ದಾವಣಗೆರೆ ಲೋಕಸಭೆ ಚುನಾವಣೆ ಫಲಿತಾಂಶ: ಯಾರು ಗೆದ್ದರೂ ಇತಿಹಾಸ ನಿರ್ಮಾಣ

ದಾವಣಗೆರೆ, ಮೇ 28: ದಾವಣಗೆರೆ ಲೋಕಸಭಾ ಕ್ಷೇತ್ರದ 2024ರ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆದ್ದರೂ ಸಹ ಇತಿಹಾಸ ನಿರ್ಮಾಣವಾಗಲಿದೆ. ಮೇ 7ರಂದು ಕ್ಷೇತ್ರದಲ್ಲಿ ಶೇ 76.99ರಷ್ಟು ಮತದಾನವಾಗಿತ್ತು. ಜೂನ್‌ 4ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.

ಬೆಣ್ಣೆ ನಗರಿ ದಾವಣಗೆರೆಯ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್ ಅಭ್ಯ ಅಭ್ಯರ್ಥಿ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಸಿದ್ದರಾಮಯ್ಯ ಆಪ್ತರಾದ ಜಿ. ಬಿ. ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

Davanagere Lok Sabha Election 2024 Results Who Will Win Prabha Mallikarjun Gayatri Siddheshwar

ದಾವಣಗೆರೆಯ ಲೋಕಸಭಾ ಚುನಾವಣೆ ಎಂದರೆ ಅದು ಬಿಜೆಪಿಯ ಜಿ. ಎಂ. ಸಿದ್ದೇಶ್ವರ ಮತ್ತು ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಹೋರಾಟ. ಈ ಬಾರಿಯ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿ. ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದಾವಣಗೆರೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದೆ. ಹಾಲಿ ಸಂಸದರು ಜಿ. ಎಂ. ಸಿದ್ದೇಶ್ವರ. ಆದರೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಗಾಯತ್ರಿ ಸಿದ್ದೇಶ್ವರ ಅವರನ್ನು ಅಭ್ಯರ್ಥಿಯಾಗಿ ಮಾಡಲಿದ್ದಾರೆ. ಗಾಯತ್ರಿ ಸಿದ್ದೇಶ್ವರ, ಡಾ. ಪ್ರಭಾ ಮಲ್ಲಿಕಾರ್ಜುನ್ ಯಾರು ಗೆದ್ದರೂ ಸಹ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ದಾವಣಗೆರೆಯಿಂದ ಮಹಿಳಾ ಸಂಸದರು ಆಯ್ಕೆಯಾಗಲಿದ್ದಾರೆ.

ಕುಟುಂಬಗಳ ಕದನ: ದಾವಣಗೆರೆ ಕ್ಷೇತ್ರದ ಚುನಾವಣೆ ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಹೋರಾಟ, ಪ್ರತಿಷ್ಠೆ. 2004, 2009, 2014ರಲ್ಲಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಜಿ. ಎಂ. ಸಿದ್ದೇಶ್ವರ ವಿರುದ್ಧ ಸೋತಿದ್ದಾರೆ. 2019ರಲ್ಲಿ ಕಾಂಗ್ರೆಸ್ ಹೆಚ್. ಬಿ. ಮಂಜಪ್ಪ ಕಣಕ್ಕಿಳಿಸಿದರೂ ಅವರು ಸಹ ಸೋಲು ಕಂಡರು.

2014ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಬದಲಾವಣೆ ಮಾಡಿವೆ. ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಎದುರಾಳಿಯಾಗಿದ್ದಾರೆ.

2004ರಿಂದ ಸತತವಾಗಿ ಗೆದ್ದು ಬರುತ್ತಿರುವ ಜಿ. ಎಂ. ಸಿದ್ದೇಶ್ವರ ದಾವಣಗೆರೆ ಕ್ಷೇತ್ರ ಕಾಂಗ್ರೆಸ್ 'ಕೈ'ಗೆ ಸಿಗದಂತೆ ರಾಜಕಾರಣ ಮಾಡಿಕೊಂಡು ಬಂದರು. ಲೋಕಸಭೆ ಸಿದ್ದೇಶ್ವರಗೆ, ವಿಧಾನಸಭೆ ಶಾಮನೂರು ಕುಟುಂಬಕ್ಕೆ ಎಂಬ ಮಾತನ್ನು ಜನರು ಹೇಳುತ್ತಾರೆ.

ದಾವಣಗೆರೆ ಕ್ಷೇತ್ರದ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಶಾಮನೂರು ಕುಟುಂಬದವರೇ ಶಾಸಕರು. ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ ಬೆಂಬಲಿಸುತ್ತಾರೆ. ಹರಿಹರ ಶಾಸಕರು ಬಿ. ಪಿ. ಹರೀಶ್ (ಬಿಜೆಪಿ).

ಶಾಮನೂರು ಶಿವಶಂಕರಪ್ಪ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಭಾವ ಕಡಿಮೆ ಏನಿಲ್ಲ. ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಶಾಮನೂರು ಶಿವಶಂಕರಪ್ಪ ಸಹ ಹಾಲಿ ಶಾಸಕರು. ಶಾಮನೂರು ಕುಟುಂಬದ ಪ್ರಭಾವ, ಪ್ರಭಾ ಮಲ್ಲಿಕಾರ್ಜುನ್ ಮಾಡುವ ಸಮಾಜ ಸೇವಾ ಚಟುವಟಿಕೆಗಳು ಗೆಲುವು ಸುಲಭವಾಗಿಸಲಿದೆ ಎಂಬುದು ಲೆಕ್ಕಾಚಾರವಾಗಿದೆ.

ಸಂಸದರಾಗಿ ಜಿ. ಎಂ. ಸಿದ್ದೇಶ್ವರ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಮುಂತಾದ ಅಂಶಗಳು ಗಾಯತ್ರಿ ಸಿದ್ದೇಶ್ವರ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕರ್ನಾಟಕದ ಏಕೈಕ ಕ್ಷೇತ್ರ ದಾವಣಗೆರೆಯಾಗಿದೆ. ಆದ್ದರಿಂದ ಯಾರು ಗೆದ್ದರೂ ರಾಜ್ಯದಿಂದ ಒಬ್ಬರು ಮಹಿಳಾ ಸಂಸದರು ಆಯ್ಕೆಯಾಗಲಿದ್ದಾರೆ.

ಕುರುಬ ಸಮಯದಾಯಕ್ಕೆ ಸೇರಿದ ಜಿ. ಬಿ. ವಿನಯ್ ಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಶಾಮನೂರು ಕುಟುಂಬದ ಪಾಲಾದ ಬಳಿಕ ಸಿದ್ದರಾಮಯ್ಯ ಆಪ್ತರಾದ ಜಿ. ಬಿ. ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರೇ ವಿನಯ್ ಕುಮಾರ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹೋಗುತ್ತದೆ. ಅವರಿಗೆ ಮತ ಹಾಕಬೇಡಿ ಎಂದು ಕರೆ ನೀಡಿದರು. ಯಾರು ಗೆಲುವು ಸಾಧಿಸುತ್ತಾರೆ? ಎಂದು ಜೂನ್‌ 4ರಂದು ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+