ದಾವಣಗೆರೆ: ನೊಣಗಳಿಂದ ಮುಕ್ತಿ ಕೊಡಿಸುವವರಿಗೆ ಕಾದಿದೆ ಬಿಗ್ ಆಫರ್
ದಾವಣಗೆರೆ, ಜೂನ್, 19: ಈ ಗ್ರಾಮದ ಕಳೆದ 9 ವರ್ಷಗಳಿಂದಲೂ ಆಗುತ್ತಿರುವ ಸಮಸ್ಯೆ ಕೇಳಿದರೆ ಯಾರಾದರೂ ಮಮ್ಮುಲ ಮರುಗುವುದಂತೂ ಖಚಿತ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯಾದರೂ ಒಂದೇ ಚಿಂತೆ, ಅದೇ ಸಮಸ್ಯೆ. ಜಿಲ್ಲಾಧಿಕಾರಿ, ಸಚಿವ, ಶಾಸಕರ ಗಮನಕ್ಕೆ ತಂದಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಇದೀಗ ಬೇಸತ್ತ ಈ ಗ್ರಾಮದ ಜನರು ಆ ಸಮಸ್ಯೆಯನ್ನು ಬಗೆಹರಿಸಿದವರಿಗೆ 9,00,000 ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಮಾಹಿತಿ ಇಲ್ಲಿದೆ ನೋಡಿ
ಇಂತಹ ನಿತ್ಯಯಾತನೆ ಅನುಭವಿಸುತ್ತಿರುವುದು ದಾವಣಗೆರೆಯ ಹೆಬ್ಬಾಳು ಗ್ರಾಮದವರು. ಜಿಲ್ಲಾಧಿಕಾರಿಗಳು, ಶಾಸಕರು, ಸಂಬಂಧಪಟ್ಟ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಕ್ಕೂ ಮನವಿ ಕೊಟ್ಟಿದ್ದರೂ ಆ ಸಮಸ್ಯೆ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ದೂರು ಕೊಟ್ಟಾಗ ಸ್ವಲ್ಪ ಮಟ್ಟಿಗೆ ಸ್ಪಂದಿಸುವ ಅಧಿಕಾರಿಗಳು ಆಮೇಲೆ ಇತ್ತ ತಲೆ ಹಾಕುವುದಿಲ್ಲ. ದಿನ ಸಾಯುವವರಿಗೆ ಅಳುವವರು ಯಾರು ಎಂಬಂತಹ ಸ್ಥಿತಿ ಹೆಬ್ಬಾಳು ಗ್ರಾಮದ ಜನರದ್ದು.

2015ರಿಂದ ಹೋರಾಟ ಮಾಡಿದರೂ ಯಾವ ಜಿಲ್ಲಾಧಿಕಾರಿಗಳಿಂದಲೂ ಕೋಳಿ ಫಾರಂಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಆಗಿಲ್ಲ. ದೂರು ಸ್ವೀಕರಿಸುತ್ತಾರೆ. ಒಂದೆರಡು ದಿನ ಬಂದ್ ಮಾಡಿದ ಹಾಗೆ ಕೋಳಿ ಫಾರಂನವರು ಮಾಡುತ್ತಾರೆ. ಆಮೇಲೆ ಮತ್ತೆ ಕೋಳಿ ಫಾರಂಗಳ ಮಾಲೀಕರು ಫಾರಂಗಳನ್ನು ನಡೆಸಿಕೊಂಡು ಹೋಗುತ್ತಾರೆ. ಕೋಳಿ ಫಾರಂಗಳು ಇರುವ ಕಾರಣಕ್ಕೆ ನೊಣಗಳು ಹೆಚ್ಚಾಗಿ ಬರುತ್ತವೆ ಎಂದು ಗೊತ್ತಿದ್ದರೂ ಆಡಳಿತ ವರ್ಗ ಮಾತ್ರ ಕ್ಯಾರೆ ಎನ್ನದೇ ಸೈಲೆಂಟ್ ಆಗಿಬಿಟ್ಟಿದೆ.
