ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ದಾವಣಗೆರೆ ಎಸ್‌ಪಿ
ದಾವಣಗೆರೆ, ಡಿಸೆಂಬರ್, 29: ಬಾಡಾ ರಸ್ತೆಯ ದ್ಯಾಮೇನಹಳ್ಳಿ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಟೊಮೆಟೋ ತುಂಬಿದ ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಉಮಾ ಪ್ರಶಾಂತ್ ಅವರು ಕರ್ತವ್ಯ ನಿಮಿತ್ತ ಸಂತೇಬೆನ್ನೂರು ಕಡೆ ಹೋಗುವಾಗ ಬಾಡಾ ರಸ್ತೆಯ ದ್ಯಾಮೇನಹಳ್ಳಿ ಗ್ರಾಮದ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಟೊಮೆಟೋ ತುಂಬಿದ ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿತ್ತು. ಇದನ್ನು ನೋಡಿದ ಎಸ್‌ಪಿ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಇಳಿದು ಗಾಯಾಳು ಬೈಕ್ ಸವಾರ ಅಲ್ಲಾ ಭಕ್ಷಿಯನ್ನು ಅದೇ ರಸ್ತೆಯಲ್ಲಿ ದಾವಣಗೆರೆ ಕಡೆ ಹೋಗುತ್ತಿದ್ದ ಕಾರ್‌ನಲ್ಲಿ ತಮ್ಮ ಗನ್ ಮ್ಯಾನ್ ಜೊತೆ ಕಳುಹಿಸಿಕೊಟ್ಟರು.

ತೀವ್ರವಾಗಿ ಗಾಯಗೊಂಡ ಅಲ್ಲಾ ಭಕ್ಷಿಯನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ವರಿಷ್ಠಾಧಿಕಾರಿ ಮಾನವಿಯತೆ ಮೆರೆದಿದ್ದಾರೆ. ಗಾಯಾಳು ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಎಸ್. ಹೈಟೈಕ್ ಆಸ್ಪತ್ರೆಗೆ ಗಾಯಾಳುವನ್ನು ದಾಖಲು ಮಾಡಲಾಗಿದೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಹಾಗೂ ಅವರ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪಘಾತ ಆದಾಗ ಆಂಬ್ಯುಲೆನ್ಸ್ ಬರುವ ತನಕ ಕಾಯದೇ ಯಾವುದದಾರೂ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಜೀವ ಉಳಿಸಬಹುದು ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications