ರೈಸ್ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹ
ದಾವಣಗೆರೆ, ಡಿಸೆಂಬರ್ 27: ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲಾಗಿದೆ. ಕಲ್ಲೇಶ್ವರ ರೈಸ್ ಮಿಲ್‌ನ ಮಾಲೀಕರು ಯಾರು..? ವನ್ಯಜೀವಿಗಳನ್ನು ಸಾಕಲು ಅನುಮತಿ ಪಡೆಯಲಾಗುತ್ತೆ ಎಂಬ ಸತ್ಯವನ್ನು ಹೇಳಲಿ. ಸೂಕ್ತ ದಾಖಲಾತಿ ತೋರಿಸಲಿ. ಬಿಜೆಪಿ ತನ್ನ ಹೋರಾಟ ನಾಳೆಯಿಂದಲೇ ನಿಲ್ಲಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ರಮವಾಗಿ ವನ್ಯಜೀವಿ ಸಾಕಿರುವ ಕಲ್ಲೇಶ್ವರ ರೈಸ್ ಮಿಲ್ ಮಾಲೀಕ ಮೊದಲ ಆರೋಪಿಯಾಗಬೇಕು. ಹೊಟ್ಟೆಪಾಡಿಗೆ ಕೆಲಸ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯಲ್ಲ. ಮಲ್ಲಿಕಾರ್ಜುನ್ ಅವರ ಒಡೆತನದ ಜಾಗ ಎಂಬುದು ದಾಖಲೆಗಳಲ್ಲಿ ಇದೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಪ್ರಕರಣದ ಬಗ್ಗೆ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
ಮಾತು ಮುಂದುವರಿಸಿದ ಅವರು, ನೈಜ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದೆ ರಾಜಕೀಯ ಪ್ರಭಾವ, ಹಣದ ಆಸೆಗೆ ಒಳಗಾಗಿರುವ ಜಿಲ್ಲಾ ವಲಯ ಅರಣ್ಯಾಧಿಕಾರಿ ಹಾಗೂ ಸಿಸಿಬಿ ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಈ ಸಂಬಂಧ ಈಗಾಗಲೇ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ. ಈ ವೇಳೆ ಸಿಎಂ ಹಾಗೂ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಷ್ಟ್ರೀಯ ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಮನೇಕಾ ಗಾಂಧಿ ಅವರಿಗೂ ಪ್ರಕರಣ ಕುರಿತಂತೆ ಫ್ಯಾಕ್ಸ್ ಮೂಲಕ ಮನವಿ ಕಳುಹಿಸಿದ್ದೇವೆ ಎಂದು ಹೇಳಿದರು.

1998ರಿಂದಲೂ ಮಲ್ಲಿಕಾರ್ಜುನ್ ಅಕ್ರಮಗಳ ವಿರುದ್ಧ ಹೋರಾಟ
ದಾವಣಗೆರೆಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಮಲ್ಲಿಕಾರ್ಜುನ್ ಅವರು ಬಚಾವಾಗಿದ್ದಾರೆ. ವಿದ್ಯುತ್ ಕಳ್ಳತನ, ಎಲ್. ಬಸವರಾಜ್ ಕಿಡ್ನಾಪ್ ಕೇಸ್ ಹಾಗೂ ಈಗ ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಿಲ್ ನೌಕರರು ಆರೋಪಿಗಳಾಗಬೇಕಾಗಿದೆ. ನಾನು 1998ರಿಂದಲೂ ಮಲ್ಲಿಕಾರ್ಜುನ್ ಅಕ್ರಮಗಳ ವಿರುದ್ಧ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಎಂದಿಗೂ ಹಣ, ಅಧಿಕಾರದ ಆಸೆಗೆ ಬಲಿಯಾದವನಲ್ಲ. ಈ ಪ್ರಕರಣದಲ್ಲಿ ನಾನು ಅಸಹಾಯಕನಲ್ಲ, ಸಂಸದ ಜಿ. ಎಂ. ಸಿದ್ದೇಶ್ವರ್, ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಜೊತೆಗಿದ್ದಾರೆ. ನಿಜವಾದ ಆರೋಪಿಗೆ ಶಿಕ್ಷೆಯಾಗಬೇಕು ಎನ್ನುವುದಷ್ಟೇ ನಮ್ಮ ಒತ್ತಾಯ ಎಂದು ಹೇಳಿದರು.

ಅಮಾಯಕರನ್ನು ಪ್ರಕರಣದಿಂದ ಬಿಡಬೇಕು
ರೈಸ್ ಮಿಲ್‌ನ ಆವರಣದಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಈ ಕೂಡಲೇ ಬಂಧಿಸಬೇಕು. ಜೊತೆಗೆ ಅಮಾಯಕರನ್ನು ಕೈ ಬಿಡಬೇಕು. ವಿಧಾನಮಂಡಲದ ಉಭಯ ಸದನಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ನಮ್ಮ ನಾಯಕರು ಸಿದ್ಧರಿದ್ದಾರೆ. ದಾವಣಗೆರೆಯ ವಲಯ ಅರಣ್ಯ ಅಧಿಕಾರಿ ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ ಯಶವಂತರಾವ್ ಜಾಧವ್ ಎಂದು ತಿಳಿಸಿದರು.

ಕಾಂಗ್ರೆಸ್‌ನವರ ಭ್ರಷ್ಟಾಚಾರಕ್ಕೆ ದಾಖಲೆ ತರುತ್ತೇನೆ
ಸಂಸದ ಜಿ. ಎಂ. ಸಿದ್ದೇಶ್ವರ್ ಅವರಾಗಲೀ, ನಾನಾಗಲೀ ಭ್ರಷ್ಟಾಚಾರ ಮಾಡಿರುವ ಕುರಿತಂತೆ ದಾಖಲೆಗಳನ್ನು ತನ್ನಿ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬಿಡಬೇಕು. ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ಕಾಂಗ್ರೆಸ್ಸಿಗರು ದೂಡಾ ಹಾಗೂ ಪಾಲಿಕೆಯಲ್ಲಿ ಏನೆಲ್ಲಾ ಅವ್ಯವಹಾರ ಮಾಡಿದ್ದಾರೆ ಎಂಬ ದಾಖಲೆ ತರುತ್ತೇನೆ. ನಾನು ಭ್ರಷ್ಟಾಚಾರ ಮಾಡಿದ್ದು ಸಾಬೀತಾದರೆ ಅದರಿಂದ ಆಗುವ ನಷ್ಟವನ್ನು ತುಂಬಿಕೊಡಲು ನಾನು ಸಿದ್ದ. ಹಾಗೆಯೇ ನಿಮ್ಮ ವಿರುದ್ಧ ಭ್ರಷ್ಟಾಚಾರ ಸಾಬೀತಾದರೆ ನೀವು ನಷ್ಟ ತುಂಬಿಕೊಡುತ್ತೀರಾ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರು ಉಗ್ರ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಖಡ್ಗ, ಗುತ್ತಿಗೆ, ಗುರಾಣಿ ಹಿಡಿದು ಹೋರಾಟ ಮಾಡಲಿ, ಬೇಡವೆಂದವರು ಯಾರು..? ಯಾವುದಕ್ಕೂ ಹೆದರುವುದಿಲ್ಲ. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಜಾಧವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಮೇಯರ್ ಜಯಮ್ಮ, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಎಲ್.ಡಿ.ಗೋಣೆಪ್ಪ, ಸೋಗಿ ಶಾಂತಕುಮಾರ್, ಎಸ್.ಟಿ.ವೀರೇಶ್, ರಾಕೇಶ್ ಜಾಧವ್, ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications