ಎಲ್ಲರೂ ಮಲಗಿದ ಮೇಲೆ ಸಮೀಕ್ಷೆ ಮಾಡಿದ್ದಕ್ಕೆ ಕಾಂಗ್ರೆಸ್‌ಗೆ120 ಸೀಟು: ರೇಣುಕಾಚಾರ್ಯ ಲೇವಡಿ
ದಾವಣಗೆರೆ,ಜು4: ಕಾಂಗ್ರೆಸ್‌ಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಸೀಟು ಬರುತ್ತದೆ ಎಂದು ಸಮೀಕ್ಷೆ ಮಾಡಿಸಿದ್ದಾರಂತೆ. ಯಾರು ಸಮೀಕ್ಷೆ ಮಾಡಿದರು. ಹಗಲಹೊತ್ತೋ, ಬೆಳಿಗ್ಗೆಯೋ, ಸಂಜೆ ಮಾಡಿದರೋ ಗೊತ್ತಿಲ್ಲ. ಜನರೆಲ್ಲರೂ ಮಲಗಿದ ಮೇಲೆ ಸರ್ವೇ ಮಾಡಿರಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಲಿದ್ದು, ಕಾಂಗ್ರೆಸ್ ಧೂಳೀಪಟವಾಗಲಿದೆ," ಎಂದು ಭವಿಷ್ಯ ನುಡಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನಲ್ಲಿಯೇ ಅಡ್ಡಗಾಲು ಹಾಕಲಾಗುತ್ತಿದೆ. ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರೇ ನಿಮ್ಮ ವಿರುದ್ಧ ಇದ್ದಾರೆ. ಯಾಕೆ ಡಿಫೆಂಡ್ ಮಾಡಿಕೊಳ್ಳುತ್ತೀರಾ. ಸಿದ್ದರಾಮಯ್ಯ ಅವರೇ ಅನೇಕ ಬಾರಿ ವೇದಿಕೆಯಲ್ಲಿ ಕಾಂಗ್ರೆಸ್ ಕಿತ್ತೊಗೆಯಿರಿ ಎಂದಿದ್ದಾರೆ. ಸಿದ್ದರಾಮಯ್ಯರ ಮನಸ್ಸಿನಲ್ಲಿ ಕಾಂಗ್ರೆಸ್ ಇಲ್ಲ. ದೇಹ ಮಾತ್ರ ಇದೆ. ಕಾಂಗ್ರೆಸ್ ನಲ್ಲಿ ನಿಮ್ಮ ನಾಯಕತ್ವ ಒಪ್ಪಲ್ಲ. ಹೊರಗೆ ಬಂದು ನಿಮ್ಮ ಮುಂದಿನ ದಾರಿ ನೋಡಿಕೊಳ್ಳಿ ಎಂದರು.

ಬಿಜೆಪಿ ಒಬ್ಬೊಬ್ಬ ಕಾರ್ಯಕರ್ತ ಸಿಂಹದ ಮರಿ
ಬಿಜೆಪಿ ಒಬ್ಬೊಬ್ಬ ಕಾರ್ಯಕರ್ತ ಸಿಂಹದ ಮರಿ. ಹಿಂದುತ್ವ, ಅಭಿವೃದ್ಧಿ, ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಒಬ್ಬ ಕಾರ್ಯಕರ್ತನೂ ಕಾಂಗ್ರೆಸ್‌ಗೆ ಹೋಗಲ್ಲ. ಕಾಂಗ್ರೆಸ್, ಜೆಡಿಎಸ್‌ನ ಶಾಸಕರು ಬಿಜೆಪಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಿದ್ದರಾಮಯ್ಯರನ್ನು ಸೆಳೆಯುವ ಪ್ರಯತ್ನ ಮಾಡಲ್ಲ. ಕೇಂದ್ರದ ವರಿಷ್ಠರ ನಿರ್ಧಾರಕ್ಕೆ ಬದ್ಧ. ಅವರು ಬಂದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ ನಾನು ಮುಂಚೂಣಿಯಲ್ಲಿರಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ನಡುವೆ ಸ್ಪರ್ಧೆ ಇದೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಹೆಚ್. ಡಿ.ದೇವೇಗೌಡರ ಪರವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯಾಗಿ ಮತ ಹಾಕುವಂತೆ ಮಲ್ಲಿಕಾರ್ಜುನ್ ಖರ್ಗೆ ಮನವಿ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಒಂದಾಗಿ ಅಲ್ಪಸಂಖ್ಯಾತ ನಾಯಕನನ್ನು ಸೋಲಿಸಿದರು ಎಂದು ಹೇಳಿದರು.

ಇನ್ನು ದೇಶದಲ್ಲಿಯೂ ಕಾಂಗ್ರೆಸ್ ಮುಳುಗುವ ಹಡಗು
ಮುಳುಗುವ ಹಡಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ನಾಯಕರು. ಸಿದ್ದರಾಮೋತ್ಸವದ ಬಗ್ಗೆ ಮಾತನಾಡಲ್ಲ. ಅದು ಅವರ ವೈಯಕ್ತಿಕ ವಿಚಾರ. 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಅಡ್ರೆಸ್ ಇಲ್ಲ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನಾಯಕತ್ವದಲ್ಲಿ ಶಾಸಕರು ಬಂಡಾಯ ಎದ್ದರು. ಕಾಂಗ್ರೆಸ್, ಶಿವಸೇನೆಯ ಉದ್ಧಟತನ ವಿರೋಧಿಸಿ ಶಾಸಕರು ಹೊರ ಬಂದಿದ್ದಾರೆ. ಇನ್ನು ದೇಶದಲ್ಲಿಯೂ ಕಾಂಗ್ರೆಸ್ ಮುಳುಗುವ ಹಡಗು ಎಂದರು.

ಹಿಂದೂ ವಿರೋಧಿ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷ ಕುಮ್ಮಕ್ಕು
ಹಿಂದೂ ದೇವಾನುದೇವತೆಗಳಿಗೆ ದುಷ್ಕರ್ಮಿಗಳು, ಭಯೋತ್ಪಾದಕರು, ದೇಶ ವಿರೋಧಿಗಳು ಅವಹೇಳನ ಮಾಡುತ್ತಿದ್ದಾರೆ. ಹಿಂದೂ ಯುವಕರು, ಮುಖಂಡರನ್ನು ಹತ್ಯೆ ಮಾಡುತ್ತಿದ್ದಾರೆ. ಕನ್ನಯ್ಯ ಲಾಲ್ ಹತ್ಯೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಹಿಂದೂ ದೇವರ ಅವಹೇಳನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ವಿರೋಧಿ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.












Click it and Unblock the Notifications