ಜಿ.ಎಂ ಸಿದ್ದೇಶ್ವರ್ ವಿರುದ್ಧ ಕೆಟ್ಟದಾಗಿ ಮಾತಾಡಿದರೆ ಅಪ್ಪ-ಮಗನ ಹಗರಣ ಬಯಲಿಗೆ
ದಾವಣಗೆರೆ, ಜುಲೈ 3: "ಸಂಸದ ಜಿ. ಎಂ. ಸಿದ್ದೇಶ್ವರ್ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಮುಂದುವರಿದಿದರೆ ಅಪ್ಪ- ಮಗನ ಹಗರಣಗಳನ್ನು ಹೊರ ತೆಗೆಯಬೇಕಾಗುತ್ತದೆ,'' ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಅವರು ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಏಕವಚನದಲ್ಲಿಯೇ ಸಿದ್ದೇಶ್ವರ್ ಕೆಲಸಕ್ಕೆ ಬಾರದ ನನ್ಮಗ ಎಂಬ ಹೇಳಿಕೆ ನೀಡಿರುವ ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿಗೆ ತಕ್ಕಂತೆ ಮಾತನಾಡಲಿ. ಅಪ್ಪ, ಮಗ ಸಂಸದರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು ಮುಂದುವರಿಸಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಟೀಕೆ ಮಾಡಲಿ. ಅದನ್ನು ಬಿಟ್ಟು ವೈಯಕ್ತಿಕವಾಗಿ ತೇಜೋವಧೆ ಮಾಡಿದರೆ ಸರಿಯಿರಲ್ಲ,'' ಎಂದು ಹೇಳಿದರು.
"ಸಿದ್ದೇಶ್ವರ್ ಪ್ಯಾಂಟ್ ಹಾಕೋದು ಕಲಿಸಿದ್ದು ನಾನೇ ಎಂಬ ಮಲ್ಲಿಕಾರ್ಜುನ್ ಹೇಳಿಕೆ ಖಂಡನೀಯ, ನಿಮ್ಮ ಎಲ್ಲಾ ತಪ್ಪು, ಹುಳುಕುಗಳನ್ನು ಬಯಲಿಗೆ ಎಳೆಯುತ್ತೇವೆ. ಹಗುರವಾಗಿ ಮಾತನಾಡುವುದನ್ನು ಬಿಡಿ. ನೀಚ ರಾಜಕಾರಣ ಮಾಡುವುದನ್ನು ಬಿಡಬೇಕು. ಹೆಚ್ಚು ಪ್ರಬಲವಾಗಿ ಸಿದ್ದೇಶ್ವರ್ ಬೆಳೆದಿದ್ದಾರೆ. ಭೀಮಸಮುದ್ರದ ಭೀಮ ಅವರು. ಶತ್ರುವಿಗೆ ಬೆನ್ನು ತೋರಿಸಿ ಹೋಗಲ್ಲ. ಉದ್ಧಟತನದಿಂದ ಮಾತನಾಡಿದರೆ ನಿಮ್ಮ ಹಗರಣಗಳನ್ನು ಇಂಚಿಂಚಾಗಿ ಬಯಲಿಗೆ ತರುತ್ತೇವೆ. ಆಗ ಜನರೇ ನಿಮಗೆ ಉತ್ತರ ನೀಡುತ್ತಾರೆ'' ಎಂದು ಕಿಡಿಕಾರಿದರು.

"ದಾವಣಗೆರೆ ನಗರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಬರುವುದು ಶಾಮನೂರು ಶಿವಶಂಕರಪ್ಪರಿಗೆ ಇಷ್ಟವಿಲ್ಲ. ಜೆಜೆಎಂ ಮೆಡಿಕಲ್ ಕಾಲೇಜಿಗೆ ಅಟ್ಯಾಚ್ ಆಗಿದೆ. ವರ್ಷಕ್ಕೆ 250 ಕೋಟಿ ರೂಪಾಯಿ ನಷ್ಟ ಆಗುತ್ತೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ತರಲು ಪ್ರಯತ್ನ ಮಾಡುತ್ತಿರುವ ಸಿದ್ದೇಶ್ವರ್ ವಿರುದ್ಧ ಶಾಮನೂರು ಕುಟುಂಬದವರು ಹರಿಹಾಯ್ತಾ ಇದ್ದಾರೆ. ಯಡಿಯೂರಪ್ಪನವರು ಮುಂದುವರಿಯಲಿ ಎಂಬ ಶಾಮನೂರು ಹೇಳಿಕೆಯ ಹಿಂದೆ ಬೇರಯದ್ದೇ ತಂತ್ರ ಅಡಗಿದೆ,'' ಎಂದು ಆರೋಪಿಸಿದರು.
Recommended Video
"ಸಂಸದ ಜಿ.ಎಂ. ಸಿದ್ದೇಶ್ವರ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ರಾಜಕಾರಣಿಗಳಾಗಲು ಅನ್ ಲಾಯಕ್. ಎಸ್.ಎಸ್. ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯಂತೆ ಬೆಡ್ ನೀಡಬೇಕೆಂದು ಹೇಳಿದ್ದರೂ ಪಾಲಿಸಿಲ್ಲ."
"ನಾವು ಈ ಬಗ್ಗೆ ಮಾತನಾಡಿದ್ದಕ್ಕೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಟೀಕೆ- ಟಿಪ್ಪಣಿ ಮಾಡಲಿ, ಅದನ್ನು ಬಿಟ್ಟು ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಮೊದಲು ಸರ್ಕಾರ ಹೇಳಿದ ರೀತಿಯಲ್ಲಿ ಜನರಿಗೆ ಸಹಾಯ ಮಾಡಿ,'' ಎಂದು ಒತ್ತಾಯಿಸಿದರು.












Click it and Unblock the Notifications