ನನಗೆ ಗುಂಡಿ ತೋಡುವ ಕನಸು ನನಸಾಗದು: ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ದಾವಣಗೆರೆ, ಮಾರ್ಚ್, 25: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ನೀಡಿ. ಯಾವುದೇ ಕಾರಣಕ್ಕೂ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗುವುದು ಬೇಡ. ಅಭಿವೃದ್ಧಿ ಪಥದಲ್ಲಿ ಮುಂದೆ ಹೋಗಬೇಕಾದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಯಾರಿಗೂ ಬಹುಮತ ನೀಡದಿದ್ದರೆ ರಾಜ್ಯದ ಭವಿಷ್ಯ ಉಜ್ವಲವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆಯಲ್ಲಿ ಹೇಳಿದರು.
ನಗರದ ಜಿಎಂಐಟಿಯಲ್ಲಿ ಕಾಲೇಜು ಸಮೀಪದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಹಾಸಂಗಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಬಹುಮತ ನೀಡಲು ಆಗುತ್ತದೆಯೋ, ಇಲ್ಲವೋ. ಬಹುಮತ ಸರ್ಕಾರ ಬೇಕೋ ಬೇಡವೋ. ಸುಳ್ಳು, ಮೋಸ, ವಂಚನೆ ರಾಜಕೀಯ ಬೇಡ. ಕರ್ನಾಟಕವನ್ನು ಮುಂದೆ ತೆಗೆದುಕೊಂಡು ಹೋಗುವವರು ಬರಬೇಕು ಎಂದರು.

ಕಾಂಗ್ರೆಸ್ ವಿರುದ್ಧ ಮೋದಿ ಆಕ್ರೋಶ
ನಾನು ನಿಮ್ಮ ಸೇವೆ ಮಾಡಬೇಕಾ. ಇದು ಜಾಸ್ತಿಯಾಗಬೇಕಾದರೆ ನೀವು ನನಗೆ ಏನನ್ನಾದರೂ ನೀಡಬೇಕು. ಹಾಗಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಿ. ಕಮಲ ಅರಳಿಸಲು ಕರ್ನಾಟಕದ ಜನತೆ ನಿರ್ಧರಿಸಿದ್ದಾರೆ. ನನಗೆ ಗುಂಡಿ ತೋಡುವ ಕನಸು ನನಸಾಗದು ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರು ಹೇಳದೇ ಟೀಕಿಸಿದ ಮೋದಿ, ರಾಜಕೀಯ ಕರ್ಮಭೂಮಿಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಲ್ಲಿ ಅಧಿಕಾರಕ್ಕೆ ಬಂದದ್ದು ಬಿಜೆಪಿ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಳದಲ್ಲಿ ವಿಜಯಸಂಕಲ್ಪ ನಡೆದಿದೆ. ಇಲ್ಲಿಂದ ವಿಜಯ ಯಾತ್ರೆ ಆರಂಭವಾಗಿರುವುದು ಶುಭ ಸಂಕೇತವಾಗಿದೆ. ಇದು ವಿಧಾನಸಭೆ ಚುನಾವಣೆಯಲ್ಲಿಯೂ ಪುನರಾವರ್ತನೆ ಆಗಬೇಕು ಎಂದು ಹೇಳಿದರು.

ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಪ್ರಧಾನಿ
ನಾನು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನು ಮೊಬೈಲ್ ಹಾಗೂ ಮಾಧ್ಯಮವೊಂದರಲ್ಲಿ ನೋಡಿದ್ದೆ. ಅದನ್ನು ನೆನೆಸಿಕೊಂಡರೆ ತುಂಬಾ ದುಃಖವಾಗುತ್ತದೆ. ಕಾರ್ಯಕರ್ತನ ಜೊತೆ ಈ ರೀತಿ ನಡೆದುಕೊಂಡರೆ ಸಾಮಾನ್ಯ ಜನರ ಜೊತೆ ಯಾವ ರೀತಿ ನಡೆದುಕೊಳ್ಳಬಹುದು? ಆದರೆ ಬಿಜೆಪಿಯಲ್ಲಿ ಎಲ್ಲಾ ಕಾರ್ಯಕರ್ತರಿಗೂ ಸಮಾನ ಗೌರವ ನೀಡಲಾಗುತ್ತದೆ. ಬಿಜೆಪಿಯಲ್ಲಿ ಯಾರು ಎಲ್ಲರೂ ಸಮಾನರು ಎಂದು ಭಾವಿಸಲಾಗುತ್ತದೆ ಅಂತಾ ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು.
ಅವಕಾಶವಾದಿ, ಸ್ವಾರ್ಥಪರದ ಸರ್ಕಾರವು ತುಂಬಾ ಸಮಯ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದನ್ನು ನೋಡಿದ್ದೀರಾ. ಇದರಿಂದ ಕರ್ನಾಟಕಕ್ಕೆ ನಷ್ಟ ಆಗಿದೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ರಾಜ್ಯದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತು ಈಗಲೂ ಈ ರಾಜ್ಯವನ್ನು ಎಟಿಎಂ ರೂಪದಲ್ಲಿ ನೋಡುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸಬೇಡಿ. ಸುಳ್ಳಿಗೆ ಮಾರುಹೋಗಬೇಡಿ ಎಂದು ಹೇಳಿದರು.
ಕಾಂಗ್ರೆಸ್‌ನವರು ಚುನಾವಣೆಗೆ ಮುನ್ನ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಸುಳ್ಳು ಮತ್ತು ಮೋಸ ಮಾಡುತ್ತಾರೆ ಎಂಬುದಕ್ಕೆ ಹಿಮಾಚಲ ಪ್ರದೇಶ ಉತ್ತಮ ನಿದರ್ಶನ. ಚುನಾವಣೆಗೂ ಮುನ್ನ ದೊಡ್ಡ ದೊಡ್ಡ ಘೋಷಣೆ ಮಾಡಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಭರವಸೆ ಈಡೇರಿಸಿಲ್ಲ. ಚುನಾವಣೆಗೆ ಮುನ್ನ ನೀಡಿದ್ದ ಭರವಸೆ ಏನಾಯತು ಎಂದು ಜನರು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಮೂರು ತಿಂಗಳಾದರೂ ಕಾಂಗ್ರೆಸ್‌ನಿಂದ ಗ್ಯಾರಂಟಿ ಕಾರ್ಡ್ ಇಲ್ಲ. ಇಂತಹ ಸುಳ್ಳು ಹೇಳುವವರಿಗೆ ಅವಕಾಶ ಕೊಡಬೇಡಿ. ಜನರಿಗೆ ಮೋಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಇದೇ ರೀತಿ ಮಾಡುತ್ತದೆ. ಯಾವುದೇ ಗುಣಾತ್ಮಕ ಅಜೆಂಡಾ ಇಲ್ಲ. ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಈ ಬಾರಿ ಬಿಜೆಪಿಗೆ ಬಹುಮತ ಕೊಡಬೇಕು ಎಂದು ಕರ್ನಾಟಕದ ಜನರು ಸಂಕಲ್ಪ ಮಾಡಿದ್ದಾರೆ ಎಂದರು.












Click it and Unblock the Notifications