Congress Guarantees: ಮೊದಲಿಗೆ ಫ್ರೀ..ಫ್ರೀ..ಪ್ರೀ ಅಂತೇಳಿ ಈಗ ಷರತ್ತು ವಿಧಿಸಿ ಬತ್ತಿ ಇಡ್ತಿರೋದ್ಯಾಕೆ?: ರೇಣುಕಾಚಾರ್ಯ
ದಾವಣಗೆರೆ, ಜೂನ್, 06: ಕಾಂಗ್ರೆಸ್ 5 ಭರವಸೆಗಳನ್ನೇನೋ ಜಾರಿ ಮಾಡಿದೆ. ಆದರೆ ಇದೀಗ ಈ ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುತ್ತಿರುವುದು ಏಕೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹನುಮಸಾಗರ ತಾಂಡಾದಲ್ಲಿ ಪ್ರಶ್ನಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ 2000 ರೂ. ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದನ್ನು ಅತ್ತೆಗೆ ಕೊಡುತ್ತಾರೋ ಅಥವಾ ಸೊಸೆಗೆ ನೀಡುತ್ತಾರೆಯೋ ಗೊತ್ತಿಲ್ಲ. ಆದರೆ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಹುಳಿ ಹಿಂಡುವ ಕೆಲಸ ಮಾಡಲಾಗುತ್ತಿದೆ ಎಂದು ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಅತ್ತೆ, ಸೊಸೆಯನ್ನು ಬೇರ್ಪಡಿಸಬಾರದು. ಅತ್ತೆ ಹಾಗೂ ಸೊಸೆಗೂ ತಲಾ 2 ಸಾವಿರ ರೂಪಾಯಿ ನೀಡಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ ತಾಲೂಕಿನ ಹನುಮಸಾಗರ ತಾಂಡಾದಲ್ಲಿ ಆಗ್ರಹಿಸಿದರು.
ಹೊನ್ನಾಳಿ ತಾಲೂಕಿನ ಹನುಮಸಾಗರ ತಾಂಡಾದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ ಅವರು, ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಷರತ್ತುಗಳ ಮೇಲೆ ಷರತ್ತು ವಿಧಿಸುತ್ತಿದೆ. ಜನರಿಗೆ ಕೊಟ್ಟಿರುವ ಭರವಸೆ ಈಡೇರಿಸಿ ಎನ್ನುವುದಷ್ಟೇ ನನ್ನ ಕಳಕಳಿ. ಯಾವುದೇ ಷರತ್ತುಗಳನ್ನು ವಿಧಿಸದೇ ಜನರಿಗೆ ಯೋಜನೆ ತಲುಪಿಸಿ ಎಂದು ಒತ್ತಾಯ ಮಾಡಿದರು.
ಅವರು 10 ಕೆ.ಜಿ ಅಕ್ಕಿ ಕೊಡುತ್ತಿಲ್ಲ. ಹಾಗೆಯೆ ಒಂದು ಮನೆಗೆ ಎರಡು ಸಾವಿರ ರೂಪಾಯಿ ಅತ್ತೆಗೆ ಕೊಡುತ್ತಾರೋ ಅಥವಾ ಸೊಸೆಗೆ ಕೊಡುತ್ತಾರೆಯೋ ಗೊತ್ತಿಲ್ಲ. ಆದರೆ ಸರ್ಕಾರದ ಭರವಸೆಯಿಂದ ಅತ್ತೆ-ಸೊಸೆಗೆ ಹೊಡೆದಾಡುವಂತಾಗಿದೆ. ಕಿತ್ತಾಡಿ ಬೇರೆ ಮನೆ ಮಾಡುವಂತೆ ಆಗಬಾರದು ಎಂದರು. ಆಗ ಕೊಟ್ಟ ಮಾತು ಈಡೇರಿಸದಿದ್ದರೆ ನಾಲಗೆ ಸೀಳುತ್ತೇವೆ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಚುನಾವಣೆಗೂ ಮುನ್ನ ಎಲ್ಲಾ ಮಹಿಳೆಯರಿಗೂ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂದಿದ್ದರು. ಚುನಾವಣೆ ಪೂರ್ವದಲ್ಲಿ ಯಾವ ಷರತ್ತು ಹಾಕಿಲ್ಲ. ಆದರೆ ಈಗ ಕೆಂಪು ಬಸ್‌ನಲ್ಲಿ ಮಾತ್ರ ಉಚಿತ ಎನ್ನುತ್ತಿದ್ದಾರೆ. ಅಲ್ಲದೆ ಬಾಡಿಗೆ ಮನೆಯಲ್ಲಿ ಇದ್ದವರಿಗೆ ವಿದ್ಯುತ್ ಉಚಿತ ಎಂದಿದ್ದರು. ಈಗ ಅದೂ ಇಲ್ಲ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೆ ಸಿಎಂ ಸಿದ್ದರಾಮಯ್ಯ ಅವರು ನನಗೂ ಫ್ರೀ, ಮಹಾದೇವಪ್ಪರಿಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ ಫ್ರೀ.. ಎಂದು ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಎಲ್ಲದಕ್ಕೂ ಷರತ್ತು ವಿಧಿಸುತ್ತಿರುವುದ್ಯಾಕೆ ಎಂದು ಪ್ರಶ್ನಿಸಿದರು.
