10 ಸಾವಿರ ಕೊಟ್ಟು ಮತ ಹಾಕುವಂತೆ ತಾಕೀತು ಮಾಡಿದ್ರಾ ರೇಣುಕಾಚಾರ್ಯ?
ದಾವಣಗೆರೆ, ಜನವರಿ 02; ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಿಕೆ ವಿಚಾರದಲ್ಲಿ ಹೊನ್ನಾಳಿಯಲ್ಲಿ ಈಗ ಟಾಕ್ ಫೈಟ್ ಶುರುವಾಗಿದೆ. ಹಾಲಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಶಾಂತನಗೌಡ ನಡುವೆ ವಾಕ್ಸಮರ ನಡೆಯುತ್ತಿದೆ. ಆರೋಪ, ಪ್ರತ್ಯಾರೋಪ ಮಾಡುವ ಮೂಲಕ ರಾಜಕೀಯ ಕೆಸರೆರಚಾಟ ಮಾಡತೊಡಗಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹಮ್ಮಿಕೊಂಡಿದ್ದರು. ತನ್ನ ಮನೆಗೆ ಕುಟುಂಬಸ್ಥರನ್ನು ಕರೆಸಿಕೊಂಡು ವೈಯಕ್ತಿಕವಾಗಿ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಿದ್ದರು. ಆದರೆ ಈ ವೇಳೆ ರೇಣುಕಾಚಾರ್ಯ ಮಾಡಿದ ಯಡವಟ್ಟು ಈಗ ಭಾರೀ ಚರ್ಚೆಗೂ ಕಾರಣವಾಗಿದೆ.
ಮಾಜಿ ಶಾಸಕ ಶಾಂತನಗೌಡ ಮಾತನಾಡಿ, "ತಾಲೂಕಿನಲ್ಲಿ ಕೊರೊನಾ ಹಾವಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಹಣ ಬಂದಿದೆ. ಅವರಿಗೆಲ್ಲರಿಗೂ ದೇವರ ಫೋಟೋ ಇಟ್ಟು ಮುಂದಿನ ಚುನಾವಣೆಯಲ್ಲಿ ತನಗೆ ಮತ ಹಾಕುವಂತೆ 10 ಸಾವಿರ ರೂಪಾಯಿ ಕೊಟ್ಟಿದ್ದಾರೆ, ಇದು ಸರಿಯಲ್ಲ" ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದೆ. ಆದರೆ ಹೊನ್ನಾಳಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಜಟಾಪಟಿ ಶುರುವಾಗಿದೆ. ಇಬ್ಬರೂ ಆರೋಪ ಮಾಡಿದ್ದಾರೆ. ಇಬ್ಬರೂ ಸವಾಲು ಹಾಕಿದ್ದಾರೆ. ಮತದಾರರ ಮನಗೆಲ್ಲಲು ಈಗಲೇ ರಣತಂತ್ರ ರೂಪಿಸತೊಡಗಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

ಮತ ಹಾಕುವಂತೆ ಆಣೆ ಪ್ರಮಾಣ
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕೊರೊನಾ ಸೋಂಕು ತಗುಲಿ ಮೃತಪಟ್ಟ ಕುಟುಂಬದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ. ನಾನು ನಿಮಗೆ 10 ಸಾವಿರ ವೈಯಕ್ತಿಕವಾಗಿ ಹಣ ನೀಡುತ್ತಿದ್ದೇನೆ. ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಮನೆ ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಮಾಡಿಸಿದ್ದು ವಿಡಿಯೋದಲ್ಲಿ ಇದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೋವಿಡ್ ಪರಿಹಾರ ಹಣ ನೀಡುವಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಣೆ ಪ್ರಮಾಣ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ತಾಕೀತು ಮಾಡಿದ್ದಾರೆ.

ಊರಿನಲ್ಲಿ ಎಲ್ಲರಿಗೂ ಹೇಳಿ
ಸರ್ಕಾರದಿಂದ 1 ಲಕ್ಷ ರೂಪಾಯಿ ಹಣ ನಿಮ್ಮ ಅಕೌಂಟ್‌ಗೆ ಬರುತ್ತದೆ. ನಾನು ವೈಯಕ್ತಿಕವಾಗಿ 10 ಸಾವಿರ ಹಣ ನೀಡುತ್ತಿದ್ದೇನೆ. ಮುಂದಿನ ಸಾರಿ ನನಗೆ ವೋಟು ಹಾಕಬೇಕು. ನಿಮ್ಮ ಊರಿನಲ್ಲಿ ಹೋಗಿ ಎಲ್ಲರಿಗೂ ಹೇಳಿ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದರೂ ಬೊಮ್ಮಾಯಿ ಸರ್ಕಾರ 1 ಲಕ್ಷ ರೂಪಾಯಿ ನೀಡುತ್ತಿದೆ. ನಾನು ನಿಮಗೆ ವೈಯಕ್ತಿವಾಗಿ 10 ಸಾವಿರ ನೀಡುತ್ತಿದ್ದೇನೆ, ನೀವು ನನಗೆ ವೋಟು ಹಾಕಬೇಕು ಎಂದು ಹೇಳುವ ಮೂಲಕ ಹಣದ ಪಾಲಿಟಿಕ್ಸ್ ಶುರು ಮಾಡಿದ್ದಾರೆ ಎಂ. ಪಿ. ರೇಣುಕಾಚಾರ್ಯ ಎಂಬುದು ಆರೋಪವಾಗಿದೆ.

