ಚನ್ನಗಿರಿ: 50 ವರ್ಷಗಳಿಂದ ಕೃತಕ ಹುಲಿ ಉಗುರು ತಯಾರಿಸಿ ಜೀವನ ನಡೆಸ್ತಿದ್ದ ಈ ಕುಂಟುಂಬಗಳಿಗೆ ಎದುರಾಯ್ತು ಆಪತ್ತು
ದಾವಣಗೆರೆ, ಅಕ್ಟೋಬರ್, 30: ಅದು ಐದು ದಶಕಗಳ ಕಾಯಕ. ಇದೇ ಅವರಿಗೆ ಜೀವನಾಧಾರ. ಇದರಲ್ಲಿಯೇ ಬದುಕು ಕಂಡುಕೊಂಡವರು. ಬದುಕಿನ ಬಂಡಿ ನೂಗಲು ಸಹ ಸಹಕಾರಿಯಾಗಿತ್ತು. ಆದರೆ ಈಗ ಕೃತಕ ಹುಲಿ ಉಗುರು ಸೇರಿದಂತೆ ಪ್ರಾಣಿಗಳ ವಸ್ತುಗಳನ್ನು ಮಾಡುತ್ತಿದ್ದ ಈ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸಂಚಕಾರ ತಂದೊಡ್ಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದಲ್ಲಿ ವಾಸವಿರುವ ಹಕ್ಕಿ ಪಿಕ್ಕಿ ಕುಟುಂಬಗಳಿಗೆ ಈಗ ಸಂಕಷ್ಟ ತಂದೊಡ್ಡಿದೆ. ಬಿಗ್ ಬಾಸ್ ಸ್ಪರ್ಧಿ ಹಾಗೂ ರೈತ ಸಂತೋಷ್ ವರ್ತೂರು ಹುಲಿ ಉಗುರು ಪೆಂಟೆಂಡ್ ಧರಿಸಿ ಬಂಧನವಾದ ಬಳಿಕ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ. ಅಷ್ಟೇ ಅಲ್ಲದೆ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ.

ದೊಡ್ಡ ದೊಡ್ಡ ನಟರು, ರಾಜಕಾರಣಿಗಳ ಮಕ್ಕಳು ಸೇರಿದಂತೆ ಹುಲಿ ಉಗುರು ಧರಿಸಿದ್ದವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಅಸಲಿಯೋ ನಕಲಿಯೋ ಎಂದು ಪರಿಶೀಲಿಸಿತ್ತು. ಆದರೆ ಈಗ ಇದನ್ನೇ ನಂಬಿ ಬದುಕುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದವರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
ಕೃತಕವಾಗಿ ಹುಲಿ ಉಗುರು ತಯಾರಿಸುವ ನೈಪುಣ್ಯತೆಯನ್ನು ಹಕ್ಕಿ ಪಿಕ್ಕಿ ಜನಾಂಗ ಹೊಂದಿದೆ. ಕುಲಕಸುಬು ಕೂಡ ಹೌದು. ಸುಮಾರು 50 ವರ್ಷಗಳಿಂದಲೂ ಕೃತಕ ಹುಲಿ ಉಗುರು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದವರಲ್ಲಿಯೂ ಆತಂಕ ಶುರುವಾಗಿದೆ. ಯಾಕೆಂದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ಇವರ ವಿಳಾಸ ಕೊಡುತ್ತಾರೆ. ಇವರಿಂದ ಖರೀದಿ ಮಾಡಿದ್ದೆ ಎಂಬುದು ಗೊತ್ತಾದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸುವ ಸಾಧ್ಯತೆಯೂ ಇರುತ್ತದೆ.
ಈ ಪ್ರಕರಣ ಗಂಭೀರತೆ ಪಡೆದ ಮೇಲೆ ಕೆಲವರಂತೂ ಹುಲಿ ಉಗುರು ಕೃತಕವೂ ಬೇಡ, ಯಾವುದೂ ಬೇಡ, ಇದರ ಸಹವಾಸವೇ ಬೇಡಪ್ಪ ಅನ್ನೋ ಮಟ್ಟಕ್ಕೆ ಬಂದುಬಿಟ್ಟಿದ್ದಾರೆ. ಅಷ್ಟು ಬಿಗಿ ಕ್ರಮ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ.
