸದ ರಾಜ್ಯ ಸರ್ಕಾರಕ್ಕೆ ಪದ್ಮಭೂಷಣ ಪ್ರಶಸ್ತಿ ನೀಡಬೇಕು ಎಂದು ಲೇವಡಿ ಮಾಡಿದರು.

ದೆಹಲಿ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ದಾಳಿ ಮಾಡಲಾಯಿತು. ಹಣ ಸಿಗಲಿಲ್ಲ. ಆದರೆ, ಅವರ ಮೇಲೆ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಶಾಸಕರ ವಿರುದ್ಧ ಇನ್ನು ಯಾಕೆ ಕ್ರಮ ಜರುಗಿಸಿಲ್ಲ. ಅಮಿತ್ ಶಾ ಭ್ರಷ್ಟಾಚಾರ ದೂರ ಮಾಡುತ್ತೇವೆ ಎಂದು ಹೇಳಿದ್ದರೂ ಇನ್ನು ಯಾಕೆ ಆಗಿಲ್ಲ. 5 ವರ್ಷದಿಂದಲೂ ಹೇಳಿದ್ದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ, ಅತ್ಯಾಚಾರ, ಲಂಚ ಕೇಳುವ, ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರು, ಮೋಸ, ವಂಚನೆ ಮಾಡುವವರು ಬಿಜೆಪಿಯಲ್ಲಿದ್ದಾರೆ. ಮೊದಲು ಶೇಕಡಾ 20 ರಷ್ಟು ಕಮಿಷನ್ ಪಡೆಯಲಾಗುತಿತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು 40ಕ್ಕೇರಿದೆ. ಮುಂದಿನ ದಿನಗಳಲ್ಲಿ ಇದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ಶೇಕಡಾ 80ರಷ್ಟಾಗುತ್ತದೆ. ಆಮೇಲೆ ನೂರಕ್ಕೆ ನೂರರಷ್ಟು ಹಣ ನುಂಗುತ್ತಾರೆ. ಇಂಥವರ ಬಗ್ಗೆ ಎಚ್ಚರ ಇರಲಿ ಎಂದು ಕರೆ ನೀಡಿದರು.
ನಾಗಾಲ್ಯಾಂಡ್, ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೇಘಾಲಯದಲ್ಲಿ ಘಟಬಂಧನ್ ಸರ್ಕಾರ ರಚಿಸಿದೆ. ಈ ಮೂರು ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡಿರಲಿಲ್ಲ. ಆದ್ರೆ, ಚುನಾವಣಾ ಫಲಿತಾಂಶದ ಬಳಿಕ ದೆಹಲಿಯಲ್ಲಿ ನಡೆದ ವಿಜಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆಮ್ ಆದ್ಮಿ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಮೋದಿ ಅವರಿಗೆ ನಮ್ಮ ಪಕ್ಷದ ಬಗ್ಗೆ ಭಯವಿದೆ. ಸ್ಪರ್ಧೆ ಮಾಡದಿದ್ದರೂ ಮಾತನಾಡಿರುವುದನ್ನು ನೋಡಿದರೆ ಬಿಜೆಪಿ ಭಯದಲ್ಲಿದೆ ಎಂದರು.
ಬಿಜೆಪಿ ಶಾಸಕರೊಬ್ಬರು 2500 ಕೋಟಿ ರೂಪಾಯಿ ನೀಡಿದರೆ ಸಿಎಂ ಸ್ಥಾನ ಸಿಗುತ್ತೆ ಎಂದು ಹೇಳುತ್ತಾರೆ. ಇದುವರೆಗೆ ಆ ಶಾಸಕನ ವಿರುದ್ಧವೂ ಕ್ರಮ ಆಗಿಲ್ಲ. ದೆಹಲಿಯಲ್ಲಿ ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್, ಮಹಿಳೆಯರಿಗೆ ಉಚಿತ ಪಾಸ್ ನೀಡಿರುವ ನಮ್ಮ ಸರ್ಕಾರವು ಅತ್ಯಾಧುನಿಕ ವ್ಯವಸ್ಥೆಯುಳ್ಳ ಸರ್ಕಾರಿ ಶಾಲೆಗಳನ್ನು ರೂಪಿಸಿದ್ದೇವೆ. ಮೋದಿ, ಅಮಿತ್ ಶಾ ಅವರು ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕಗೊಳಿಸುತ್ತೇವೆ ಎಂದೇಳಿಲ್ಲ. ಹೇಳುವುದೂ ಇಲ್ಲ. ನಮ್ಮದು ಲಾಭದಾಯಕ ಆಯವ್ಯಯ. ನಷ್ಟ ಇಲ್ಲ. ಪಂಜಾಬ್‌ನಲ್ಲಿ ವಿದ್ಯುತ್ ಉಚಿತವಾಗಿ ನೀಡಿದ್ದೇವೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಇಷ್ಟೊಂದು ಒಳ್ಳೆಯ ಕೆಲಸ ಆಗಿದ್ದರೂ ಬಿಜೆಪಿಯಿಂದ ಯಾಕೆ ಆಗಿಲ್ಲ ಎಂದು ಟೀಕೆ ಮಾಡಿದರು.
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಅತ್ಯಾಧುನಿಕ ವ್ಯವಸ್ಥೆಯುಳ್ಳ ಸರ್ಕಾರಿ ಶಾಲೆಗಳು, 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ, ಉಚಿತ ಶಿಕ್ಷಣ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಜ್ರಿವಾಲ್
ಕರ್ನಾಟಕದ ಜನತೆಗೆ ನಮಸ್ಕಾರ. ಹೃದಯ ಭಾಗ ದಾವಣಗೆರೆಗೆ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಮಾತು ಆರಂಭಿಸಿದ ಅರವಿಂದ ಕೇಜ್ರಿವಾಲ್, ಕರ್ನಾಟಕದ ಜನರು ತುಂಬಾನೇ ಒಳ್ಳೆಯವರು. ದೇಶಭಕ್ತಿಯುಳ್ಳ ಜನರು. ಒಳ್ಳೆಯ ಪ್ರದೇಶವೂ ಹೌದು. ಆದರೆ ಶೇಕಡಾ 40ರಷ್ಟು ಕಮಿಷನ್ ಸರ್ಕಾರ ಆಗಿದೆ. ದೇಶ, ರಾಜ್ಯ ಬರ್ಬಾದ್ ಮಾಡುತ್ತಿರುವ ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಹಣವಿಲ್ಲದೇ ಏನೂ ಆಗಲ್ಲ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಟೆನಿಸ್ ಕೃಷ್ಣ, ಮಾಜಿ ಸಂಸದ ಡಾ. ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.












Click it and Unblock the Notifications