ಕೆಂಪು ಬಸ್‌ಗಳಲ್ಲಿ ಕೇವಲ 20 ಸೀಟುಗಳು ಮಾತ್ರ ಮಹಿಳೆಯರಿಗೆ ಸಿಗುತ್ತವೆ. ಧರ್ಮಸ್ಥಳ ಸೇರಿದಂತೆ ಯಾವುದೋ ಪ್ರವಾಸಿ ತಾಣಕ್ಕೆ ಹೋಗಲು 50 ಮಹಿಳೆಯರು ನಿರ್ಧರಿಸಿದರೆ ಉಚಿತ ಯಾಕೆ ಸಿಗುವುದಿಲ್ಲ? ಎಷ್ಟೇ ಜನರು ಪ್ರಯಾಣ ಮಾಡಿದರೂ ಉಚಿತ ಎಂದು ಘೋಷಿಸಬೇಕು. ಅದನ್ನು ಬಿಟ್ಟು ಇಷ್ಟೇ ಸೀಟು ಎಂದು ಯಾಕೆ ಈಗ ಹೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಇದನ್ನು ಯಾಕೆ ಹೇಳಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇನ್ನು ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮೋ ಪದವೀಧರರಿಗೆ ಕೇವಲ 2022-2023ನೇ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಮಾತ್ರ ಯುವ ನಿಧಿ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನು ಬಿಟ್ಟು ಕಳೆದ ಹತ್ತು ವರ್ಷಗಳಿಂದ ನಿರುದ್ಯೋಗಿಗಳಾಗಿರುವವರಿಗೆ ಹಾಗೂ ಡಿಪ್ಲೋಮೋ ಪದವೀಧರರಿಗೂ ತಲಾ 3000 ರೂಪಾಯಿ ಹಾಗೂ 1500 ರೂಪಾಯಿ ನೀಡಬೇಕು ಎಂದು ಮನವಿ ಮಾಡಿದರು.
ಆಶಾಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರಿಗೆ ಸಹಾಯಧನ ಹೆಚ್ಚಳ ಮಾಡಿಲ್ಲ. ಸಿಲಿಂಡರ್ ದರ ಕಡಿಮೆ ಆಗಿಲ್ಲ. ಬೇರೆ ಬೇರೆ ಭರವಸೆಗಳನ್ನು ಈಡೇರಿಸುವ ಬಗ್ಗೆ ಮಾತನಾಡಿಲ್ಲ. ಹಾಲಿಗೆ 1 ರೂಪಾಯಿ 75 ಪೈಸೆ ಹೆಚ್ಚಳ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಅವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ನಾವು ಹೇಳಿದ್ದೆವು. ಆದರೆ ಕಾಂಗ್ರೆಸ್ ನಾಯಕರೇ ಜನರ ಕಿವಿಗೆ ಹೂವು ಇಡಬೇಡಿ. ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಿ ಎಂದರು.
ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳು ಆರ್ಥಿಕ ದಿವಾಳಿ ಹಂತಕ್ಕೆ ತಲುಪಿವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಕುಂಠಿತವಾಗಲಿದೆ. ಎಲ್ಲಿಂದ ಹಣಕಾಸು ಹೊಂದಿಸಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿಲ್ಲ. ತೆರಿಗೆ ವಿಧಿಸಿ ಹಣ ವಸೂಲಿ ಮಾಡಲಾಗುತ್ತದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ನಾನು ಟೀಕೆ ಟಿಪ್ಪಣಿ, ವಿರೋಧ ಮಾಡಲು ಹೋಗುವುದಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ನಾನು ಮತ್ತು ಕುಟುಂಬ ಸದಸ್ಯರು ಬಳಸಿಕೊಳ್ಳುವುದಿಲ್ಲ. ಇವುಗಳನ್ನು ನಿರ್ಗತಿಕರಿಗೆ ಕೊಡಿ. ಷರತ್ತುಗಳನ್ನು ತೆಗೆದು ಬೇಷರತ್ತಾಗಿ ನೀಡಬೇಕು. ವಚನ ಭ್ರಷ್ಟರಾಗಬೇಡಿ ಎಂದು ಕುಟುಕಿದರು.












Click it and Unblock the Notifications