1.68 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ದಾವಣಗೆರೆ ಪೊಲೀಸ್
ದಾವಣಗೆರೆ, ಆಗಸ್ಟ್ 03: ದಾವಣಗೆರೆ ನಗರದ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬಂಗಾರ ಸೇರಿದಂತೆ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧ ಪ್ರಾಪರ್ಟಿ ರಿಟರ್ನ್ ಪೆರೇಡ್ ನಡೆಸಲಾಯಿತು.
ವಿವಿಧ ಸ್ವತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 1.68 ಕೋಟಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ವಿತರಿಸಲಾಯಿತು.

ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2022ರ ಜನವರಿ 1ರಿಂದ 2023ರ ಜೂನ್ 30ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನುಪತ್ತೆ ಮಾಡಿ ಅಮಾನತ್ತುಪಡಿಸಿಕೊಳ್ಳಲಾಗಿತ್ತು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 134 ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಸ್ವತ್ತುಗಳಾದ 1713.68 ಗ್ರಾಂ ಬಂಗಾರ, 2.93 ಕೆಜಿ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್ ಗಳು, ಟ್ರ್ಯಾಕ್ಟರ್ ಮತ್ತು ಬಿಡಿ ಭಾಗಗಳು, 178 ಕೆಜಿ ಅಡಿಕೆ, 3 ಮೊಬೈಲ್, 2,31,650 ನಗದು ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಉಪಸ್ಥಿತಿಯಲ್ಲಿ, ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ, ರೂರಲ್ ಪಿಐ ಲಿಂಗನಗೌಡ ನೆಗಳೂರು, ಮಾಯಕೊಂಡ ವೃತ್ತದ ಸಿಪಿಐ ನಾಗರಾಜ್, ಹರಿಹರ ವೃತ್ತದ ಸತೀಶ್, ಹರಿಹರ ನಗರ ಪಿಐ ದೇವಾನಂದ್, ಜಗಳೂರು ಪಿಐ ಶ್ರೀನಿವಾಸ್, ಬಿಳಿಚೋಡು ಠಾಣೆಯ ಪಿಐ ಸೋಮಶೇಖರ್ ಕೆಂಚಾರೆಡ್ಡಿ, ಉಪ-ವಿಭಾಗದ ಎಲ್ಲಾ ಠಾಣೆಯ ಪಿಎಸ್ಐಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿ ಇದ್ದರು.

ಐವರು ಆರೋಪಿಗಳ ಬಂಧನ
ಬೈಕ್ ಕಳವು ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಾಗ ವಿವಿಧೆಡೆ ಕಳ್ಳತನ ಮಾಡಿದ್ದ 26 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಬೈಕ್‌ಗಳ ವಾರಸುದಾರರ ದಾಖಲೆ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕೆಂದರೆ ದಾಖಲೆ ಪರಿಶೀಲಿಸಿದಾಗ ಕೆಲ ಬೈಕ್‌ಗಳು ನಕಲಿ ಮಾಲೀಕತ್ವ ಇರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರ್‌ಟಿಒ ಕಚೇರಿಯ ನಾಲ್ವರು ಸಹಾಯಕ ಸಿಬ್ಬಂದಿ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರ್.ಟಿ.ಓ ಕಚೇರಿಯ ಸಹಾಯಕ ಸಿಬ್ಬಂದಿ ಜಗದೀಶ್, ಪ್ರದೀಪ್, ಶಶಿಧರ್, ವಸಂತ ಕುಮಾರ್ ಹಾಗೂ ಆರ್‌ಟಿಓ ಏಜೆಂಟ್ ರಸೂಲ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ ಏನು?
ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಆಗಿತ್ತು. ಪೊಲೀಸರು ಈ ಪ್ರಕರಣದ ಆರೋಪಿಗಳ ಪತ್ತೆಗೆ ಬಂದಿದ್ದರು. ಈ ವೇಳೆ ಬೈಕ್ ಸಿಕ್ಕಿದ್ದು, ನಕಲಿ ಮಾಲೀಕತ್ವದ ಕುರಿತಂತೆ ಅನುಮಾನ ಬಂದ ಕಾರಣ ಮೂಲ ಬೈಕ್ ವಾರಸುದಾರರ ಬಗ್ಗೆ ತಿಳಿದುಕೊಂಡು ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆರೋಪಿ ಸಿದ್ದೇಶ್ ಎಂಬಾತ ಮೋಟಾರ್ ಬೈಕ್ ಅನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಪ್ರಕಾಶ್, ಮಹಮದ್ ಯಾಸೀರ್ ಅರಾಫತ್, ಕಲೀಂ ಅಲಿಯಾಸ್ ಕಲಾಮುದ್ದೀನ್ ಜೊತೆ ಸೇರಿಕೊಂಡು ದಾವಣಗೆರೆ ಆರ್.ಟಿ.ಓ ಕಛೇರಿಯಲ್ಲಿ ಆರ್.ಟಿ.ಓ ಅಧಿಕಾರಿಗಳೊಂದಿಗೆ ಶಾಮೀಲಾಗಿ ಆರ್.ಸಿ. ಮಾಲೀಕತ್ವವನ್ನು ಬದಲಾವಣೆ ಮಾಡಿದ್ದು ಬೆಳಕಿಗೆ ಬಂದಿದೆ.

ಸಿದ್ದೇಶ್, ಪ್ರಕಾಶ, ಮಹಮದ್ ಯಾಸೀರ್ ಅರಾಫತ್, ಕಲೀಂ ಅಲಿಯಾಸ್ ಕಲಾಮುದ್ದೀನ್ ಜೊತೆಗೆ ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ದಾವಣಗೆರೆ ಆರ್.ಟಿ.ಓ ಕಛೇರಿಯಲ್ಲಿ ಆರ್.ಟಿ.ಓ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಳ್ಳು ಆರ್.ಸಿ ದಾಖಲಾತಿಯನ್ನು ಸೃಷ್ಠಿಸಿ ಆರ್.ಸಿ ಮಾಲೀಕತ್ವವನ್ನು ಬದಲಾವಣೆ ಮಾಡಿ ಬೈಕ್ ಅನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.
ಬೈಕ್‌ಗಳ ಮೂಲ ವಾರಾಸುದಾರರಿಂದ ದೂರು ಪಡೆದು ಬಸವನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ದಾವಣಗೆರೆ ಸಿಇಎನ್ ಠಾಣೆಗೆ ವಹಿಸಲಾಗಿತ್ತು.ಸಿಇಎನ್ ಪೊಲಿಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ತಂಡ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.












Click it and Unblock the Notifications