ದಾವಣಗೆರೆ: 33 ಬಾರಿ ಕೋರ್ಟ್ ವಾರೆಂಟ್ ಕೊಟ್ಟರೂ ಬಾರದ 10 ಕೋಟಿ ರೂ. ವಂಚಕ ಪೊಲೀಸ್ ಬಲೆಗೆ
ದಾವಣಗೆರೆ, ಆಗಸ್ಟ್ 17: ಆತ ದಾವಣಗೆರೆ ಜಿಲ್ಲೆ ಮಾತ್ರವಲ್ಲ ಬೇರೆ ಬೇರೆ ಕಡೆಗಳಲ್ಲೂ ಮೆಕ್ಕೆಜೋಳ ಖರೀದಿಸಿ, ಹಣದ ಬದಲಾಗಿ ಚೆಕ್ ನೀಡಿದ್ದ. ಇತ್ತ ಬೆಳೆ ಬೆಳೆದು, ಮಾರಾಟ ಮಾಡಿದ ರೈತರು ಹಣ ಸಿಗುತ್ತದೆ ಎಂದುಕೊಂಡಿದ್ದರು. ಆದರೆ ರೈತರಿಗೆ ಶಾಕ್ ಕಾದಿತ್ತು. ಏಕೆಂದರೆ ಆತ ಕೊಟ್ಟ ಚೆಕ್‌ಗಳೆಲ್ಲವೂ ಬೌನ್ಸ್ ಆಗಿದ್ದವು.
ರೈತರು ಬ್ಯಾಂಕ್‌ನಲ್ಲಿ ಹೋಗಿ ಚೆಕ್ ನೀಡಿದರೆ ಬೌನ್ಸ್ ಆಗಿದೆ ಎಂದು ಹೇಳುತ್ತಿದ್ದರು. ಅತ್ತ ಕೋಟಿ ಕೋಟಿ ರೂಪಾಯಿ ವಂಚಿಸಿದ್ದ ಆರೋಪಿಯೂ ಪರಾರಿಯಾಗಿದ್ದ. ಇನ್ನು ಕೋರ್ಟ್‌ನಿಂದ 33 ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಡೋಂಟ್‌ಕೇರ್. ಹೀಗೆ ತಪ್ಪಿಸಿಕೊಂಡು ಹೋಗಿದ್ದ ಮಹಾ ವಂಚಕನನ್ನು ದಾವಣಗೆರೆ ಪೊಲೀಸರು ಸೆರೆ ಹಿಡಿದು ಕರೆದುಕೊಂಡು ಬಂದಿದ್ದಾರೆ.
ಅಂದಹಾಗೆ ರೈತರಿಗೆ ಈ ರೀತಿಯ ವಂಚನೆ ಮಾಡಿದಾತನ ಹೆಸರು ನಂದಕುಮಾರ್. ಈತ ತಮಿಳುನಾಡು ಮೂಲದ ತಿರುಪುರ ವಾಸಿ. ಪಯನಿಯರ್ ಫೀಡ್ಸ್ ಆ್ಯಂಡ್ ಪೌಲ್ಟ್ರಿ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ಪಾಲುದಾರ ನಂದಕುಮಾರ್.