1 ಲಕ್ಷ ರೂಪಾಯಿ ಬಹುಮಾನ: ನೊಣಗಳ ಹಾವಳಿಯಿಂದ ಮುಕ್ತಿ ನೀಡಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಗ್ರಾಮಸ್ಥರು ಘೋಷಿಸಿದ್ದಾರೆ. ನಾವು ಸಮಸ್ಯೆಗೆ ಮುಕ್ತಿ ಕೇಳುತ್ತಿದ್ದೇವೆ. ಕಳೆದ 9 ವರ್ಷಗಳಿಂದಲೂ ಬದುಕು ಮೂರಾಬಟ್ಟೆಯಾಗಿದೆ. ನಮ್ಮ ಸಮಸ್ಯೆ ಯಾಕೆ ಅರ್ಥ ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ.
ಅಲ್ಲದೆ, ನೊಣಗಳು ಬಾರದಂತೆ ತಡೆಯುವ ಅಧಿಕಾರಿಗಳಿಗೆ, ಕೋಳಿ ಫಾರಂ ಮುಚ್ಚಿಸುವವರಿಗೆ 1 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದ್ದರೂ, ಇಲ್ಲಿಗಿಂತ ಹೆಚ್ಚಿನ ಹಣ ಪಡೆದ ಕಾರಣಕ್ಕೆ ಕೋಳಿ ಫಾರಂಗಳನ್ನು ಬಂದ್ ಮಾಡಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ ಎನ್ನುತ್ತಾರೆ ಹೆಬ್ಬಾಳದ ವಿಜಯ್.
ತೆರೆದ ಜೀಪಿನಲ್ಲಿ ಮೆರವಣಿಗೆ: ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಘೋಷಿಸಿಲ್ಲ. ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡಿಸುವ ಅಧಿಕಾರಿಗಳಿಗೆ ಹಣ ನೀಡುವ ಜೊತೆಗೆ ಹೆಬ್ಬಾಳ ಗ್ರಾಮದಲ್ಲಿ ತೆರೆದ ಜೀಪಿನಲ್ಲಿ ಗ್ರಾಮದ ತುಂಬೆಲ್ಲಾ ಮೆರವಣಿ ನಡೆಸಿ ಗೌರವಿಸುತ್ತೇವೆ, ಸನ್ಮಾನಿಸುತ್ತೇವೆ. ಹೋಗುವ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತೇವೆ ಅಂತಳು ಹೇಳಿದ್ದಾರೆ.
ನೊಣ.. ನೊಣ.. ನೊಣ.. ಕುರ್ಚ, ಟೇಬಲ್, ದೇವರ ಫೋಟೋ, ಕರೆಂಟ್ ವೈರ್‌ಗಳು, ಜಗ್ಗುಗಳು, ಅಡುಗೆಯ ಸಾಮಗ್ರಿಗಳು, ಫ್ಯಾನ್, ಮಿಕ್ಸಿ, ದೇವಸ್ಥಾನದ ಗಂಟೆ ಮೇಲೂ ಸೇರಿದಂತೆ ಎಲ್ಲೆಲ್ಲೂ ನೊಣಗಳದ್ದೇ ಹಾವಳಿ. ಇದರಿಂದ ಚಿಕ್ಕಮಕ್ಕಳು, ದೊಡ್ಡವರಂತೂ ನಿತ್ಯವೂ ಗೋಳಾಟದಿಂದ ದಿನನೂಕುವಂತಾಗಿದೆ.
ಇಷ್ಟೆಲ್ಲ ಸಮಸ್ಯೆಗೆ ಹೆಬ್ಬಾಳು ಗ್ರಾಮದಲ್ಲಿರುವ ಕೋಳಿ ಫಾರಂಗಳ ಹಾವಳಿಯೇ ಕಾರಣ. ಸರಿಯಾದ ಊಟವೂ ಆಗುತ್ತಿಲ್ಲ. ನಿದ್ದೆಯಂತೂ ಮರೀಚಿಕೆ ಎಂಬಂತಾಗಿದೆ. ಮನೆಯಲ್ಲಿ ಇತರ ಪ್ರಾಬ್ಲಮ್ ಎಂದು ಹೋಟೆಲ್‌ಗಾದರೂ ಹೋಗಿ ತಿನ್ನೋಣ ಅಂದರೆ ಹೋಟೆಲ್‌ನಲ್ಲಿಯೂ ಮನೆಗಿಂತಲೂ ಜಾಸ್ತಿ ನೊಣ ಕಾಟವಾಗಿದೆ.
ನೊಣಗಳು ಸಾರ್ ನೊಣಗಳು. ಎಲ್ಲಿ ನೋಡಿದರೂ ನೊಣಗಳು. ಮನೆಯೊಳಗೂ ನೊಣಗಳು.. ಹೊರಗೂ ನೊಣಗಳು. ಪ್ಲೇಟ್, ಬಲ್ಬ್, ಕಂಬ, ಅನ್ನ, ಸಾರು ಸೇರಿದಂತೆ ಎಲ್ಲೆಲ್ಲೂ ನೊಣಗಳು. ಈ ನೊಣಗಳ ಕಾಟಕ್ಕೆ ಗ್ರಾಮಸ್ಥರು ಅಕ್ಷರಕ್ಷಃ ಬೆಚ್ಚಿ ಬಿದ್ದಿದ್ದಾರೆ. ನಿತ್ಯವೂ ಈ ಗೋಳಿನ ಬದುಕು ಸಾಕು ಸಾಕಾಗಿ ಹೋಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಆಗಿರುವ ಪ್ರಯೋಜನ ಮಾತ್ರ ಶೂನ್ಯ. ಜನರ ಸಂಕಷ್ಟ, ಗೋಳು ಕೇಳುವವರೇ ಇಲ್ಲದಂತಾಗಿಬಿಟ್ಟಿದ್ದು, ಸಾಕು ಸಾಕಾಗಿ ಹೋಗಿ ಆ ದೇವರ ಮೇಲೆ ಭಾರ ಹಾಕುವಂತ ದುಃಸ್ಥಿತಿ ನಿರ್ಮಾಣವಾಗಿದೆ.
ರೋಗ ರುಜಿನ ಬಂದರೆ ಯಾರು ಹೊಣೆ?: ಮಳೆಗಾಲ ಶುರುವಾಗಿದೆ. ಈ ವೇಳೆಯೇ ರೋಗ ರುಜಿನಗಳು ಹೆಚ್ಚಾಗುತ್ತವೆ. ಒಂದು ವೇಳೆ ನೊಣಗಳ ರೀತಿ ಸೊಳ್ಳೆಗಳ ಕಾಟ ಶುರುವಾದರೆ ಮುಗಿದೇ ಹೋಯ್ತು. ಚಿಕನ್ ಗುನ್ಯಾ, ಹೆಚ್ 1ಎನ್1. ಡೆಂಗ್ಯೂ, ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಬಂದರೆ ಯಾರ ಬಳಿ ಹೋಗಬೇಕು. ಅನಾಹುತವಾಗುವ ಮುಂಚೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವವರು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ದೊರಕಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಹೆಬ್ಬಾಳು ಗ್ರಾಮವನ್ನಾದರೂ ಸ್ಥಳಾಂತರಿಸಿ: ಅಂತಿಮವಾಗಿ ಗ್ರಾಮಸ್ಥರು ಎಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ ಎಂದರೆ ನಮ್ಮ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ, ಹೆಬ್ಬಾಳ ಗ್ರಾಮದ ವಾಸಿಗಳನ್ನೆಲ್ಲರನ್ನೂ ಸ್ಥಳಾಂತರಿಸಿ. ನಾವು ಈಗ ಕಟ್ಟಿಕೊಂಡಿರುವ ಮನೆಗಳನ್ನೇ ಕಟ್ಟಿಸಿಕೊಡಲಿ. ಸೂಕ್ತ ಪರಿಹಾರ ಕೊಡಲಿ. ಅದಕ್ಕೂ ಸಿದ್ಧರಿದ್ದೇವೆ. ಕೋಳಿ ಫಾರಂಗಳು ಮುಖ್ಯ. ಜನರ ಬದುಕು ಮುಖ್ಯವಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ದುರಂತ ಎನ್ನುತ್ತಾರೆ ಸ್ಥಳೀಯರು.












Click it and Unblock the Notifications