ಬೆಣ್ಣೆನಗರಿಯಲ್ಲಿ ಘಂಟೆ ಪಾಲಿಟಿಕ್ಸ್ ಶುರು: ಕೈ- ಕಮಲ ನಾಯಕರ ನಡುವಿನ ಸವಾಲು-ಪ್ರತಿಸವಾಲುಗಳೇನು?
ದಾವಣಗೆರೆ, ಜುಲೈ 18: ವೈ.ಎಸ್ ಟ್ಯಾಕ್ಸ್ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ನೀಡಿದ್ದ ಪಂಥಾಹ್ವಾನವನ್ನು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜಿಲ್ಲಾ ಮಟ್ಟದ ನಾಯಕರ ನಡುವೆ ಘಂಟೆ ರಾಜಕೀಯ ಶುರುವಾಗಿದೆ.
ದಿನೇಶ್ ಕೆ. ಶೆಟ್ಟಿ ಮಾಡಿದ್ದ ಆರೋಪ ತಳ್ಳಿಹಾಕಿರುವ ಯಶವಂತರಾವ್ ಜಾಧವ್, ನಾವು ಯಾವಾಗ ಬೇಕಾದರೂ ದುರ್ಗಾಂಬಿಕಾ ದೇಗುಲದಲ್ಲಿ ಘಂಟೆ ಬಾರಿಸಲು ಸಿದ್ದರಿದ್ದೇವೆ. ನೀವು ಸಚಿವರು, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಂದು ತಪ್ಪು ಮಾಡಿಲ್ಲ ಎಂದು ಘಂಟೆ ಬಾರಿಸಲು ಹೇಳಿ ಎಂದು ಪ್ರತಿಸವಾಲು ಹಾಕಿದ್ದಾರೆ.

ನಾವು ತಪ್ಪು ಮಾಡಿಲ್ಲವೆಂದು ನಾನು ಮತ್ತು ಸಂಸದ ಜಿ. ಎಂ. ಸಿದ್ದೇಶ್ವರ ಅವರು ಘಂಟೆ ಬಾರಿಸಲು ಸಿದ್ಧರಿದ್ದೇವೆ. ಯಾವ ಸಮಯದಲ್ಲಿ ಕರೆದರೂ ನಾವು ಹೋಗುತ್ತೇವೆ. ಅಕ್ರಮ, ಭ್ರಷ್ಟಾಚಾರ ಮಾಡಿಲ್ಲವೆಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ದೇಗುಲಕ್ಕೆ ಕರೆದುಕೊಂಡು ಬಂದು ದಿನೇಶ್ ಶೆಟ್ಟಿ ಘಂಟೆ ಹೊಡೆಸಲಿ ಎಂದು ಸವಾಲಿಗೆ ಪ್ರತಿಸವಾಲು ಹಾಕಿದ್ದಾರೆ.
ಜೊತೆಗೆ ದಿನೇಶ್ ಶೆಟ್ಟಿ ಅವರು ಅಪ್ಪ - ಮಗನನ್ನು ಕರೆತಂದು ನಾವು ತಪ್ಪೇ ಮಾಡಿಲ್ಲ ಎಂದು ಹೇಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಘಂಟೆ ಬಾರಿಸಲು ಹೇಳಲಿ. ಆ ತಾಯಿ ನಾವು ತಪ್ಪು ಮಾಡಿದ್ದರೆ ನಮಗೆ ಶಿಕ್ಷೆ ಕೊಡಲಿ. ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಕೊಡಲಿ. ಈಗಿನಿಂದಲೇ ಎಲ್ಲಿಗೆ ಕರೆದರೂ, ಯಾವ ಸಮಯಕ್ಕೆ ಕರೆದರೂ ಆ ಪಂಥಾಹ್ವಾನ ಸ್ವೀಕರಿಸಿ ನಾವು ಅಖಾಡಕ್ಕೆ ಧುಮುಕಿದ್ದೇವೆ. ಅವರೂ ಬರಲಿ ಎಂದು ಹೇಳಿದರು.
ಭ್ರಷ್ಟಾಚಾರ ಮಾಡಿಲ್ಲ ಎಂದು ನಾನು ಮತ್ತು ಸಂಸದ ಜಿ. ಎಂ. ಸಿದ್ದೇಶ್ವರ ಅವರು ದುರ್ಗಾಂಬಿಕಾ ದೇಗುಲದಲ್ಲಿ ಘಂಟೆ ಬಾರಿಸಲು ಈಗಲೂ ಸಿದ್ದ. ಸಂಸದರು ಹಾಗೂ ನನ್ನ ಮೇಲೆ ಭ್ರಷ್ಟಾಚಾರದ ಗುರುತರವಾದ ಆರೋಪ ಹೊರಿಸಿರುವ ದಿನೇಶ್ ಶೆಟ್ಟಿ ಅವರ ಸವಾಲನ್ನು ನಾವಿಬ್ಬರೂ ಸ್ವೀಕರಿಸಿದ್ದೇವೆ ಎಂದರು.

ಭರಮಸಾಗರದಲ್ಲಿ ಅದಿರು ಹೊತ್ತ ಲಾರಿಗಳು ನಿಂತಿರುವುದು ಯಾಕೆ? ಎನ್ನುವುದಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಇನ್ನೂ ಉತ್ತರ ಕೊಟ್ಟಿಲ್ಲ. ಎಂ. ಎಸ್. ಟ್ಯಾಕ್ಸ್ ವಸೂಲಿ ಆರೋಪ ನಾವು ಮಾಡಿದ್ದೆವು. ಇದಕ್ಕೆ ಪ್ರತಿಯಾಗಿ ದಿನೇಶ್ ಶೆಟ್ಟಿ ಆರೋಪಿಸಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ. ನಾವೇನೂ ಹೆದರುವ ಪ್ರಶ್ನೆಯೇ ಇಲ್ಲ. ಪೆನ್ ಡ್ರೈವ್ ನಲ್ಲಿ ಇಟ್ಟುಕೊಂಡು ಏನು ಮಾಡುತ್ತಾರೆ ಹೊರಗೆ ಬಿಡಲಿ. ಯಾರನ್ನೋ ಮಾತನಾಡಿಸಿ ನಾವು ಹಣ ಪಡೆದಿದ್ದೇವೆ ಎಂಬ ಆರೋಪ ಮಾಡಿದರೆ ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯನಾಗಿದ್ದ ವೇಳೆ ದಿನೇಶ್ ಶೆಟ್ಟಿ ಪಿ.ಜೆ. ಬಡಾವಣೆಯ ಫುಟ್ ಪಾತ್‌ಗಳಲ್ಲಿ ಅಂಗಡಿ ಇಟ್ಟುಕೊಂಡವರ ಬಳಿ ಚಂದಾ ವಸೂಲಿ ಮಾಡಿಲ್ಲವೇ? ಈಗಲೂ ಅವರಿಂದ ಕಾಟಕ್ಕೊಳಗಾಗಿದ್ದ ವ್ಯಾಪಾರಿಗಳು ಸಾಕ್ಷಿ ಹೇಳಲು ಸಿದ್ಧರಿದ್ದಾರೆ. ಶೆಟ್ಟಿ ಚಂದಾ ವಸೂಲಿ ಮಾಡಿಲ್ಲ ಎಂದು ದುರ್ಗಾಂಬಿಕಾ ದೇಗುಲದಲ್ಲಿ ಘಂಟೆ ಹೊಡೆಯಲು ಸಿದ್ಧರಿದ್ದಾರಾ. ಹಾಗಾದರೆ ಬರಲಿ, ನಾವು ವ್ಯಾಪಾರಿಗಳನ್ನು ಕರೆದುಕೊಂಡು ಬರುತ್ತೇವೆ ಎಂದು ಪಂಥಾಹ್ವಾನ ಕೊಟ್ಟರು.
ನಾವು ಲಂಚ ತೆಗೆದುಕೊಂಡಿಲ್ಲ ಎಂದು ಅದೇ ದೇವಸ್ಥಾನದಲ್ಲಿ ನಾವೇ ಮೊದಲು ಘಂಟೆ ಹೊಡೆಯಲಿದ್ದೇವೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದಿನೇಶ್ ಶೆಟ್ಟಿ ದೇವಸ್ಥಾನಕ್ಕೆ ಕರೆಸಲಿ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ಶಾಮನೂರು ಕುಟುಂಬದ ಮೇಲೆ ಹಲವು ಆರೋಪ ಮಾಡಿ, ಸಾಕ್ಷಿ ಸಮೇತ ಪಾಲಿಕೆ ಆವರಣದ ರಂಗಮಂದಿರದಲ್ಲಿ ಅರ್ಧ ದಿನ ಕಾದರೂ ಯಾರು ಅತ್ತ ಸುಳಿಯಲಿಲ್ಲ.
ಇದೇ ಶಾಮನೂರು ಕುಟುಂಬ ಭ್ರಷ್ಟಾಚಾರ ಮಾಡದಿದ್ದರೆ ಅಂದು ಬಂದು ಆರೋಪವನ್ನು ನಿರಾಕರಿಸಬಹುದಿತ್ತು. ಯಾಕೆ ಬರಲಿಲ್ಲ. ಅವರೇ ಪಕ್ಷದ ಎಂ. ಬಿ. ಪಾಟೀಲ್ ಸಚಿವರಾಗಿದ್ದಾಗ 2019ರಲ್ಲಿ ಶಾಮನೂರು ಶಿವಶಂಕರಪ್ಪನವರು ಬಾಪೂಜಿ ವಿದ್ಯಾಸಂಸ್ಥೆಗೆ ಬರುವ ಮೊದಲು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಆಮೇಲೆ ಆಗರ್ಭ ಶ್ರೀಮಂತರಾದರು ಎಂಬ ಆರೋಪ ಮಾಡಿದ್ದರು. ಇದು ನಾವು ಮಾಡಿದ್ದಲ್ಲ. ಅವರದ್ದೇ ಪಕ್ಷದ ನಾಯಕರು ಮಾಡಿದ್ದ ಆರೋಪ. ಇದು ಹಾಗಿದ್ದರೆ ಸುಳ್ಳಾ ಎಂದು ಪ್ರಶ್ನಿಸಿದರು.
ದೂಡಾದಿಂದ ಹರಾಜು ಮಾಡಬೇಕಾದ 40 ಕ್ಕೂ ಹೆಚ್ಚು ಮೂಲೆ ನಿವೇಶನಗಳನ್ನು ತುಂಡು ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ ತಮಗೆ ಬೇಕಾದವರಿಗೆ ಬೇಕಾಬಿಟ್ಟಿಯಾಗಿ ತಂಡು ನಿವೇಶನವನ್ನಾಗಿಸಿ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ. ಟಿವಿ ಸ್ಟೇಷನ್ ಕೆರೆ ಪಕ್ಕದಲ್ಲಿ ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯದ ಸಂಪು ನಿರ್ಮಾಣ ಮಾಡಿ, ಅಲ್ಲಿಂದ ಎಸ್.ಎಸ್. ಆಸ್ಪತ್ರೆಗೆ ಟಿ.ವಿ. ಸ್ಟೇಷನ್ ಕೆರೆಯ ನೀರನ್ನು ಒಯ್ದಿರುವುದು ಇದೇ ಶಾಮನೂರು ಕುಟುಂಬ. ದಾವಣಗೆರೆಗೆ ಬರಬೇಕಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಬರದಂತೆ ನಡೆಯುತ್ತಿರುವುದು ಇದೇ ಶಾಮನೂರು ಫ್ಯಾಮಿಲಿ ಎಂದು ಕಿಡಿಕಾರಿದರು.
