ದಾವಣಗೆರೆ: ಎಲ್ಲೆಂದರಲ್ಲಿ ಕಸ ಬಿಸಾಡುವ ಜನರಿಗೆ ತಕ್ಕ ಪಾಠ ಕಲಿಸಿದ ಯುವಕರು
ದಾವಣಗೆರೆ, ನವೆಂಬರ್ 12: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ ಆಗಿದೆ. ಕೆಲವೆಡೆ ಕಸ ತೆಗೆಯದೇ ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ, ಮತ್ತೊಂದೆಡೆ ಜನರು ಕಸ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಯುವಕರ ತಂಡವು ಕಸ ಹಾಕಿದವರ ವಿಡಿಯೋ ಮಾಡಿಕೊಂಡು ತ್ಯಾಜ್ಯ ವಾಪಸ್ ತೆಗೆದುಕೊಂಡು ಹೋಗುವಂತೆ ಮಾಡಿದ ಘಟನೆ ನಗರದ ರೇಣುಕಾ ಮಂದಿರದ ಬಳಿ ನಡೆದಿದೆ.
ನಗರದ ರೇಣುಕಾ ಮಂದಿರ ಪಕ್ಕದಲ್ಲಿರುವ ರೈಲ್ವೆ ಅಂಡರ್ ಪಾಸ್ ಬಳಿ ಇರುವ ಸಮಸ್ಯೆ ಹೇಳತೀರದ್ದು. ಮಹಾನಗರ ಪಾಲಿಕೆ ಸ್ವಚ್ಚ ದಾವಣಗೆರೆ, ಪ್ಲಾಸ್ಟಿಕ್ ಮುಕ್ತ ದಾವಣಗೆರೆಯನ್ನಾಗಿ ಮಾಡುತ್ತೇವೆ ಎನ್ನುತ್ತದೆ. ಬೇಕಾಬಿಟ್ಟಿಯಾಗಿ ಕಸ ಹಾಕುವವರಿಗೆ ತಡೆಯೊಡ್ಡಿಲ್ಲ. ಕಸ ಹಾಕುತ್ತಿದ್ದರಿಂದ ಕೆಟ್ಟ ವಾಸನೆ ಬರುತಿತ್ತು. ವಾಹನ ಸವಾರರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣ ಆಗಿತ್ತು. ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಜನರು ಸಂಚರಿಸುವ ಜಾಗ. ಅನೇಕ ವ್ಯಾಪಾರಿಗಳು ಇದೇ ರಸ್ತೆಯನ್ನು ಬಳಸುತ್ತಾರೆ. ತಮ್ಮ ತಮ್ಮ ಅಂಗಡಿಗಳಿಗೆ ಹೋಗಲು ಇದೇ ಮಾರ್ಗ ಇರೋದು.
ಅಲ್ಲದೆ ಸ್ಥಳದಲ್ಲಿ ಮಳೆ ಬಂದರೆ ಇಲ್ಲಿ ನೀರು ನಿಲ್ಲುತಿತ್ತು. ದೊಡ್ಡದಾದ ಚರಂಡಿ ವ್ಯವಸ್ಥೆ ಇರುವುದರಿಂದ ನೀರು ಸರಗಾವಾಗಿ ಹೋಗುತ್ತದೆ. ಈ ರಸ್ತೆಯ ಎಡ ಭಾಗದಲ್ಲಿ ಸುಮಾರು 20 ರಿಂದ 30 ಮನೆಗಳಿವೆ. ರೈಲ್ವೆ ಕ್ವಾರ್ಟಸ್ ಸಹಾ ಇದೆ. ನಗರದ ಹಳೇ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ವಯೋವೃದ್ದರು ಹಳ್ಳಿ ಕಡೆಯಿಂದ ಬರುವ ಜನರು ದಿನ ಬಳಕೆ ವಸ್ತುಗಳ ಖರೀದಿಗೆ ಬರುವವರು ಹೆಚ್ಚಾಗಿ ಇದೇ ರಸ್ತೆಯನ್ನು ಬಳಸುತ್ತಾರೆ.

ಈ ರಸ್ತೆಯಲ್ಲಿ ರೈಲ್ವೆ ಕ್ವಾರ್ಟಸ್ ಹಾಗೂ ನಿಲ್ದಾಣದ ಕಡೆಯಿಂದ ಬರುವ ಗಲೀಜು ನೀರು ಸಹ ಇಲ್ಲೇ ಹೋಗಬೇಕು. ಇವೆಲ್ಲರ ಮಧ್ಯೆ ಸ್ಮಾರ್ಟ್ ಸಿಟಿ ಅಂತಾ ಹೆಸರು ವಾಸಿಯಾದ ದಾವಣಗೆರೆ ನಗರದಲ್ಲಿ ಇನ್ನು ಸಹ ಕಸ ಹಾಕುವುದು ತಪ್ಪಿಲ್ಲ. ವಾಕಿಂಗ್ ಹೆಸರಿನಲ್ಲಿ ಬರುವ ಕೆಲವರು ಕಸ ಹಾಕುವುದು,ರಾತ್ರಿ ಹೊತ್ತು ಬೀದಿ ಬದಿಯಲ್ಲಿ ಕಂಡ ಕಂಡ ಜಾಗದಲ್ಲಿ ಕಸ ಎಸೆಯುವುದು ಹೆಚ್ಚಾಗಿದೆ.
ಈ ರಸ್ತೆಯು ಸಹ ಅದಕ್ಕೆ ಹೊರತಾಗಿಲ್ಲ. ಕಸ ಹಾಕುವಾಗ ಕಸ ಹಾಕುವುದು ಯಾಕೆ ಎಂದು ಯಾರು ಸಹ ಪ್ರಶ್ನೆ ಮಾಡಿಲ್ಲ. ಮನೆ ಹಾಗೂ ಅಂಗಡಿ ಬಾಡಿಗೆ ಕೊಟ್ಟವರು ಬಾಡಿಗೆದಾರರಿಗೆ ಮನೆಯ ಕಸ ಎಲ್ಲಿ ಹಾಕುತ್ತಿರಾ ಎಂದು ಕೇಳುವುದಿಲ್ಲ. ಈ ರಸ್ತೆಯಲ್ಲಿ ಕಸ ಹಾಕುವುದಕ್ಕೆ ಕಾರಣ ಇದೆ. ಪಾಲಿಕೆ ಇಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲ. ಉತ್ತಮವಾದ ಬೆಳಕಿನ ವ್ಯವಸ್ಥೆ ಮಾಡಿಲ್ಲ. ಪಾಲಿಕೆ ಆರೋಗ್ಯ ಅಧಿಕಾರಿಗಳು ಕೈಯಲ್ಲಿ ದಂಡದ ಪುಸ್ತಕ ಅಥವಾ ಯಂತ್ರ ಹಿಡಿದು ಕಸ ಹಾಕುವವರಿಗೆ ದಂಡ ಬಿಸಿ ಮುಟ್ಟಿಸಿಲ್ಲ.
ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಅವರು ಪಾಲಿಕೆ ಅಧಿಕಾರಿಗಳಿಗೆ ಹೇಳಿ ಸಾಕಾಗಿ ಹೋಗಿದೆ. ಸಂಬಂಧಪಟ್ಟವರಿಗೆ ಫೋಟೋ ಸಮೇತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಜನರು ಸಹ ವಾಯುವಿಹಾರ ನೆಪದಲ್ಲಿ ಬಂದು ಕಸ ಹಾಕಿಹೋಗುತ್ತಾರೆ. ಸಿಸಿಟಿವಿ ಅಳವಡಿಕೆ ಮಾಡಿಲ್ಲ. ರಾತ್ರಿ ವೇಳೆಯಲ್ಲೇ ಹೆಚ್ಚಾಗುತ್ತಿದೆ. ಬೆಳ್ಳಂಬೆಳಿಗ್ಗೆ ಬರುವವರು ಕಸ ಎಸೆದು ಹೋಗುತ್ತಿದ್ದಾರೆ.
ಅದಕ್ಕಾಗಿ ನಾವು ಕಾದು ಕುಳಿತು ಕಸ ಎಸೆದವರನ್ನು ಸ್ಥಳದಲ್ಲೇ ಹಿಡಿದು ಅವರಿಂದಲೇ ವಾಪಸ್ ತೆಗೆದುಕೊಂಡು ಹೋಗುವಂತೆ ಮಾಡಿದ್ದೇವೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಜನರು ಸಹ ಪಾಲಿಕೆಗೆ ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಹಾಕುವುದನ್ನು ನಿಲ್ಲಿಸಬೇಕು. ಪಾಲಿಕೆ ಅಧಿಕಾರಿಗಳು ಕಸ ಹಾಕಿದವರಿಗೆ ದಂಡ ವಿಧಿಸಿದರೆ ಇಂತಹ ಘಟನೆ ಕಡಿಮೆ ಆಗಬಹುದು ಎಂದು ಹೇಳಿದ್ದಾರೆ.












Click it and Unblock the Notifications