Congress Candidates 4th List: ಹರಿಹರ ಕ್ಷೇತ್ರದಿಂದ ನಂದಿಗಾವಿ ಶ್ರೀನಿವಾಸ್‌ಗೆ ಕಾಂಗ್ರೆಸ್ ಟಿಕೆಟ್
ದಾವಣಗೆರೆ, ಏಪ್ರಿಲ್, 18: ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾಚಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬಿಳಲಿದ್ದು, ಈ ಹಿನ್ನೆಲೆ ಮಂಗಳವಾರ (ಏಪ್ರಿಲ್ 18) ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹರಿಹರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿದೆ.

ಈ ಮೂಲಕ ಹಾಲಿ ಶಾಸಕ ರಾಮಪ್ಪ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ನಂದಿಗಾವಿ ಶ್ರೀನಿವಾಸ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ರಾಮಪ್ಪನವರು ಹರಿಹರದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಪರವಾಗಿ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ್ದರು. ಆದರೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ನಂದಿಗಾವಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಹರಿಹರ ತಾಲೂಕಿನ ಕನಕಗುರು ಪೀಠದ ಶಾಖಾ ಮಠದ ನಿರಂಜನಾನಂದ ಪುರಿ ಸ್ವಾಮೀಜಿಯವರ ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ನಂದಿಗಾವಿ ಶ್ರೀನಿವಾಸ್ ಅವರು ಹಾಂಕಾಂಗ್‌ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಕೊರೊನಾ ಸಂಕಷ್ಟದ ವೇಳೆಯಲ್ಲಿ ಭಾರತಕ್ಕೆ ವಾಪಸ್ ಆಗಿದ್ದ ನಂದಿಗಾವಿ ಶ್ರೀನಿವಾಸ್ ಅವರು ಹರಿಹರದಲ್ಲಿ ನೆಲೆಸಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದ ನಂದಿಗಾವಿ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಗಲು ರಾಹುಲ್ ಗಾಂಧಿ ಹಾಗೂ ನಿರಂಜನಾನಂದ ಪುರಿ ಸ್ವಾಮೀಜಿ ಅವರ ಆಶೀರ್ವಾದದಿಂದ ಟಿಕೆಟ್ ಸಿಕ್ಕಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಹಾಲಿ ಶಾಸಕ ರಾಮಪ್ಪ ಅವರು ಟಿಕೆಟ್‌ಗಾಗಿ ಭಾರೀ ಪ್ರಯತ್ನ ಮಾಡಿದ್ದರು. ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ನಾಯಕರ ಬಳಿ ಟಿಕೆಟ್‌ಗೆ ಭಾರಿ ಪ್ರಯತ್ನ ನಡೆಸಿದ್ದರು. ಸಿದ್ದರಾಮಯ್ಯನವರ ಆಪ್ತರಾಗಿದ್ದ ರಾಮಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದು, ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಕೊನೆ ಹಂತದ ಪ್ರಯತ್ನ ಮಾಡಿದ್ದ ರಾಮಪ್ಪ ಅವರಿಗೆ ನಿರಾಸೆ ತಂದಿದೆ. ಪಕ್ಷೇತರರಾಗಿ ಟಿಕೆಟ್ ಸಿಗದಿದ್ದರೆ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಈಗ ರಾಮಪ್ಪನವರ ನಡೆಯ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಬಿಜೆಪಿಯಿಂದ ಬಿ.ಪಿ. ಹರೀಶ್, ಜೆಡಿಎಸ್‌ನಿಂದ ಎಚ್.ಎಸ್. ಶಿವಶಂಕರ್ ಅವರು ನಾಮಪತ್ರ ಸಲ್ಲಿಸಿದ್ದು, ನಂದಿಗಾವಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿರುವುದರಿಂದ ಕದನ ಮತ್ತಷ್ಟು ರಂಗೇರಿದೆ.












Click it and Unblock the Notifications