ಮಾಜಿ ಶಾಸಕರ ಆರೋಪವೇನು?
ಮಾಜಿ ಶಾಸಕ ಶಾಂತನಗೌಡ ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ತಾಲೂಕಿನಲ್ಲಿ ಕೊರೊನಾ ಹಾವಳಿಯಿಂದ ಸತ್ತಂತವರ ಕುಟುಂಬದವರಿಗೆ ಸರ್ಕಾರದಿಂದ ಬಂದ 1 ಲಕ್ಷ ರೂಪಾಯಿ ಹಣ ಬಂದಿದೆ. ಅವರಿಗೆಲ್ಲರಿಗೂ ದೇವರ ಫೋಟೋ ಇಟ್ಟು ಮುಂದಿನ ಚುನಾವಣೆಯಲ್ಲಿ ತನಗೆ ಮತ ಹಾಕುವಂತೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಇದು ಸರಿಯಲ್ಲ" ಎಂದು ಹೇಳಿದ್ದಾರೆ.
"ಕಳೆದ ಆರು ತಿಂಗಳಿನಿಂದಲೂ ನಾನು ಸಹ ಕೊರೊನಾದಿಂದ ಮೃತಪಟ್ಟವರ ಮನೆಗೆ ಹೋಗಿ ಹಾರ ಹಾಕಿ ಸಂತಾಪ ಸೂಚಿಸುವ ಕೆಲಸ ಮಾಡಿದ್ದೇನೆ, ಸಾಂತ್ವನ ಹೇಳಿ ಬಂದಿದ್ದೇನೆ. ಕುಟುಂಬದವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ. ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ನೋವಿಗೆ ಸ್ಪಂದಿಸಿ ಹಣ ಕೊಟ್ಟಿದ್ದರೆ ಖುಷಿ ಪಡುತ್ತೇನೆ, ಅಭಿನಂದಿಸುತ್ತೇನೆ. ಆದರೆ ಪ್ರಮಾಣ ಮಾಡಿಸಿಕೊಂಡು ಹಣ ಕೊಟ್ಟಿರುವುದು ಮತದಾರರಿಗೆ ಮೋಸ ಮಾಡಿದ ಹಾಗೆ. ಮತದಾರರಿಗೆ ಅವಮಾನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ. ಪಿ. ರೇಣುಕಾಚಾರ್ಯ ಸ್ಪಷ್ಟನೆ
ವಿಡಿಯೋ ಕುರಿತು ಮಾತನಾಡಿರುವ ಎಂ. ಪಿ. ರೇಣುಕಾಚಾರ್ಯ, "2023ಕ್ಕೆ ನನಗೆ ಆಶೀರ್ವಾದ ಮಾಡಿ ಎಂದು ಕೇಳಿದ್ದು ಸತ್ಯ. ಮನೆ ಬಳಿ ಬಂದವರಿಗೆ ಒಂದೂವರೆ ಸಾವಿರ ಜನರಿಗೆ ಊಟ ನೀಡಿದ್ದೇನೆ. ಸಾರ್ವಜನಿಕ ಸಭೆ ಹಾಗೂ ಮನೆಗೆ ಬಂದವರಿಗೆ ಕೇಳಿಕೊಂಡಿದ್ದೇನೆ. ಅವಳಿ ತಾಲೂಕಿನಲ್ಲಿ ಮೂರು ನೂರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಮತ ನೀಡಿ ಎಂದು ಕೇಳಿದ್ದು ನಿಜ. ಮನೆಗೆ ಬಂದವರಿಗೆ ವೋಟ್ ಕೇಳಿದ್ದೇನೆ. ಅಧಿಕಾರದಲ್ಲಿದ್ದಾಗ ಅಂಗನವಾಡಿ ಕೇಂದ್ರದವರಿಗೆ ಮತ ಹಾಕಿ ಎಂದು ಮಾಜಿ ಶಾಸಕರು ಕೇಳಿರಲಿಲ್ವಾ?. ನಾನು ಮಾಡಿದ ಕೆಲಸಗಳನ್ನು ಗುರುತಿಸಿ ವೋಟ್ ಕೇಳಿದ್ದೇನೆ. ಮಾಜಿ ಶಾಸಕರು ಹತಾಶ ಮನೋಭಾವದಿಂದ ಕೀಳಮಟ್ಟದ ಅಪಪ್ರಚಾರ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.












Click it and Unblock the Notifications