ಮಾರ್ಚ್ 4ಕ್ಕೆ ಅರವಿಂದ್ ಕೇಜ್ರಿವಾಲ್ ದಾವಣಗೆರೆಗೆ ಆಗಮನ: ಬೃಹತ್ ಬಹಿರಂಗ ಸಮಾವೇಶಕ್ಕೆ ಭಾರಿ ಸಿದ್ಧತೆ
ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಮಾರ್ಚ್ 4ಕ್ಕೆ ಆಮ್ ಆದ್ಮಿ ಪಕ್ಷದ ಸಮಾವೇಶ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಿದ್ಧತೆ ಹೇಗಿದೆ ಎಂದು ತಿಳಿಯಿರಿ.
ದಾವಣಗೆರೆ, ಮಾರ್ಚ್, 03: ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಮಾರ್ಚ್ 4ಕ್ಕೆ ಆಮ್ ಆದ್ಮಿ ಪಕ್ಷದ ಸಮಾವೇಶ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಅಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಾನ್ ಸಿಂಗ್ ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶದಲ್ಲಿ ಸುಮಾರು 50ರಿಂದ 60 ಸಾವಿರ ಜನರು ಭಾಗವಹಿಸಲಿದ್ದಾರೆ. ಬ್ಲಾಕ್ ಮತ್ತು ಸರ್ಕಲ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರಮಾಣ ವಚನ ಬೋಧನೆ ಹಾಗೂ ಭಾರಿ ಬಹಿರಂಗ ಸಭೆ ನಡೆಯಲಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ವಿವರ ಇಲ್ಲಿದೆ
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಉಪಾಧ್ಯಕ್ಷ ವಿಜಯ ಶರ್ಮಾ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹನಿ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಾಜ್ಯದೆಲ್ಲೆಡೆ ಎಎಪಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಕ್ಷ ಬದಲಾವಣೆ ಮಾಡಿದರೆ ನಸೀಬು ಬದಲಾಗಲ್ಲ ಎಂದರು.
189 ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ
ಪ್ರಾಮಾಣಿಕರಿಗೆ ಅವಕಾಶ ನೀಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಆಗ ರಾಜಕಾರಣಕ್ಕೆ ಅರ್ಥ ಬರುತ್ತದೆ. ನಮ್ಮ ಪಕ್ಷಕ್ಕೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮಾಜಿ ಸದಸ್ಯರು ಆಮ್ ಆದ್ಮಿ ಪಕ್ಷ ಸೇರಿದ್ದಾರೆ ಎಂದು ಮಾಹಿತಿ ನೀಡಿದರು. ಹಾಗೆಯೇ 189 ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ. ಮತ್ತೆ ಕೆಲವೆಡೆ ಇಬ್ಬರು ಆಕಾಂಕ್ಷಿಗಳಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಮಾಡಲ್ಲ
ದಾವಣಗೆರೆ ಉಸ್ತುವಾರಿ ಡಾ. ವಿಶ್ವನಾಥ್ ಮಾತನಾಡಿ, ದಾವಣಗೆರೆಯ ಹೈಸ್ಕೂಲ್ ಮೈದಾನದಿಂದ ವಿಧಾನಸಭಾ ಚುನಾವಣಾ ಪ್ರಚಾರ ಅಧಿಕೃತವಾಗಿ ಆರಂಭವಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರೀತಿ 50 ಕೋಟಿ ರೂಪಾಯಿ ಖರ್ಚು ಮಾಡಿ ಚುನಾವಣೆ ಮಾಡಲ್ಲ. ದಾವಣಗೆರೆಯ ಎಲ್ಲಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳಿದ್ದಾರೆ. ಪಕ್ಷದ ಪದಾಧಿಕಾರಿಗಳೇ ಸುಮಾರು ಹದಿನೈದರಿಂದ 20 ಸಾವಿರ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಮಾತನಾಡಿ, ದಾವಣಗೆರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ನೆಚ್ಚಿನ ತಾಣವಾಗಿದೆ. ಎಲ್ಲಾ ಪಕ್ಷಗಳೂ ದೊಡ್ಡ ದೊಡ್ಡ ಸಮಾವೇಶ ನಡೆಸುತ್ತಿವೆ. ನಾವು ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ. ನಲವತ್ತು ಸಾವಿರ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಶ್ರೀಧರ್ ಪಾಟೀಲ್, ರುದ್ರಯ್ಯ ನವಿಲೆ ಹಿರೇಮಠ್, ರಾಜಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications