ಮಗು ಅಪಹರಣಕ್ಕೆ ಯತ್ನ, ಜನರಿಂದ ಕಳ್ಳನಿಗೆ ಧರ್ಮದೇಟು
ದಾವಣಗೆರೆ, ಫೆಬ್ರವರಿ 23: ಮನೆಯ ಮುಂಭಾಗ ಮಕ್ಕಳ ಜೊತೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಕುಡುಕನೊಬ್ಬ ಅಪಹರಣ ಮಾಡುತ್ತಿದ್ದ ಎಂದು ಆರೋಪಿಸಿ ಕುಡುಕನಿಗೆ ಧರ್ಮದೇಟು ನೀಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ಅಹ್ಮದ್ ಷರೀಪ್ ಎನ್ನುವವರ ನಾಲ್ಕು ವರ್ಷದ ಹೆಣ್ಣುಮಗು, ಮಕ್ಕಳ ಜೊತೆ ಆಟವಾಡುತ್ತಿದಾಗ ಕುಡಿದ ಅಮಲಿನಲ್ಲಿ ಇರುವ ಪರಸಪ್ಪ ಎಂಬ ವ್ಯಕ್ತಿ ಮಗುವನ್ನು ಅಪಹರಿಸಿಕೊಂಡು ಹೋಗಲು ಮುಂದಾಗಿದ್ದಾನೆ.
ಮಗುವನ್ನು ಅಪಹರಣ ಮಾಡುತ್ತಿರುವುದನ್ನು ಕಂಡ ಅಲ್ಲಿನ ಸ್ಥಳೀಯರು ಹಾಗೂ ಮಗುವಿನ ಪೋಷಕರು ಪರಸಪ್ಪನನ್ನು ಹಿಡಿಯಲು ಹೋದರೆ ಓಡಿ ಹೋಗಲು ಯತ್ನಿಸಿದ್ದು, ಜನರ ಕೈಗೆ ಸಿಕ್ಕ ಪರಸಪ್ಪನಿಗೆ ಧರ್ಮದೇಟು ಕೊಟ್ಟಿದ್ದಾರೆ. ಅಲ್ಲದೆ ಕ್ಷಣಕ್ಕೊಂದು ವಿಳಾಸ ಹೇಳುತ್ತ, ತಾನು ಅಪಹರಣ ಮಾಡಲು ಬಂದಿಲ್ಲ ಎಂದು ಹೇಳುತ್ತಿದ್ದ ಆತನನ್ನು ಹಿಡಿದರು ಮಹಿಳಾ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಂಠ ಪೂರ್ತಿ ಕುಡಿದು ಮಾತನಾಡದ ಸ್ಥಿತಿಯಲ್ಲಿ ಇಲ್ಲದ ಆರೋಪಿಯನ್ನು ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದು, ಮಗುವಿನ ಪೋಷಕರು ಪರಸಪ್ಪನ ಮೇಲೆ ಅಪಹರಣ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಇನ್ನು ಶಂಕರ್ ವಿಹಾರ್ ಬಡಾವಣೆಯ ಪಕ್ಕದಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ಮಗುವನ್ನು ಅಪಹರಣ ಮಾಡುವಾಗ ನಮ್ಮ ಕಣ್ಣಿಗೆ ಬಿತ್ತು, ಇಲ್ಲವಾಗಿದ್ದರೆ ಮಗು ಅಪಹರಣವಾಗುತ್ತಿತ್ತು ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ. .

ಕೂಡಲೇ ಪೊಲೀಸರು ಅನೈತಿಕ ತಾಣಗಳಲ್ಲಿ ಪೊಲೀಸ್ ಬೀಟ್ ಹಾಕಬೇಕು ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications