ಬಜೆಟ್ 2022; ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳು
ದಾವಣಗೆರೆ, ಜನವರಿ 31; ಕೇಂದ್ರ ಬಜೆಟ್ 2022-23 ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಆಯವ್ಯಯದ ಮೇಲೆ ದಾವಣಗೆರೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಹೇಳಿಕೇಳಿ ಮಧ್ಯ ಕರ್ನಾಟಕದ ಹೆಬ್ಬಾಗಿಲು. ಕಳೆದ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂಥ ಯೋಜನೆಗಳು ಸಿಕ್ಕಿರಲಿಲ್ಲ. ಜೊತೆಗೆ ಕೈಗಾರಿಕೆಗಳು ಬರಬಹುದು ಎಂಬ ಲೆಕ್ಕಾಚಾರವೂ ಸುಳ್ಳಾಗಿತ್ತು. ಈ ಬಾರಿ ಹಾಗೆ ಆಗದಿರಲಿ ಎಂಬುದು ಜನರ ಆಶಯ.
ಕರ್ನಾಟಕದಲ್ಲಿ ಮಧ್ಯಬಾಗಿಲು ಅಂದರೆ ಅದು ದಾವಣಗೆರೆ. ಬೆಂಗಳೂರಿನಿಂದ ಹಿಡಿದು ಬಳ್ಳಾರಿಯವರೆಗೆ ಎಲ್ಲದಕ್ಕೂ ಮಧ್ಯಕೇಂದ್ರ ತಾಣ. ಆದರೆ ಇಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆ. ಇಲ್ಲಿ ಸೂಕ್ತ ಜಾಗ ಸಿಗದ ಕಾರಣ ವಿಮಾನ ನಿಲ್ದಾಣ ಆಗಿಲ್ಲ. ಈಗ ವಿಮಾನ ನಿಲ್ದಾಣ ಸ್ಥಾಪನೆಗೆ ಜಾಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೊತೆಗೆ ಪ್ರಯತ್ನವೂ ವೇಗವಾಗಿ ಸಾಗುತ್ತಿದೆ. ಬಜೆಟ್‌ನಲ್ಲಿ ಅನುದಾನ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಟೆಕ್ಸ್ ಟೈಲ್ಸ್ ಉದ್ಯಮಕ್ಕೆ ಬೆಣ್ಣೆನಗರಿ ಹೆಸರುವಾಸಿ. ಜವಳಿ ಉದ್ಯಮಕ್ಕೆ ಸಾಕಷ್ಟು ವಿಫುಲ ಅವಕಾಶಗಳಿದ್ದರೂ ಜವಳಿ ಪಾರ್ಕ್ ಸ್ಥಾಪನೆ ಆಗಿಲ್ಲ. ಆದಷ್ಟು ಬೇಗ ಈ ಪಾರ್ಕ್ ಸ್ಥಾಪಿಸಬೇಕು ಎಂಬ ಒತ್ತಾಯ ದಶಕಗಳಿಂದಲೂ ಕೇಳಿ ಬರುತ್ತಿದೆ. ಬಟ್ಟೆ ವ್ಯಾಪಾರ ಇಲ್ಲಿ ಜೋರಾಗಿ ನಡೆಯುತ್ತಿದೆ. ಕೊರೊನಾ ಹೊಡೆತಕ್ಕೆ ಉದ್ಯಮ ನಲುಗಿ ಹೋಗಿದೆ. ವ್ಯಾಪಾರವೂ ಕುಸಿತ ಕಂಡಿದೆ. ವ್ಯಾಪಾರಸ್ಥರು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈ ಬಜೆಟ್‌ನಲ್ಲಿ ಏನಾದರೂ ಲಾಭ ಸಿಗಬಹುದಾ? ಎಂಬ ಆಶಾಭಾವನೆಯಲ್ಲಿದ್ದಾರೆ ವರ್ತಕರು.
ಕೈಗಾರಿಕೆಗಳು; ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚು. ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ಜನರು ಹೋಗುತ್ತಿದ್ದಾರೆ. ಗುಳೆ ಹೋಗುವುದನ್ನು ತಪ್ಪಿಸಲು ದೊಡ್ಡ ದೊಡ್ಡ ಕೈಗಾರಿಕೆಗಳ ಅವಶ್ಯಕತೆ ಇದೆ. ಈ ಮೂಲಕ ನಿರುದ್ಯೋಗಿ ಯುವಕರಿಗೆ ಕೆಲಸ ಸಿಕ್ಕರೆ ಇದಕ್ಕೆ ತಡೆ ಹಾಕಬಹುದು. ಕೈಗಾರಿಕೆಗಳು ಇಲ್ಲಿಗೆ ಬರುತ್ತವೆ ಎಂಬ ಆಶ್ವಾಸನೆ ನೀಡಿದ್ದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇದು ಉದ್ಯೋಗ ನಿರೀಕ್ಷೆಯಲ್ಲಿರುವರಿಗೆ ನಿರಾಸೆ ತಂದಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಘೋಷಣೆ ಮಾಡಬಹುದು ಎಂಬ ಆಸೆಗಣ್ಣಿನಿಂದ ಜನರು ನೋಡುತ್ತಿದ್ದಾರೆ.
ರೈಲ್ವೆ ಯೋಜನೆಗಳು; ಇನ್ನು ರೈಲ್ವೆ ಇಲಾಖೆಗೆ ಸಂಬಂಧಿಸಿದ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರೈಲ್ವೆ ಅಂಡರ್ ಪಾಸ್ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ. ದಾವಣಗೆರೆ- ಶಿವಮೊಗ್ಗ ನಡುವಿನ ರೈಲ್ವೆ ಸಂಪರ್ಕ ಆಗಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ.
ದಾವಣಗೆರೆ ನಗರದ ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ 199ರ ಬಳಿ ರೈಲ್ವೆ ಗೇಟ್ ಹತ್ತಿರ ಕೆಳಸೇತುವೆ ನಿರ್ಮಾಣ ಬೇಗ ಆಗಬೇಕೆಂಬ ಒತ್ತಾಯವೂ ಜೋರಾಗುತ್ತಿದೆ. ಅಶೋಕ ಚಿತ್ರಮಂದಿರದ ಬಳಿ ಹಾಲಿ ಇರುವ ಗೇಟ್ ಅನ್ನು ರೈಲ್ವೆ ಇಲಾಖೆ ತೆರವುಗೊಳಿಸಿ ಸದರಿ ಜಾಗದಲ್ಲಿ ಲಿಮಿಟೆಡ್ ಹೈಟ್ ಸಬ್‍ವೇ ಹಾಗೂ ಅಲ್ಲಿಂದ 800 ಮೀಟರ್ ದೂರದಲ್ಲಿ ಪುಷ್ಪಾಂಜಲಿ ಚಿತ್ರಮಂದಿರದ ಎದುರುಗಡೆ ಎರಡು ವೆಂಟ್‍ಗಳುಳ್ಳ ಕೆಳಸೇತುವೆಯನ್ನು ನಿರ್ಮಾಣ ಮಾಡಲು ರೈಲ್ವೆ ಇಲಾಖೆ 35 ಕೋಟಿ ರೂ. ಅನುದಾನವನ್ನು ಒದಗಿಸಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಿಕೊಡುವ ಭರವಸೆ ಸಿಕ್ಕಿದೆ.
ಕೆಳಸೇತುವೆ ನಿರ್ಮಾಣವಾದರೆ ಸೇತುವೆಗೆ ಸಂಪರ್ಕ ಕಲ್ಪಿಸಲು ರೈಲ್ವೆ ಹಳಿಯ ಇನ್ನೊಂದು ಮಗ್ಗಲಲ್ಲಿ ಸಮಾನಾಂತರ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ. ಸಮಾನಾಂತರ ರಸ್ತೆ ನಿರ್ಮಾಣ ಮಾಡಲು ಅಲ್ಲಿ ಖಾಸಗಿ ಜಮೀನನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ. ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್ ಸಮಸ್ಯೆ ಕಳೆದ ನಾಲ್ಕೈದು ದಶಕಗಳ ಸಮಸ್ಯೆ ಇದನ್ನು ಪರಿಹರಿಸಲು ಏನೇನು ಅವಕಾಶವಿದೆಯೋ ಎಲ್ಲವನ್ನು ಬಳಸಿಕೊಂಡು ಈ ಸಮಸ್ಯೆಗೆ ಮುಕ್ತಿ ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.
ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಮಾಲಿಕರಿಗೆ ಪರಿಹಾರ ನೀಡಲು ಈ ಯೋಜನೆಯಡಿ ಯಾವುದೇ ಅವಕಾಶ ಇಲ್ಲ ಎನ್ನುವ ವಿಷಯವನ್ನೂ ಸಹ ಮಾಲೀಕರಿಗೆ ತಿಳಿಸಲಾಗಿದೆ. ದಾವಣಗೆರೆ ನಗರದ ಕಳೆದ ನಾಲ್ಕೈದು ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲು ಇಲ್ಲಿರುವ ರೈಲ್ವೆ ಹಳಿಗೆ ಸಮಾನಾಂತರವಾಗಿ ಅಶೋಕ ಚಿತ್ರಮಂದಿರದ ರಸ್ತೆಯಿಂದ ಈರುಳ್ಳಿ ಮಾರ್ಕೆಟ್ ಸೇತುವೆಯವರೆಗೆ 60 ಅಡಿ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು ರಸ್ತೆಯನ್ನು ಮಹಾನಗರ ಪಾಲಿಕೆ ಅಥವಾ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಾಡಿಕೊಡಲಾಗುವುದು. ಆದರೆ ಬಜೆಟ್‌ನಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.












Click it and Unblock the Notifications