ರುದ್ರಾಕ್ಷಿ, ಹರಳು, ಮಸಾಜ್ ಎಣ್ಣೆ ಜೊತೆಗೆ ಹುಲಿ ಉಗುರು, ಹುಲಿ, ಜಿಂಕೆಗಳ ನಕಲಿ ಚರ್ಮ ರೂಪಿಸಿ, ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಿಗೂ ಹಕ್ಕಿ ಪಿಕ್ಕಿ ಜನಾಂಗದವರು ಹೋಗಿ ಮಾರಾಟ ಮಾಡುವುದು ವಾಡಿಕೆ. ಕಳೆದೊಂದು ವಾರದಿಂದ ವ್ಯಾಪಾರ ಇಲ್ಲದೇ ಕಂಗೆಟ್ಟು ಹೋಗಿದ್ದಾರೆ. ಇಷ್ಟು ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದೆವು. ಇಷ್ಟವಿದ್ದವರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು. ಆದರೆ ಈಗ ಯಾರೂ ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಸಾಯಿಖಾನೆಗಳಿಂದ ಹಸು- ಎಮ್ಮೆಯ ಕೊರಬು, ಗೊರಸುಗಳನ್ನು ತಂದು ಮೊದಲು ಕ್ಲೀನ್ ಮಾಡಲಾಗುತ್ತದೆ. ಆ ಬಳಿಕ ಯಂತ್ರದಿಂದ ಕತ್ತರಿಸಿ ಹತ್ತು ನಿಮಿಷದಲ್ಲಿಯೇ ಹುಲಿ ಉಗುರಿನಂತೆ ರೂಪ ಕೊಡಲಾಗುತ್ತದೆ. ಆದರೆ ಪೆಂಟೆಂಡ್ ಮಾಡುವುದು ನಮಗೆ ಗೊತ್ತಿಲ್ಲ ಎಂದು ಹಕ್ಕಿ ಪಿಕ್ಕಿ ಜನಾಂಗದವರು ಹೇಳುತ್ತಾರೆ.
ದಿನಕ್ಕೆ ಜಾನುವಾರುಗಳ ಗೊರಸಿನಿಂದ ಏನಿಲ್ಲಾ ಅಂದರೂ 50 ರಿಂದ 60 ಕೃತಕ ಹುಲಿ ಉಗುರು ರೂಪಿಸಬಹುದು. ಇಲ್ಲಿ ತಯಾರಾದ ಕೃತಕ ಹುಲಿ ಉಗುರು ದೇವಸ್ಥಾನಗಳ ಮುಂದೆಯೂ ಮಾರಾಟ ಮಾಡಲಾಗುತ್ತದೆ. ಕಡಿಮೆ ಎಂದರೆ ಜೋಡಿ ಉಗುರುಗಳಿಗೆ 500ರಿಂದ 1 ಸಾವಿರ ರೂಪಾಯಿ ಮೌಲ್ಯವಾಗಿರುತ್ತದೆ.
ಇದರ ಜೊತೆಗೆ ಮರಣ ಹೊಂದಿದ ದನದ ಚರ್ಮ ಹದಗೊಳಿಸಿ ಯಂತ್ರದ ಮೂಲಕ ಕಲರಿಂಗ್ ಮಾಡಿ ಹುಲಿ, ಜಿಂಕೆಯ ನಕಲಿ ಚರ್ಮ ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ. ಇದು ಇಂದು ನಿನ್ನೆಯದ್ದಲ್ಲ, ಸುಮಾರು ಐದು ದಶಕಗಳದ್ದು. ಗೋಪನಾಳ್ ಗ್ರಾಮದ ಮೂರು ಕುಟುಂಬಗಳು ಇದನ್ನು ತಯಾರಿಸುವುದರಲ್ಲಿ ಖ್ಯಾತಿ ಪಡೆದಿದೆ.
ನಾವು ಯಾರಿಗೂ ಯಾವುದೇ ತೊಂದರೆ ಕೊಟ್ಟಿಲ್ಲ, ಯಾವ ಪ್ರಾಣಿಯನ್ನೂ ಕೊಂದಿಲ್ಲ. ಆದರೂ ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಹುಲಿ ಉಗುರು ವಿವಾದ ಭುಗಿಲೆದ್ದ ಬಳಿಕ ತೊಂದರೆ ಕೊಡುತ್ತಿದ್ದಾರೆ. ಪರಿಶೀಲಿಸಲು ನಮಗೇನೂ ಅಭ್ಯಂತರ ಇಲ್ಲ. ಇದರಿಂದ ದೊಡ್ಡ ಸಮಸ್ಯೆ ಆಗಿರುವುದಂತೂ ನಿಜ ಎನ್ನುತ್ತಾರೆ ತಯಾರಕರು.
ಕರ್ನಾಟಕ ಹಕ್ಕಿ ಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್.ಪುನೀತ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಕಾಯಕ. ವನ್ಯಜೀವ ಸಂರಕ್ಷಣಾ ಕಾಯ್ದೆ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ವನ್ಯಜೀವಿಗಳನ್ನು ಸಾಯಿಸುವುದನ್ನು ಯಾರೂ ಒಪ್ಪಲ್ಲ, ನಾವು ಸಹ ಒಪ್ಪುವುದಿಲ್ಲ. ನಮ್ಮಂತಹ ಬುಡಕಟ್ಟು ಸಮುದಾಯದವರಿಗೆ ಬದುಕಲು ಅವಕಾಶ ಕೊಡಬೇಕು. ಇದನ್ನೇ ನಂಬಿ ಜೀವನ ಮಾಡುತ್ತಿದ್ದವರು ಈಗ ಏನು ಮಾಡಬೇಕು ಎಂಬ ಪ್ರಶ್ನೆ ಕಾಡಲಾರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹುಲಿ ಉಗುರಿನ ಸದ್ದು ಜೋರಾಗುತ್ತಿದ್ದಂತೆ ಗೋಪನಾಳ್ ಗ್ರಾಮದ ಬುಡಕಟ್ಟು ಸಮುದಾಯದವರಲ್ಲಿ ಆತಂಕ ದಿನಕಳೆದಂತೆ ಹೆಚ್ಚಾಗತೊಡಗಿರುವುದಂತೂ ಸತ್ಯ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications