ಲಿಂಗಾಯತರ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಡಿಯೋದಲ್ಲಿದೆ, ಯಾರೂ ತಿರುಚಿಲ್ಲ: ಸಿಎಂ ಬೊಮ್ಮಾಯಿ
ದಾವಣಗೆರೆ, ಏಪ್ರಿಲ್ 24: ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಆಡಿರುವ ಮಾತು ವಿಡಿಯೋದಲ್ಲಿದೆ. ಅದನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಈ ಹಿಂದೆ ಪತ್ರಿಕೆಯಲ್ಲಿ ಬರೆದಾಗ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಪರಿಸ್ಥಿತಿ ಆ ರೀತಿ ಇಲ್ಲ. ಮೊದಲು ಹೇಳಿದ್ದೇ ಬೇರೆ, ಆಮೇಲೆ ಸಿದ್ದರಾಮಯ್ಯ ಹೇಳಿದ್ದೇ ಬೇರೆ. ಅವರ ಹೇಳಿಕೆಗಳನ್ನು ಬದಲಿಸಿದ್ದಾರೆ ಅಷ್ಟೇ. ಯಾರೂ ತಿರುಚಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತನಾಡಿರುವುದು ಸ್ಟಷ್ಟವಾಗಿದೆ. ಜನರೇನೂ ದಡ್ಡರಲ್ಲ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಸಭೆ ಮಾಡುತ್ತಿದ್ದಾರೆ. ಇದೇನೂ ಹೊಸದಲ್ಲ. ಚುನಾವಣೆಯಲ್ಲಿ ಈ ಹಿಂದೆ ಯಾವ ರೀತಿ ಕಾರ್ಯತಂತ್ರ ರೂಪಿಸುತ್ತಿದ್ದಾರೋ ಅದೇ ರೀತಿಯಲ್ಲಿ ಈ ಬಾರಿಯೂ ಆಗುತ್ತಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದರು.

ಕರ್ನಾಟಕದಲ್ಲಿ ಚುನಾವಣೆಯಲ್ಲಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್ ಸೇರಿದಂತೆ ರಾಷ್ಟ್ರೀಯ ನಾಯಕರು ಬರುತ್ತಾರೆ. ಈಗಾಗಲೇ ಅಮಿತ್ ಶಾ ಬಂದಿದ್ದಾರೆ ಎಂದರು.
ಬಿಜೆಪಿ ಪಕ್ಷ ತೊರೆದ ಹಿರಿಯ ನಾಯಕರ ಬಗ್ಗೆ ಮಾತನಾಡಿದ ಸಿಎಂ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಎಲ್ಲಾ ಪದವಿ, ಹುದ್ದೆ ಪಡೆದು ಹೋಗಿದ್ದಾರೆ. ಆ ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಪಕ್ಷ ಗೌರವಯುತವಾಗಿ ನಡೆದುಕೊಂಡಿತ್ತು ಎಂದರು.
ಇನ್ನು ರಾಹುಲ್ ಗಾಂಧಿ ಕೂಡಲ ಸಂಗಮಕ್ಕೆ ಭೇಟಿ ನೀಡಿರುವುದು ತೋರಿಕೆಗೆ ಮಾತ್ರ. ಅಷ್ಟಾದರೂ ಕಾಳಜಿ ಬಂದಿದೆಯಲ್ವಾ. ಲಿಂಗಾಯತ ಸಿಎಂ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲಾ ವಿಚಾರಗಳು ಗಮನದಲ್ಲಿರುತ್ತವೆ. ಚುನಾವಣಾ ಫಲಿತಾಂಶ ಬಂದ ಬಳಿಕ ನಿರ್ಧಾರವಾಗಲಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಳಿದಂತೆ ಎಲ್ಲರೂ ಮತ ಹಾಕುವುದಿಲ್ಲ ಎನ್ನುವುದು ನನ್ನ ಭಾವನೆ. ಧರ್ಮ, ಜಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಮಾಧ್ಯಮವದರೇ ಅದರ ಬಗ್ಗೆ ವಿಶ್ಲೇಷಿಸಬೇಕು ಎಂದು ಹೇಳಿದರು.
ಇನ್ನು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ನಾಡಿದ್ದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಕೊನೆ ದಿನ. ಕೆಲವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಆ ಬಳಿಕ ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರಿರುತ್ತಾರೆ ಎಂಬುದು ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಜನರು ಬಹಳ ವಿಚಾರ ಮಾಡಿ ತೀರ್ಮಾನಕ್ಕೆ ಬರುತ್ತಿದ್ದಾರೆ ಎಂದರು.
ಈ ಬಾರಿ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ಶೇಕಡಾ 80 ರಿಂದ 90ರಷ್ಟು ಬಂಡಾಯ ಎದ್ದವರು ನಾಮಪತ್ರ ವಾಪಸ್ ಪಡೆಯುತ್ತಾರೆ. ನಾನು ಕಳೆದ ಎರಡು ದಿನಗಳಿಂದ ಮಾತುಕತೆ ನಡೆಸಿದ್ದೇನೆ. ಲಿಂಗಾಯತ ಮತಗಳು ಕಳೆದ ಬಾರಿಗಿಂತ ಈ ಬಾರಿ ಜಾಸ್ತಿಯಾಗುತ್ತದೆ. ಇನ್ನು ಚನ್ನಗಿರಿಯಲ್ಲಿ ಬಿಜೆಪಿಗೆ ಬಂಡಾಯ ಎದ್ದು ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಡಾಳ್ ಮಲ್ಲಿಕಾರ್ಜುನ್ ನನ್ನ ಸಂಪರ್ಕದಲ್ಲಿ ಇಲ್ಲ. ಅವರು ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದರು.












Click it and Unblock the Notifications