Davanagere benne dose festival: ಮೊದಲ ದಿನದ ಬೆಣ್ಣೆ ದೋಸೋತ್ಸವಕ್ಕೆ ರೆಸ್ಪಾನ್ಸ್ ಹೇಗಿತ್ತು ಗೊತ್ತಾ?
ದಾವಣಗೆರೆ, ಡಿಸೆಂಬರ್, 24: ನಗರದ ಬಾಪೂಜಿ ಎಂಬಿಎ ಮೈದಾನ ಹಾಗೂ ಗಾಜಿನ ಮನೆಯಲ್ಲಿ ಮೂರು ದಿನಗಳ ದೋಸೋತ್ಸವಕ್ಕೆ ಚಾಲನೆ ಸಿಕ್ಕಿದೆ. ಗಾಜಿನ ಮನೆ ಮುಂದೆ ಆಯೋಜಿಸಲಾಗಿರುವ ದೋಸೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವೀಕೆಂಡ್ ಆದ ಕಾರಣ ಶನಿವಾರ ಜನರು ಮುಗಿಬಿದ್ದು ಬಿಸಿ ಬಿಸಿ ದೋಸೆ ಸವಿದರೆ, ಬಾಪೂಜಿ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಧಿವೇಶನಕ್ಕೆ ಬಂದವರು ಫ್ರೀ ಆಗಿ ದೋಸೆ ತಿನ್ನಬೇಕು ಎಂದುಕೊಂಡು ಹೋದ್ರು. ಆ ಬಳಿಕ ಹಣ ಕೊಡಿ ಎಂದಾಗ ಪೆಚ್ ಆಗಿ ವಾಪಸ್ ಆದ ಘಟನೆ ನಡೆಯಿತು.
ಉಚಿತವಾಗಿ ಬೆಣ್ಣೆದೋಸೆ ಸಿಗುತ್ತದೆ ಎಂದುಕೊಂಡು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಜನರು ದೋಸೆ ಸವಿ ಸವಿಯಲು ಹೋದರು. ಕೆಲವರು ಆರಂಭದಲ್ಲಿ ಹಣ ಎಷ್ಟು ಎಂದು ಕೇಳಿದರು. ಹಣ ಪಾವತಿಸಿ ದೋಸೆ ತಿಂದು ಖುಷಿ ಪಟ್ಟರು. ಕೆಲವರು ಉಚಿತವೆಂದುಕೊಂಡು ಮೊದ್ಲು ದೋಸೆ ತಿಂದರು. ಆಮೇಲೆ ಹಣ ಕೊಡುವಂತೆ ಕೇಳಿದಾಗ ಪೆಚ್ಚು ಮೋರೆ ಹಾಕಿಕೊಂಡು ಬೈಯ್ಯುತ್ತಾ ವಾಪಸ್ ಆದ ಪ್ರಸಂಗವೂ ಜರುಗಿತು.

ದಾವಣಗೆರೆ ಬೆಣ್ಣೆ ದೋಸೆಯನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಹಾಗೂ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟ ಕಾಪಾಡಿಕೊಂಡು ಬ್ರಾಂಡಿಂಗ್ ಕಲ್ಪಿಸುವ ಉದ್ದೇಶದಿಂದ ಬೆಣ್ಣೆ ದೋಸೋತ್ಸವ ಆಯೋಜಿಸಲಾಗಿತ್ತು. ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಾರಣ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಸಾವಿರಾರು ಜನರು ಬಂದರೂ ದೋಸೆಗೆ 60 ರೂಪಾಯಿ ನಿಗದಿಪಡಿಸಿದ ಕಾರಣ ದೋಸೆ ಹೊಟೇಲ್‌ಗಳ ಮಾಲೀಕರು ಲಾಭ ಗಳಿಸಿದರು. ಇನ್ನು ಜನರು ದೋಸೆ ತಿಂದು ಸಂತಸ ಪಟ್ಟರು.
ಜಿಲ್ಲಾಡಳಿತದ ವತಿಯಿಂದ ನಗರದ ಎಂ.ಬಿ.ಎ ಮೈದಾನ ಮತ್ತು ಗ್ಲಾಸ್ ಹೌಸ್ ಮುಂಭಾಗದಲ್ಲಿ ಆಯೋಜಿಸಲಾದ ದೋಸೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಭಾನುವಾರ, ಸೋಮವಾರವೂ (ಡಿಸೆಂಬರ್ 24, 25) ದೋಸೋತ್ಸವ ಇದ್ದು, ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.
ದಾವಣಗೆರೆ ಬೆಣ್ಣೆ ದೋಸೆ ಇತಿಹಾಸ ಪ್ರಸಿದ್ಧವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ದೋಸೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್ 25ರವರೆಗೆ ದೋಸೋತ್ಸವ ಏರ್ಪಡಿಸಲಾಗಿದೆ. ಕಳೆದ ನಾಲ್ಕು ದಶಕಗಳಿಂದ ಬೆಣ್ಣೆ ದೋಸೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ಮುಖಾಂತರ ಸಾರ್ವಜನಿಕರಿಗೆ ಗುಣಮಟ್ಟದ ಬೆಣ್ಣೆ ದೋಸೆಯನ್ನು ತಲುಪಿಸುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕ್ರಮ ನಡೆದಿದ್ದು, ಬಂದಂತಹ ಜನರಿಗೆ ಬೆಣ್ಣೆ ದೋಸೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದಾವಣಗೆರೆಯ ಗರಿಗರಿ ಬೆಣ್ಣೆ ದೋಸೆಯನ್ನು ಸವಿದು ಆನಂದಿಸಬಹುದಾಗಿದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ. ಸಂತೋಷ್, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಡಾ. ಅಶ್ವತ್ ಎಂ.ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿದ್ರಾಮ್ ಮಾರಿಹಾಳ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು












Click it and Unblock the Notifications