ನಾರಾಯಣ ಸ್ವಾಮಿ ಚಡ್ಡಿ ಹೊತ್ತದ್ದು ಮಲ ಹೊರುವ ಪದ್ಧತಿಗಿಂತ ಹೀನ: ಡಿ. ಬಸವರಾಜ್ ಆಕ್ರೋಶ
ದಾವಣಗೆರೆ, 13: ''ಮನುವಾದ ಜೀವಂತವಾಗಿಡಲು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿಯಿಂದ ಹೊಲಸು ಚಡ್ಡಿಯನ್ನು ಬಿಜೆಪಿಯವರು ಹೊರಿಸಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಉದ್ದೇಶವೇ ಮನುವಾದ ಅನುಷ್ಠಾನಕ್ಕೆ ತರುವುದಾಗಿದೆ. ಜಾತಿ ವ್ಯವಸ್ಥೆ ಜೀವಂತ ಇಡಲು ಪ್ರಯತ್ನ ನಡೆಸುತ್ತಿದ್ದಾರೆ. ನಾರಾಯಣ ಸ್ವಾಮಿ ಬಳಸಿ ಬಿಸಾಡಿದ ಹೊಲಸು ಚಡ್ಡಿ ಹೊತ್ತು ಹೋಗಿದ್ದು ಮಲ ಹೊರುವ ಪದ್ಧತಿಗಿಂತ ಹೀನ'' ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಾಂಗ್ರೆಸ್‌ನಲ್ಲಿದ್ದ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ರೈಲ್ವೆ ಖಾತೆಯ ಸಚಿವರಾಗಿದ್ದಾಗ ಕೇಂದ್ರದ ರಾಜ್ಯ ಸಚಿವ ಸ್ಥಾನಮಾನ ಪಡೆದಿದ್ದರು. ಕಾಂಗ್ರೆಸ್‌ನಲ್ಲಿ ಎಲ್ಲಾ ಅನುಭವಿಸಿ ಬಿಜೆಪಿ ಹೋಗಿದ್ದಾರೆ. ಇಂಥವರಿಗೆ ಸಿದ್ದರಾಮಯ್ಯರ ವಿರುದ್ಧ ಹೋರಾಟ ಮಾಡಲು ನೈತಿಕತೆ ಇಲ್ಲ'' ಎಂದು ಹೇಳಿದರು.
ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಎನ್‌ಎಸ್‌ಯುಐ ಕಾರ್ಯಕರ್ತರು ಆರ್ ಎಸ್ ಎಸ್ ಚಡ್ಡಿ ಸುಟ್ಟಿದ್ದರು. ಇವರನ್ನೆಲ್ಲಾ ಪೊಲೀಸರು ಬಂಧಿಸಿದ ನಂತರ ಸಿದ್ದರಾಮಯ್ಯ ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಕೆಪಿಸಿಸಿ ಕಚೇರಿಗೆ ಹಳೆವಡ್ಡಿಯನ್ನು ಕಳುಹಿಸಿಕೊಟ್ಟಿದ್ದರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಕೂಡ ಚಡ್ಡಿ ಹೊತ್ತು ಪ್ರತಿಭಟನೆ ನಡೆಸಿದ್ದರು.

ವಿರೋಧ ಪಕ್ಷವನ್ನು ಗುರಿಯಾಗಿಸಿ ಇಡಿ ಸಮನ್ಸ್
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಐಟಿ, ಇಡಿ ಹಾಗೂ ಸಿಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
ಕೇವಲ ವಿರೋಧ ಪಕ್ಷವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಬಿಜೆಪಿಯವರ ಮೇಲೆ ಯಾಕೆ ಆಗಿಲ್ಲ. ಬಿಜೆಪಿಯವರೇನೂ ಸತ್ಯಹರಿಶ್ಚಂದ್ರರಾ, ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ನೀಡಿ ಆಪರೇಷನ್ ಕಮಲ ನಡೆಸಲಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ನೆಮ್ಮದಿಯಿಲ್ಲ
ಮೋದಿ ಆಡಳಿತದಲ್ಲಿ ದೇಶದ ಹೊರಗೆ ಹಾಗೂ ದೇಶದ ಒಳಗಡೆ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಆಡಳಿತದಲ್ಲಿ ಅರಾಜಕತೆ ಇದೆ. ಆಡಳಿತ ವೈಫಲ್ಯವನ್ನು ಮರೆಮಾಚಲು ಯತ್ನಿಸಲಾಗುತ್ತಿದೆ. ದೇಶದಲ್ಲಿ ಗೋಡ್ಸೆ ರೀತಿ ವರ್ತಿಸಲು ಬಿಜೆಪಿ ನಾಯಕರಿಗೆ ಅವಕಾಶ ಕೊಟ್ಟು ಅಶಾಂತಿ ಮೂಡಿದ ನಂತರ ಅವರನ್ನು ಸಸ್ಪೆಂಡ್ ಮಾಡುವ ನಾಟಕ ಮಾಡುತ್ತಿದ್ದಾರೆ. ಬುಲ್ಡೋಜರ್ ಸಂಸ್ಕೃತಿ ತಾಲಿಬಾನ್ ಸಂಸ್ಕೃತಿಯಾಗಿದೆ. ದೇಶದಲ್ಲಿ ಅಶಾಂತಿ ಉಂಟು ಮಾಡಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಕೇಂದ್ರ, ರಾಜ್ಯ ಸರ್ಕಾರಗಳು, ಪ್ರತಿಭಟಿಸುವವರ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡು ಅವರ ಮನೆಗಳನ್ನು ಬುಲ್ಡೋಜರ್‌ನಿಂದ ಧ್ವಂಸ ಮಾಡುತ್ತಿರುವುದು ಈ ನೆಲದ ಕಾನೂನಿಗೆ ವಿರುದ್ಧವಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸುವವರ ನಡೆ ತಪ್ಪಾಗಿದ್ದರೆ ಅವರನ್ನು ಕಾನೂನು ಪ್ರಕಾರ ನ್ಯಾಯಾಲಯದ ಮೂಲಕ ಶಿಕ್ಷಿಸಲಿ. ಅದರ ಬದಲಾಗಿ ಪ್ರತಿಭಟನಾಕಾರರ ಕುಟುಂಬದ ವಾಸದ ಮನೆಗಳನ್ನು ಬುಲ್ಡೋಜರ್‌ನಿಂದ ನಾಶಪಡಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.

ಮಹಾನ್ ನಾಯಕರಿಗೆ ಅವಮಾನ
ರಾಜ್ಯದ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಬಸವಣ್ಣ, ನಾರಾಯಣಗುರು ಸೇರಿದಂತೆ ಮಹಾತ್ಮರ ವಿಚಾರಗಳನ್ನು ತಿರುಚಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಅಮೃತದಂತಹ ವಿದ್ಯೆ ಕೊಡುವ ಬದಲು ವಿಷ ಕೊಡುತ್ತಿದ್ದಾರೆ. ಮುಂದಿನ ಪೀಳಿಗೆ ಬಿಜೆಪಿ ಸರಕಾರದ ನಡೆಯನ್ನು ಕ್ಷಮಿಸಲಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಎರಡು ತಲೆ ಹಾವು
ರಾಜ್ಯಸಭೆಯಲ್ಲಿ ಆತ್ಮಸಾಕ್ಷಿ ಮತದಾನ ಎಂಬ ಹೆಸರಿನಲ್ಲಿ ಸಿದ್ದರಾಮಯ್ಯ ಅಡ್ಡಮತದಾನಕ್ಕೆ ಪ್ರೇರಿಸಿದ್ದಾರೆ. ಈ ಹಿಂದೆ ಅವರ ಶಾಸಕರು ಬೇರೆ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಸ್ಪೀಕರ್ ಬಳಸಿಕೊಂಡು ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಅವರೊಬ್ಬ ಎರಡು ತಲೆ ಹಾವಿದ್ದಂತೆ ಎನ್ನುವ ಶ್ರೀರಾಮುಲು ಮಾತು ಸತ್ಯ ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಚಾಮರಾಜನಗರದಲ್ಲಿ ಕಿಡಿಕಾರಿದ್ದರು.












Click it and Unblock the Notifications