ಅಂತಿಮವಾಗದ ಬಿಜೆಪಿ ಅಭ್ಯರ್ಥಿ: ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಪರ ಭರ್ಜರಿ ಪ್ರಚಾರ
ದಾವಣಗೆರೆ, ಏಪ್ರಿಲ್ 8: ದಾವಣಗೆರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿ ಪ್ರಕಟಿಸಿದೆ. ಎರಡನೇ ಪಟ್ಟಿಯಲ್ಲಿ ಚನ್ನಗಿರಿಯಿಂದ ಶಿವಗಂಗಾ ವಿ. ಬಸವರಾಜ್ ಅವರಿಗೆ ಕೈ ಟಿಕೆಟ್ ಕೊಟ್ಟಿದೆ. ವಡ್ನಾಳ್ ರಾಜಣ್ಣ ಹಾಗೂ ಅವರ ಕುಟುಂಬದವರಿಗೆ ಮಣೆ ಹಾಕಿಲ್ಲ.
ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಯಾರು ಎಂಬುದು ಇನ್ನೂ ಘೋಷಣೆ ಆಗಿಲ್ಲ. ಆದರೆ, ಜೈಲಿನಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಪರ ಅಭಿಮಾನಿಗಳು, ಬೆಂಬಲಿಗರು ಪ್ರಚಾರ ಶುರು ಮಾಡಿದ್ದಾರೆ.

ಎರಡನೇ ಪಟ್ಟಿಯಲ್ಲಿ ಅಳೆದು ತೂಗಿ ಶಿವಗಂಗಾ ವಿ. ಬಸವರಾಜ್ ಅವರನ್ನು ಚನ್ನಗಿರಿಯ ಹುರಿಯಾಳಾಗಿ ಕಾಂಗ್ರೆಸ್ ಘೋಷಿಸಿದ್ದು, ತನ್ನ ಎದುರಾಳಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಆದರೂ ಶಿವಗಂಗಾ ಬಸವರಾಜ್ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗುತ್ತಿದ್ದಾರೆ.
ಮಾಜಿ ಶಾಸಕ ವಡ್ನಾಳ್ ರಾಜಣ್ಣ, ವಡ್ನಾಳ್ ಅಶೋಕ್, ಜಗದೀಶ್ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಶಿವಗಂಗಾ ಬಿ. ಬಸವರಾಜ್ ಅವರಿಗೆ ಟಿಕೆಟ್ ನೀಡಿದೆ. ವಯಸ್ಸು ಹಾಗೂ ಆರೋಗ್ಯದ ಕಾರಣ ಸ್ಪರ್ಧೆ ಮಾಡಲು ವಡ್ನಾಳ್ ರಾಜಣ್ಣ ನಿರಾಸಕ್ತಿ ತೋರಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಗಂಗಾ ಬಸವರಾಜ್ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿದ್ದರು. ಬಿಜೆಪಿಯಲ್ಲಿ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಈ ನಡುವೆ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಗ ಬಿಜೆಪಿ ಹುರಿಯಾಳು ಯಾರಾಗ್ತಾರೆ ಎಂಬ ಕುತೂಹಲ ಕೆರಳಿಸಿದೆ.
ಜಗಳೂರು, ಹೊನ್ನಾಳಿ, ಹರಿಹರ ಟಿಕೆಟ್ ಯಾರಿಗೂ ಘೋಷಿಸಿಲ್ಲ. ಇಲ್ಲಿ ತೀವ್ರ ಪೈಪೋಟಿದ್ದು, ಅಂತಿಮ ಪಟ್ಟಿಯಲ್ಲಿ ಘೋಷಣೆಯಾಗಲಿದೆ. ಜಗಳೂರಿನಲ್ಲಿ ಹೆಚ್. ಪಿ. ರಾಜೇಶ್ ಹಾಗೂ ದೇವೇಂದ್ರಪ್ಪರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೆ, ಹೊನ್ನಾಳಿಯಲ್ಲಿ ಮಾಜಿ ಶಾಸಕ ಶಾಂತನಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ನಡುವೆ ಹಣಾಹಣಿ ಇದೆ. ಹರಿಹರದಲ್ಲಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್ ಸೇರಿದಂತೆ ಇತರರ ನಡುವೆ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ತೀವ್ರ ಚರ್ಚೆ ನಡೆದರೂ ಒಮ್ಮತಕ್ಕೆ ಬರಲಾಗಿಲ್ಲ.
ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಪರ ಪ್ರಚಾರ ಶುರು ಮಾಡಲಾಗಿದೆ. ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ್ ಅನುಪಸ್ಥಿತಿಯಿದ್ದರೂ ನಾವೇ ಪ್ರಚಾರ ಮಾಡುತ್ತೇವೆಂದು ಮುಖಂಡರು, ಅಭಿಮಾನಿಗಳು ಮುಂದಾಗಿದ್ದಾರೆ.ಬಿಜೆಪಿ ಟಿಕೆಟ್ ಸಿಕ್ಕರೂ ಸರಿ ಸಿಗದ್ದಿದ್ದರೂ ಸರಿ. ನಾವು ಮಾಡಾಳ್ ಮಲ್ಲಿಕಾರ್ಜುನ್ ಗೆಲ್ಲಿಸುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿರುವ ಮಾಡಾಳ್ ವಿರೂಪಾಕ್ಷಪ್ಪ ಬೆಂಬಲಿಗರು, ಅಭಿಮಾನಿಗಳು, ಚನ್ನಗಿರಿ ವಿಧಾನಸಭೆಯ ಮರಡಿ, ಉಪನಾಯಕನಹಳ್ಳಿ, ತಣ್ಣಿಗೇರಿ ಭಾಗದಲ್ಲಿ ಪ್ರಚಾರ ಶುರು ಮಾಡಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾಡಿರುವ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಜನರಿಗೆ ತಿಳಿಸಿ ಮಲ್ಲಿಕಾರ್ಜುನ್ ಗೆ ಮತ ಕೇಳುತ್ತೇವೆ. ಚನ್ನಗಿರಿ ಅಂದ್ರೆ ಮಾಡಾಳ್ ಕುಟುಂಬ. ಈ ಬಾರಿ ಮಾಡಾಳ್ ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಗೆಲ್ಲಿಸಿ ತೋರಿಸುತ್ತೆವೆ ಎಂದು ಮಾಡಾಳ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications