ಚನ್ನಗಿರಿ ಲಾಕಪ್ ಡೆತ್ ಪ್ರಕರಣದ ತನಿಖೆ ಸಿಐಡಿಗೆ
ದಾವಣಗೆರೆ, ಮೇ 26: ಮಟ್ಕಾ ಆಡಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆದಿಲ್ ಎಂಬ ಆರೋಪಿ ಚನ್ನಗಿರಿ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದ. ಇದು ಲಾಕಪ್ ಡೆತ್ ಎಂದು ಸಂಬಂಧಿಕರು ಆರೋಪ ಮಾಡಿದ್ದು, ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿತ್ತು.
ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.

ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಈ ಕುರಿತು ಮಾಹಿತಿ ನೀಡಿದ್ದಾರೆ, ಚನ್ನಗಿರಿ ಲಾಕಪ್ ಡೆತ್ ಪ್ರಕರಣ, ಪೊಲೀಸ್ ಠಾಣೆಯಲ್ಲಿ ದಾಂಧಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಸಿಐಡಿ ಪೊಲೀಸರು ಶೀಘ್ರವೇ ತನಿಖೆ ಆರಂಭಿಸಲಿದ್ದಾರೆ ಎಂದರು.
25 ಜನರು ಬಂಧನ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಪ್ರಕರಣದ ಸಂಬಂಧ ಇದುವರೆಗೂ 25 ಜನರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಈ ಕುರಿತು 6 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಪೊಲೀಸ್ ಠಾಣೆ ಮೇಲೆ ದಾಳಿ ನಡೆದಾಗ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿ, ವಿಡಿಯೋ, ಸಾರ್ವಜನಿಕರು ಚಿತ್ರೀಕರಣ ಮಾಡಿದ ವಿಡಿಯೋ, ಮೊಬೈಲ್ ಕ್ಲಿಪ್‌ಗಳ ಆಧಾರದ ಮೇಲೆ 25 ಜನರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು ಗ್ರಾಮದ ನಿವಾಸಿಗಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 307ರ ಅಡಿ ಕೇಸು ದಾಖಲು ಮಾಡಲಾಗಿದೆ. ಘಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಆದಿಲ್ ಮರಣೋತ್ತರ ಪರೀಕ್ಷೆಯನ್ನು ಜಡ್ಜ್ ಸಮ್ಮುಖದಲ್ಲಿ ನಡೆಸಲಾಗಿದೆ. ಮೂರು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದ್ದು, ಬಳಿಕ ಸತ್ಯಾಂಶ ತಿಳಿಯಲಿದೆ. ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದಾಗ ಗಾಯಗೊಂಡ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದಿಲ್ ಎಂಬಾತನನ್ನು ಮಟ್ಕಾ ಆಡಿಸುತ್ತಿದ್ದ ಆರೋಪದಲ್ಲಿ ಬಂಧಿಸಿ ಚನ್ನಗಿರಿ ಪೊಲೀಸರು ಕರೆ ತಂದಿದ್ದರು. ಪೊಲೀಸರ ವಶದಲ್ಲಿದ್ದಾಗ ಆತ ಮೃತಪಟ್ಟಿದ್ದ. ಇದು ಲಾಕಪ್ ಡೆತ್ ಎಂದು ಆರೋಪಿಸಲಾಗಿತ್ತು. ಪೊಲೀಸರ ವಿರುದ್ಧ ಅಸಮಾಧಾನಗೊಂಡು ಶುಕ್ರವಾರ ರಾತ್ರಿ ಭಾರೀ ಪ್ರತಿಭಟನೆ ನಡೆಸಲಾಗಿತ್ತು.
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಪೊಲೀಸರ ವಾಹನಗಳನ್ನು ಜಖಂಗೊಳಿಸಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಕೆಲವು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಚನ್ನಗಿರಿ ಪೊಲೀಸರ ಪ್ರಕಾರ ಠಾಣೆಯಲ್ಲಿ ಕುಸಿದು ಬಿದ್ದ ಆದಿಲ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆತ ಸಾವನ್ನಪ್ಪಿದ್ದ. ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ಜನರ ಮನವೊಲಿಸಲು ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ ದಾಂಧಲೆ ನಡೆದಿತ್ತು.
ಆದಿಲ್ ತಂದೆ ಖಲೀಂಮುಲ್ಲಾ ಮಾಧ್ಯಮಗಳ ಜೊತೆ ಮಾತನಾಡಿ, "ನನ್ನ ಮಗ ಮಟ್ಕಾ ಆಡುತ್ತಿರಲಿಲ್ಲ. ಪೊಲೀಸರಿಗೆ ಕಮೀಷನ್ ಸಹ ಕೊಡುತ್ತಿರಲಿಲ್ಲ. ನನ್ನ ಸೊಸೆ ನೋವಿನಲ್ಲಿ ಏನೇನೋ ಹೇಳುತ್ತಿದ್ದಾಳೆ. ಆತ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ 2 ಸಾವಿರ ರೂ. ಹಣ ತರುತ್ತಿದ್ದ. ಅವನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು" ಎಂದು ಹೇಳಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, "ಆದಿಲ್ ಠಾಣೆಯಲ್ಲಿ 6-7 ನಿಮಿಷ ಕೂಡ ಇರಲಿಲ್ಲ. ಆತ ಹೇಗೆ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬಸ್ಥರಿಗೂ ನಾವು ತಿಳಿಸಿದ್ದೇವೆ. ಆದರೆ ಅಲ್ಲಿದ್ದ ಬೇರೆ ಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications