ದಾವಣಗೆರೆ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್!
ದಾವಣಗೆರೆ, ಆಗಸ್ಟ್ 25: ದಾವಣಗೆರೆ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರಾಗಾರದ ಬಳಿ ಆಕಸ್ಮಿಕವಾಗಿ ಗುಂಡು ತಗುಲಿ ಪೊಲೀಸ್ ಕಾನ್‌ಸ್ಟೆಬಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಈ ಪ್ರಕರಣ ದಾಖಲಾಗಿದ್ದು, ಸಶಸ್ತ್ರಾಗಾರದ ಸಿಬ್ಬಂದಿ ಶ್ರೀನಿವಾಸ್ ಪೂಜಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸ್ ಕಾನ್‌ಸ್ಟೆಬಲ್ ಚೇತನ್ ಸಾವನ್ನಪ್ಪಿದ ಒಂದೇ ದಿನದಲ್ಲಿ ದೂರು ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಬಂದೂಕು ಸ್ವಚ್ಛಗೊಳಿಸುವ ವೇಳೆ ಡಿಎಆರ್‌ನ ಶಸ್ತ್ರಾಗಾರದ ಬಳಿ ನಿಂತಿದ್ದ ಚೇತನ್ ಕುತ್ತಿಗೆಗೆ ಗುಂಡು ತಗುಲಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಚೇತನ್ ಸಿ.ಟಿ. ಸೆಂಟ್ರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಸ್ವಚ್ಛ ಮಾಡಲಾಗುತ್ತಿದ್ದ ವೇಳೆ ದುರಂತ
ಐಜಿಪಿ ಎಸ್. ರವಿ, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಾತ್ರವಲ್ಲ, ಫೈರಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ತನಿಖೆ ನಡೆಸಲಾಗುವುದು ಎಂದು ಐಜಿಪಿ ಹೇಳಿದ್ದರು.
ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಬಳಿ ಫೈರಿಂಗ್ ಅಭ್ಯಾಸವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಡಿದ ಬಳಿಕ ಪಿಸ್ತೂಲ್, ಬಂದೂಕುಗಳನ್ನು ಸಶಸ್ತ್ರ ಮೀಸಲು ಪಡೆ ಕಚೇರಿಗೆ ತರಲಾಗಿತ್ತು. ಈ ವೇಳೆ ಆಯುಧಗಳನ್ನು ಸ್ವಚ್ಛ ಮಾಡಲಾಗುತ್ತಿದ್ದ ವೇಳೆ ದುರಂತ ಸಂಭವಿಸಿತ್ತು.

ದೂರಿನಲ್ಲೇನಿದೆ?
ದಾವಣಗೆರೆಯ ಕೆಟಿಜೆ ನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಫೈರಿಂಗ್ ತರಬೇತಿ ನೀಡಲಾಗುತ್ತಿತ್ತು. ಟ್ರೈನಿಂಗ್ ನಂತರ ಡಿಎಆರ್ ಕೇಂದ್ರಕ್ಕೆ ಬಂದು ಬಂದೂಕು, ಪಿಸ್ತೂಲ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಸಶಸ್ತ್ರಾಗಾರದ ಮುಖ್ಯಸ್ಥರಾದ ಶರತ್, ತನ್ವೀರ್ ಹಾಗೂ ಶ್ರೀನಿವಾಸ್ ಪೂಜಾರಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಆಗ ಶ್ರೀನಿವಾಸ್
ಪೂಜಾರಿ ಬೇಜವಾಬ್ದಾರಿತನದಿಂದ ಬಂದೂಕಿನ ಗುಂಡು ಹಾರಿ ಚೇತನ್ ಮುಖಕ್ಕೆ ಬಿದ್ದು, ಮೃತಪಟ್ಟಿದ್ದಾರೆ ಎಂದು ಡಿಎಆರ್‌ನ ಆರ್‌ಪಿಐ ಎಸ್.ಎನ್. ಕಿರಣ್ ಕುಮಾರ್ ಬಡಾವಣೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಚೇತನ್ ಮನೆಯಲ್ಲಿ ಮಡುಗಟ್ಟಿದ ದುಃಖ
ಇನ್ನು ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮ ಚೇತನ್ ಹುಟ್ಟೂರು. ಇಲ್ಲಿಯೇ ಅಂತಿಮ ದರ್ಶನಕ್ಕೆ ಮಂಗಳವಾರ ಮಾಡಲಾಗಿತ್ತು. ಐಜಿಪಿ ಎಸ್. ರವಿ, ಎಸ್ಪಿ ರಿಷ್ಯಂತ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಮೃತರ ಅಂತಿಮ ದರ್ಶನ ಪಡೆದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಊರಿನ ಜನರ ಪ್ರೀತಿಗೆ ಪಾತ್ರವಾಗಿದ್ದ ಚೇತನ್ ಅಕಾಲಿಕ ಸಾವಿಗೆ ಕುಟುಂಬಸ್ಥರು,
ಸ್ನೇಹಿತರು, ಸಂಬಂಧಿಕರು ಹಾಗೂ ಗ್ರಾಮದ ಜನರು ಕಂಬನಿ ಮಿಡಿದಿದ್ದಾರೆ. ಕೇವಲ 29 ವರ್ಷಕ್ಕೆ ಇಹಲೋಕ ತ್ಯಜಿಸಿದ ಚೇತನ್ ಪತ್ನಿ ಈಗಲೂ ಗೋಳಾಡುತ್ತಿದ್ದಾರೆ.
ಮಣ್ಣಲ್ಲಿ ಮಣ್ಣಾದ ಚೇತನ್‌ರನ್ನು ನೆನೆದು ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಪುಟ್ಟ ಮಗುವನ್ನು ಬಿಟ್ಟು ಹೋದ ಚೇತನ್, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಎಲ್ಲಾ ರೀತಿಯ ಸಹಕಾರ, ನೆರವು ನೀಡುವುದಾಗಿ ಐಜಿಪಿ ಭರವಸೆ ನೀಡಿದ್ದು, ಒಟ್ಟಿನಲ್ಲಿ ಚೇತನ್ ನೆನಪು ಸದಾ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಕಾಡುತ್ತಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಹ ಅಂತಿಮ ನಮನ ಸಲ್ಲಿಸಿದರು. ಕುಟುಂಬಸ್ಥರಿಗೆ ಸರ್ಕಾರದಿಂದ ಸಿಗಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
Recommended Video

ಹೆಂಗೆ ಮರೆಯಲಿ
ಇನ್ನು ಶಿಸ್ತಿನ ಸಿಪಾಯಿಯಾಗಿದ್ದ ಚೇತನ್, ಹೊಸದಾಗಿ ಸಶಸ್ತ್ರ ಮೀಸಲು ಪಡೆಗೆ ಸೇರುವ ಯುವಕರಿಗೆ ಡ್ರಿಲ್ ಹೇಳಿಕೊಡುತ್ತಿದ್ದರು. ನಮಗೆಲ್ಲಾ ಉತ್ತಮ ತರಬೇತಿ ನೀಡುತ್ತಿದ್ದರು. ಯಾವತ್ತೂ ನಮಗೆ ಬೇಸರ ತರಿಸುವ ರೀತಿಯಲ್ಲಿ ವರ್ತಿಸಿದವರಲ್ಲ. ಅಭ್ಯಾಸದ ವೇಳೆ ಎಷ್ಟು ಕಠಿಣವಾಗಿರುತ್ತಿದ್ದರೋ, ಆಮೇಲೆ ಸ್ನೇಹಿತರಂತೆ ಇರುತ್ತಿದ್ದರು. ಇಲಾಖೆಗೆ ಸೇರಿ 9 ವರ್ಷ ಸೇರಿದ್ದರೂ ಸೀನಿಯರ್ ಎಂಬ ಅಹಂ ಇರಲಿಲ್ಲ. ಎಲ್ಲರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರನ್ನು ಕಳೆದುಕೊಂಡಿದ್ದು ತುಂಬಾನೇ ಬೇಸರ ತರಿಸಿದೆ ಎಂದು ಚೇತನ್‌ರಲ್ಲಿ ತರಬೇತಿ ಪಡೆದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸ್ಮರಿಸಿದ್ದಾರೆ.












Click it and Unblock the Notifications