ಹರಿಹರ ಕೋರ್ಟ್‌ನಲ್ಲಿ ಕೇಸ್ ದಾಖಲು
2008ರಲ್ಲಿ ಹರಿಹರದ ದೋಸ್ತನಾ ಟ್ರೇಡರ್ಸ್ ಮಾಲೀಕರಾದ ಖಲೀಲ್ ದೋಸ್ತಾನ ಹತ್ತಿರ 1 ಕೋಟಿ ರೂಪಾಯಿ ಮೌಲ್ಯದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ನಂದಕುಮಾರ್, ಇದಕ್ಕೆ ಪ್ರತಿಯಾಗಿ ಚೆಕ್ ಕೊಟ್ಟಿದ್ದ. ಆದರೆ ಎಲ್ಲಾ ಚೆಕ್‌ಗಳು ಬ್ಯಾಂಕ್‌ನಲ್ಲಿ ತೋರಿಸಿದರೆ ಬೌನ್ಸ್ ಆಗಿದ್ದವು. ಈ ಬಗ್ಗೆ ಹಣ ಕೇಳಿದರೆ ನಂದಕುಮಾರ್ ಯಾವುದೇ ಉತ್ತರ ನೀಡಲಿಲ್ಲ. ಹರಿಹರದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಂದಕುಮಾರ್ ವಿರುದ್ಧ ಖಲೀಲ್ ದೂರು ದಾಖಲಿಸಿದ್ದರು. ಚೆಕ್ ಅಮಾನ್ಯ ಆದ ಪ್ರಕರಣ ದಾಖಲಾಗಿತ್ತು.
33 ಬಾರಿ ವಾರೆಂಟ್ ನೀಡಿದರೂ ಬಾರದ ನಂದಕುಮಾರ್
ಜೆಎಂಎಫ್‌ಸಿ ಕೋರ್ಟ್ 33 ಬಾರಿ ವಾರೆಂಟ್ ಜಾರಿ ಮಾಡಿದರೂ ಇದಕ್ಕೆ ನಂದಕುಮಾರ್ ಕ್ಯಾರೇ ಎಂದಿರಲಿಲ್ಲ. ಜುಲೈ 17ರಂದು ಮತ್ತೆ ಬಂಧನ ವಾರೆಂಟ್ ಜಾರಿ ಮಾಡಿದ್ದ ನ್ಯಾಯಾಲಯ, ಆರೋಪಿ ಬಾರದಿದ್ದರೆ ಕೂಡಲೇ ಬಂಧಿಸಿ ಕರೆ ತರುವಂತೆ ಸೂಚನೆ ನೀಡಿತ್ತು.
ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ತೇಲಿ ನೇತೃತ್ವದ ತಂಡ ತಮಿಳುನಾಡಿನ ತಿರುಪುರಕ್ಕೆ ಹೋಗಿ ಬಂಧಿಸಿ ಹರಿಹರಕ್ಕೆ ಕರೆ ತಂದಿದೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಈತನನ್ನು ಇದೇ ತಿಂಗಳ 22ರಂದು ಕೋರ್ಟ್‌ಗೆ ಪೊಲೀಸರು ಹಾಜರು ಪಡಿಸುವ ಸಾಧ್ಯತೆ ಹೆಚ್ಚಿದೆ.

ಇನ್ನು ಹಲವೆಡೆ ವಂಚನೆ
ನಂದಕುಮಾರ್ ಹರಿಹರ ಮಾತ್ರವಲ್ಲ, ದಾವಣಗೆರೆ, ಶಿವಮೊಗ್ಗ, ಹೊನ್ನಾಳಿ, ಶಿಕಾರಿಪುರ, ರಾಣೇಬೆನ್ನೂರು, ಹಾವೇರಿ, ಬೆಂಗಳೂರು, ಕೊಟ್ಟೂರು ವರ್ತಕರಿಂದ ಮೆಕ್ಕೆಜೋಳ ಖರೀದಿಸಿದ್ದು, ಸುಮಾರು 10 ಕೋಟಿ 63 ಲಕ್ಷ ರೂಪಾಯಿ ನೀಡಬೇಕಿದೆ. ಈತ ಇವರಿಗೆ ಕೊಟ್ಟಿರುವ ಚೆಕ್‌ಗಳೆಲ್ಲವೂ ಬೌನ್ಸ್ ಆಗಿವೆ. ರಾಜ್ಯದ ವಿವಿಧೆಡೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿಯೂ ವಂಚನೆ ಮಾಡಿರುವ ಅನುಮಾನ ಇದ್ದು, ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಕಂಗಾಲಾಗಿರುವ ರೈತರು
ನಂದಕುಮಾರ್‌ಗೆ ಮೆಕ್ಕೆಜೋಳ ನೀಡಿದ್ದ ರೈತರು ಇಂದಿಗೂ ಹಣ ಬಾರದ ಕಾರಣ ಸಂಕಷ್ಟದಲ್ಲಿದ್ದಾರೆ. ಕೆಲ ರೈತರಂತೂ ನೂರಾರು ಕ್ವಿಂಟಾಲ್ ಮೆಕ್ಕೆಜೋಳ ನೀಡಿದ್ದು, ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದ್ದಾರೆ.
ಆರೋಪಿಯನ್ನು ಬಂಧಿಸಿ ಕರೆದುಕೊಂಡು ಬಂದಿರುವುದರಿಂದ ರೈತರು ಸಂತಸಗೊಂಡಿದ್ದರೂ, ಹಣ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಪೊಲೀಸರು ತಮಗೆ ಹಣ ಕೊಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Recommended Video
ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಯನ್ನು ಕೊಡುವಾಗ ರೈತರು ಪೂರ್ವಾಪರ ವಿಚಾರಿಸಿ ನೀಡಬೇಕು. ಹೆಚ್ಚಿನ ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಆಸೆ ಪಟ್ಟು ಕೊಟ್ಟರೆ ಇಂಥ ಸಮಸ್ಯೆ ಎದುರಾಗುತ್ತದೆ. ಇನ್ನು ಮುಂದಾದರೂ ರೈತರು ಎಚ್ಚರ ವಹಿಸಬೇಕು. ಮೋಸದ ಜಾಲಕ್ಕೆ ಸಿಲುಕಬಾರದು ಎಂದು ಎಪಿಎಂಸಿಯ ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.












Click it and Unblock the Notifications