ದಾಖಲೆಗಳಿಲ್ಲದೇ ನಾನು ಎಂದೂ ಮಾತನಾಡುವುದಿಲ್ಲ. ಹಗಲು ದರೋಡೆ ಮಾಡಿದವರು ಅವರು. ಸಂಸದರು ಹಾಗೂ ನನ್ನ ಮೇಲೆ ಆರೋಪ ಮಾಡಿರುವುದು ಹಾಸ್ಯಾಸ್ಪದ. ಮಧ್ಯರಾತ್ರಿ ಕರೆದರೂ ನಾವು ಬಂದು ಘಂಟೆ ಹೊಡೆಯುತ್ತೇವೆ. ನೀವು
ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದಾದರೇ ನಿಮ್ಮ ಶಾಸಕರು ಹಾಗೂ ಮಂತ್ರಿಗಳನ್ನು ಕರೆಯಿಸಿ ಘಂಟೆ ಹೊಡೆಸಿ. ಇಲ್ಲದಿದ್ದರೆ ರಣಹೇಡಿಗಳು ಎಂದು ಜನರು ನಿಮ್ಮನ್ನು ಕರೆಯುತ್ತಾರೆಂದು ದಿನೇಶ್ ಶೆಟ್ಟಿ ಅವರಿಗೆ ಹೇಳಿದರು.
ಬಾಪೂಜಿ ಸಂಸ್ಥೆಯನ್ನು ಕಟ್ಟಿದ್ದು ಯಾರು? ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಪಾಡು ಏನಾಗಿದೆ ಎಂಬುದನ್ನು ಉತ್ತರಿಸಲಿ. ಶಾಮನೂರು ಕುಟುಂಬದ ಒಡೆತನದ ರೈಸ್ ಮಿಲ್ ನಲ್ಲಿ ಕರೆಂಟ್ ಕದ್ದ ಕಾರಣಕ್ಕೆ ಕೇಸ್ ಹಾಕಿ ದಂಡ ಹಾಕಿದ್ದು ಯಾರಿಗೆ? ಎಸ್.ಎಸ್. ಮಾಲ್ ಕಟ್ಟಲು ರಸ್ತೆ, ಪಾರ್ಕ್ ಹಾಗೂ ಮುತ್ಸದ್ಧಿ ರಾಜಕಾರಣಿ ಗಾಂಜೀವೀರಪ್ಪನವರ ಸಮಾಧಿ ಸಮೇತ ಜಾಗವನ್ನು ಸಹ ಕಬಳಿಸಿಲ್ಲವೇ? ಮಾಲ್ ಒತ್ತುವರಿಗೆ ಸಂಬಂಧಪಟ್ಟಂತೆ ಹೋರಾಟ ಮಾಡುತ್ತಿದ್ದ ಮಹಾದೇವ್ ನಿಗೂಢ ಸಾವಿಗೆ ಯಾರು ಕಾರಣ? ಈ ವಿಚಾರದಲ್ಲಿ ಏನೇನಾಗಿದೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್,ರಾಜನಹಳ್ಳಿ ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್, ನಸೀರ್ ಅಹಮದ್, ಶಿವನಗೌಡ ಟಿ. ಪಾಟೀಲ್, ರಮೇಶ್ ನಾಯ್ಕ್, ಕಿಶೋರ್ ಕುಮಾರ್ ಮಡಿವಾಳ್ ಉಪಸ್ಥಿತರಿದ್ದರು.
ದಿನೇಶ್ ಕೆ. ಶೆಟ್ಟಿ ಹಾಕಿದ್ದ ಸವಾಲೇನು..?
ಸಂಸದ ಜಿ. ಎಂ. ಸಿದ್ದೇಶ್ವರ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಭ್ರಷ್ಟಾಚಾರ ಮಾಡಿಲ್ಲ ಎಂದು ಶಕ್ತಿದೇವತೆ ದುರ್ಗಾಂಬಿಕೆ ದೇವಸ್ಥಾನದಲ್ಲಿ ಆಣೆ ಮಾಡಲಿ. ವರ್ಗಾವಣೆಯಾಗಿರುವ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಮಾತನಾಡಿರುವ ಆಡಿಯೋ ನನ್ನಲ್ಲಿದೆ. ಸಿದ್ದೇಶ್ವರ ಅವರು ಬಂದರೆ ನಾನು ನನ್ನ ಬಳಿ ಇರುವ ದಾಖಲೆ ಅಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಪಂಥಾಹ್ವಾನ ನೀಡಿದ್ದರು.
ಯಶವಂತರಾವ್ ಜಾಧವ್‌ಗೆ ಶೇಕಡಾ 10ರಷ್ಟು ಕಮಿಷನ್ ನೀಡಬೇಕು. ಉಳಿದಂತೆ ರಾಜ್ಯ ಮಟ್ಟದಲ್ಲಿ ಶೇಕಡಾ 40 ಹಾಗೂ ದಾವಣಗೆರೆಯಲ್ಲಿ ಎಷ್ಟು ಪರ್ಸಂಟೇಸ್ ಎಂಬುದು ಗೊತ್ತಿಲ್ಲ. ದುರ್ಗಾಂಬಿಕಾ ದೇಗುಲಕ್ಕೆ ಸಿದ್ದೇಶ್ವರ ಅವರೇ ಬರಬೇಕು. ಬೇರೆ ಯಾರನ್ನೂ ಕಳುಹಿಸುವುದು ಬೇಡ. ಪೆನ್ ಡ್ರೈವ್ ನಲ್ಲಿ ಅಧಿಕಾರಿಗಳು ಮಾತನಾಡಿರುವ ಆಡಿಯೋ ಇದೆ ಎಂದು ತಿಳಿಸಿದ್ದರು.
ಆರು ತಿಂಗಳಲ್ಲಿ ನಾನು ಮಾಡಿರುವ ಆರೋಪ ಸುಳ್ಳಾದರೆ ದುರ್ಗಾಂಬಿಕಾ ತಾಯಿಯೇ ಶಿಕ್ಷೆ ಕೊಡಲಿ. ಆರೋಪ ಸರಿಯಿದ್ದರೆ ಅವರಿಗೆ ಶಿಕ್ಷೆಯಾಗಲಿ. ಎಲ್ಲದಕ್ಕೂ ತಯಾರಿದ್ದೇವೆ. ಭ್ರಷ್ಟಾಚಾರವೇ ನಡೆದಿಲ್ಲ ಎಂಬ ಮಾತು ಹೇಳಿಕೊಂಡು ಓಡಾಡುವುದು ಬೇಡ ಎಂದು ಹೇಳಿದ್ದರು.
ದಾವಣಗೆರೆ ನಗರಕ್ಕೆ ಕಪ್ಪುಚುಕ್ಕೆಯಂತೆ ಡಿಸಿಎಂ ಬಳಿಯ ಅಂಡರ್ ಪಾಸ್ ನಿರ್ಮಾತೃ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಭ್ರಷ್ಟಾಚಾರಕ್ಕೆ ಸಾಕ್ಷಿ. ಕಳೆದ ಬಿಜೆಪಿಯ ಆಡಳಿತದಲ್ಲಿ ಸಾಲು ಸಾಲು ಭ್ರಷ್ಟಾಚಾರದಡಿ ಕಾಮಗಾರಿಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದ್ದರು.
ಕಳೆದ ಅವಧಿಯ ರಾಜ್ಯ ಬಿಜೆಪಿ 4 ವರ್ಷಗಳ ಆಡಳಿತದಲ್ಲಿ ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲು ಜಿ.ಎಂ.ಸಿದ್ದೇಶ್ವರ ಬಿಡಲಿಲ್ಲ. ಈ ಕಾಲದಲ್ಲಿ ಎಸ್ ವೈ ಟ್ಯಾಕ್ಸ್ ಇತ್ತು. ವರ್ಗಾವಣೆ ಆಗಿರುವವರು, ನಿವೃತ್ತ ಅಧಿಕಾರಿಗಳೇ ಹೇಳಿದ್ದಾರೆ. ಯಶವಂತರಾವ್ ಅವರಿಗೆ ಶೇಕಡಾ 10ರಷ್ಟು ಕಮಿಷನ್ ನೀಡಬೇಕು. ಉಳಿದಂತೆ ಸಿದ್ದೇಶ್ವರ್ ಅವರಿಗೆ ನೀಡಬೇಕಿತ್ತು. ಆರೋಪ ಸುಳ್ಳು, ಭ್ರಷ್ಟಾಚಾರ ನಡೆಸಿಲ್ಲ ಎಂದಾದರೆ ದುಗ್ಗಮ್ಮನ ದೇಗುಲಕ್ಕೆ ಬರಲಿ ಎಂದು ಸವಾಲು ಹಾಕಿದ್ದರು.












Click it and Unblock the Notifications