ದಾವಣಗೆರೆ: ಬ್ಯಾಂಕ್ ಖಾತೆಯಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 52,00,000 ದೋಚಿದ ಖದೀಮರು: ಮುಂದೇನಾಯ್ತು?
ದಾವಣಗೆರೆ, ಅಕ್ಟೋಬರ್ 11: ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇನ್ನು ಇದೀಗ ವಂಚಕರು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 52,00,000 ರೂಪಾಯಿ ದೋಚಿದ್ದರು. ಬಳಿಕ ಕೊನೆಗೂ ಪೊಲೀಸರು ಓರ್ವ ಕಳ್ಳಮನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ವ್ಯಕ್ತಿಯೊಬ್ಬರು ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದರು. ಆದರೆ, ಖದೀಮರು ಕ್ಷಣ ಮಾತ್ರದಲ್ಲೇ ನೆಟ್‌ಬ್ಯಾಂಕ್ ಮೂಲಕ ಹಣ ಬಾಚಿದ್ದಾರೆ. ಇದೀಗ ಈ ಪ್ರಕರಣದ ಅಂತರರಾಜ್ಯ ಸೈಬರ್ ವಂಚಕನನ್ನು ದಾವಣಗೆರೆಯ ಸಿಇಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಶಾಂತಿಗ್ರಾಮದ ಸೈಬರ್ ವಂಚಕ ಸೈಯದ್ ಅರ್ಫಾತ್ ಎಂಬುವನನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಪತ್ತೆ ಕಾರ್ಯ ಮುಂದುವರೆದಿದೆ. ದಾವಣಗೆರೆಯ ನಿಟುವಳ್ಳಿಯ ಎಚ್.ಎಚ್.ಪ್ರಮೋದ್ ಎಂಬುವರ ಬ್ಯಾಂಕ್ ಖಾತೆಯಿಂದ 52,60,523 ರೂಪಾಯಿಗಳನ್ನು ನೆಟ್‌ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಕೊಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ದಾವಣಗೆರೆಯ ಸಿಇಎನ್ ಪೊಲೀಸರು ಆರೋಪಿ ಸೈಯದ್ ಅರ್ಫಾತ್ ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ ಹಣ, ಮೊಬೈಲ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿತರ ಚಾಲ್ತಿ ಇದ್ದ ಖಾತೆಯಲ್ಲಿ ಜುಲೈ 27ರಿಂದ ಆಗಸ್ಟ್ 19ರ ವರೆಗೆ ಸುಮಾರು 150 ಕೋಟಿ ರೂಪಾಯಿ ಆನ್‌ಲೈನ್ ವಂಚನೆಯ ಹಣ ಇರುವುದು, ಅದರಲ್ಲಿ 132 ಕೋಟಿ ರೂಪಾಯಿ ವಿತ್ ಡ್ರಾ ಮಾಡಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಖಾತೆಯಲ್ಲಿ ಇದ್ದ 18 ಕೋಟಿ ರೂಪಾಯಿಯನ್ನು ಪೊಲೀಸರು ಲಾಕ್ ಮಾಡಿಸಿದ್ದಾರೆ. ದಾವಣಗೆರೆಯ 3ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶದಂತೆ ಪ್ರಮೋದ್ ಅವರಿಗೆ 52,60,400 ರೂಪಾಯಿ ಹಣವನ್ನು ಹಿಂದಿರುಗಿಸಲಾಗಿದೆಎ ಎಂದು ತಿಳಿದುಬಂದಿದೆ.
ಇನ್ನು ಈ ಆರೋಪಿಗಳು ಉತ್ತರ ಪ್ರದೇಶದ ಗಾಜೀಯಬಾದ್, ಶ್ರೀನಗರ, ಆಂಧ್ರ ಪ್ರದೇಶದ ಏಲೂರು, ಮುಂಬಯಿ, ಬೆಂಗಳೂರು ಸಿಟಿ ಹಾಗೂ ದಾವಣಗೆರೆ ಜಿಲ್ಲೆಯ ಸಿಇಎನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರರಕಣ ನಡೆಸಿದ್ದಾನೆ. ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ಕಾರ್ಯಾಚರಣೆ ತಂಡದಿಂದ ಬಂಧಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅರಕ್ಷಕ ಪರಮೇಶ್ವರ್ ಹೆಗಡೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಬಂಕಾಳಿ ನಾಗಪ್ಪ, ನಿರೀಕ್ಷಕ ವಸಂತ್, ಸಿಬ್ಬಂದಿಗಳಾದ ಅಶೋಕ, ಸುರೇಶ್, ಮುತ್ತುರಾಜ್, ನಿಜ ಲಿಂಗಪ್ಪ, ಅಂಜಿನಪ್ಪ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸೈಬರ್ ವಂಚನೆಗಳು ನಡೆದಿರುವುದು ಇದೇ ಮೊದಲೇನಲ್ಲ.. ಈ ಹಿಂದೆಯೂ ಸಹ ಸುಮಾರು ನಡೆದಿದ್ದು, ಪೊಲೀಸರು ಕಳ್ಳ ಕಾಕರನ್ನು ಬಂಧಿಸಿ ಹಣ ಕಳೆದುಕೊಂಡವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ಪೊಲೀಸರು ಬಿಸಿ ಮುಟ್ಟಿಸಿದರೂ ಸಹ ಕೆಲ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಅಮಾಯಕರ ಬಳಿ ಹಣ ಪೀಕುವ ಕೆಲಸವನ್ನು ಮುಂದುವರೆಸಿದ್ದಾರೆ.












Click it and Unblock the Notifications